ಬೆಂಗಳೂರು:
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕು ಎನ್ನುವುದು ಬಿಜೆಪಿ ವರಿಷ್ಠರಿಗೂ ತಲೆಬಿಸಿಯಾಗಿದ್ದು, ಇನ್ನಷ್ಟು ವಿವರಣೆಗಳನ್ನು ರಾಜ್ಯ ನಾಯಕರಿಗೆ ಕೇಳಿದೆ.
ಇದೇ ಮೊದಲ ಬಾರಿಗೆ ಮೇಲ್ಮನೆ ಪ್ರವೇಶ ಮಾಡಿರುವ ಸಿ.ಟಿ.ರವಿ ಮತ್ತು ಛಲವಾದಿ ನಾರಾಯಣಸ್ವಾಮಿ, 2ನೇ ಬಾರಿಗೆ ಪ್ರವೇಶ ಮಾಡಿರುವ ಎನ್.ರವಿಕುಮಾರ್ ಅವರ ಹೆಸರನ್ನು ರಾಜ್ಯ ಬಿಜೆಪಿ ಕೇಂದ್ರದ ವರಿಷ್ಠರಿಗೆ ಕಳುಹಿಸಿಕೊಟ್ಟಿದೆ.
ಹಿಂದುಳಿದ ವರ್ಗಕ್ಕೆ ಕೊಡುವುದಾದರೆ ಎನ್.ರವಿಕುಮಾರ್, ಪರಿಶಿಷ್ಟ ಜಾತಿಗೆ ನೀಡುವುದಾದರೆ ಛಲವಾದಿ ನಾರಾಯಣಸ್ವಾಮಿ, ಒಕ್ಕಲಿಗ ಸಮುದಾಯಕ್ಕೆ ಆದ್ಯತೆ ಕೊಡುವುದಾದರೆ ಸಿ.ಟಿ.ರವಿ ಅವರಿಗೆ ಅವಕಾಶ ಮಾಡಿಕೊಡಬಹುದು ಎಂದು ರಾಜ್ಯ ಬಿಜೆಪಿ ತನ್ನ ಅಭಿಪ್ರಾಯವನ್ನು ತಿಳಿಸಿದೆ.
ವಿಧಾನ ಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಪ್ರಬಲ ಒಕ್ಕಲಿಗ ಕೋಮಿಗೆ ಸೇರಿದ ಆರ್.ಅಶೋಕ್ ಅವರಿಗೆ ನೀಡಿರುವುದರಿಂದ ಮೇಲ್ಮನೆಯಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಅವರಿಗೆ ನೀಡುವುದು ಸರಿಯಲ್ಲ ಎನ್ನುವ ಅಭಿಪ್ರಾಯಗಳ ಹಿನ್ನೆಲೆಯಲ್ಲಿ ಮತ್ತೊಮ್ಮೆ ರಾಜ್ಯದ ನಾಯಕರ ಅಭಿಪ್ರಾಯಗಳಿಂದ ಮಾಹಿತಿಯನ್ನು ಕೇಳಿದೆ. ಇದೇ ಕಾರಣದಿಂದ ಸಿಟಿ ರವಿ ಅವರಿಗೆ ವಿರೋಧ ಪಕ್ಷದ ಸ್ಥಾನ ಕೈ ತಪ್ಪಿದರೆ ಆಶ್ಚರ್ಯವಿಲ್ಲ ಎಂದು ಮೂಲಗಳು ತಿಳಿಸಿವೆ. ಆದರೆ ಸಿಟಿ ರವಿ ಅವರಿಗೆ ಈ ಸ್ಥಾನ ಕೊಡಬೇಕು ಎನ್ನುವ ನಿಟ್ಟಿನಲ್ಲಿ ವರಿಷ್ಠರ ಮಟ್ಟದಲ್ಲಿ ಪ್ರಬಲ ಪ್ರಯತ್ನ ನಡೆದಿದೆ ಎಂದು ತಿಳಿದುಬಂದಿದೆ.
ಕೋಲಿ ಸಮಾಜಕ್ಕೆ ಸೇರಿದ ಎನ್.ರವಿಕುಮಾರ್ ಅವರಿಗೆ ವಿರೋಧ ಪಕ್ಷದ ನಾಯಕನ ಸ್ಥಾನ ನೀಡಿದರೆ ಹಿಂದುಳಿದ ವರ್ಗಕ್ಕೆ ಸೇರಿದ ಹಾಗೂ ಉತ್ತರ ಕರ್ನಾಟಕ ಭಾಗಕ್ಕೆ ಆದ್ಯತೆ ನೀಡದಂತೆ ಆಗಲಿದೆ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿರುವುದಕ್ಕೆ ಹೆಚ್ಚಿನ ಮನ್ನಣೆ ಸಿಗಬಹುದು ಎಂದು ಹೇಳಲಾಗುತ್ತಿದೆ.
ತೀವ್ರ ಪೈಪೋಟಿ ಇರುವ ಕಾರಣದಿಂದ ಈ ಅಧಿವೇಶನದಲ್ಲಿ ವಿರೋಧ ಪಕ್ಷದ ನಾಯಕರನ್ನು ೋಷಣೆ ಮಾಡುವ ಸಾಧ್ಯತೆಯು ಇಲ್ಲ ಎಂದು ಹೈಕಮಾಂಡ್ ಮೂಲಗಳು ತಿಳಿಸಿವೆ.
ವಿರೋಧ ಪಕ್ಷದ ನಾಯಕರಾಗಿದ್ದ ಕೋಟ ಶ್ರೀನಿವಾಸ ಪೂಜಾರಿ, ಚಿಕ್ಕಮಗಳೂರು ಉಡುಪಿ ಲೋಕಸಭಾ ಕ್ಷೇತ್ರದ ಸದಸ್ಯರಾಗಿ ಆಯ್ಕೆಯಾದ್ದರಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ವಿರೋಧ ಪಕ್ಷದ ನಾಯಕನ ಹುದ್ದೆ ಖಾಲಿ ಇದೆ.