ನ್ಯೂಸ್

ಮೇಲ್ಮನೆಗೆ ನಾಮನಿರ್ದೇಶನ ವಿಳಂಬ ಸಾಧ್ಯತೆ? ಬಿಜೆಪಿ ಹೈಕಮಾಂಡ್ ವಿಭಿನ್ನ ಚಿಂತನೆಯ ಸುಳಿವು, ಆಕಾಂಕ್ಷಿಗಳ ದಿಗಿಲು

vinaymk1969

ಬೆಂಗಳೂರು: ವಿಧಾನಸಭೆಯಿಂದ ರಾಜ್ಯಸಭೆ, ವಿಧಾನ ಪರಿಷತ್ ದ್ವೈವಾರ್ಷಿಕ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗೆ ತಾಲೀಮು ನಡೆಸಿದ ಬಿಜೆಪಿ ಹೈಕಮಾಂಡ್ ಕೆಲ ದಿನ ‘ವಿರಾಮ’ ಪಡೆಯಲು ಬಯಸಿದೆ. ಹೀಗಾಗಿ ಮೇಲ್ಮನೆಗೆ 5 ಸದಸ್ಯರ ನಾಮನಿರ್ದೇಶನ ವಿಳಂಬವಾಗುವ ಸಾಧ್ಯತೆಗಳಿವೆ.

ದೆಹಲಿ ನಾಯಕರು ಅಪ್ಪಣೆ ಕೊಟ್ಟ ಬಳಿಕ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ಕುಮಾರ್ ಕಟೀಲ್ ಒಳಗೊಂಡ ರಾಜ್ಯ ಪ್ರಮುಖರ ಸಮಿತಿ ಮುಂದಡಿ ಇಡಲಿದ್ದು, ಜೂನ್ ಕೊನೇ ವಾರದಲ್ಲಿ ಈ ಪ್ರಕ್ರಿಯೆಗೆ ಚಾಲನೆ ಸಿಗಬಹುದು ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

ವಿವಿಧ ಕ್ಷೇತ್ರಗಳ ಪ್ರತಿನಿಧಿತ್ವದ ಹೆಸರಿನಲ್ಲಿ ರಾಜಕಾರಣಿಗಳನ್ನು ನೇಮಿಸುವ ಪರಂಪರೆ ಕೊನೆಗೊಳಿಸಿ, ‘ಹಿರಿಯರ ಮನೆ’ ಅಂತಃಸತ್ವಕ್ಕೆ ಪುನರುಜ್ಜೀವನ ನೀಡಲು ಹೈಕಮಾಂಡ್ ಚಿಂತಿಸಿದೆ.

ಆಕಾಂಕ್ಷಿಗಳಿಗೆ ದಿಗಿಲು: ಸಮತೋಲನದ ನಡೆ ಇಟ್ಟಿರುವ ಹೈಕಮಾಂಡ್, ಸರ್ಕಾರ ಮತ್ತು ಪಕ್ಷದ ನಡುವೆ ಕಂದಕ ಏರ್ಪಡದಂತೆ ನೋಡಿಕೊಂಡಿದ್ದು, ನಾಮನಿರ್ದೇಶನದ ಉದ್ದೇಶ ಸಾರ್ಥಕ ಗೊಳಿಸುವ ಯೋಚನೆ ಹೊಂದಿದೆ ಎಂಬ ಸುಳಿವು ಅರಿತ ಆಕಾಂಕ್ಷಿಗಳು ದಿಗಿಲುಗೊಂಡಿದ್ದಾರೆ.

ರಾಜ್ಯಸಭೆ, ವಿಧಾನ ಪರಿಷತ್ ಚುನಾವಣೆಯಲ್ಲಿ ವಂಚಿತರ ಪೈಕಿ ಕೆಲ ಪ್ರಬಲರು ನಾಮನಿರ್ದೇಶನದಲ್ಲಿ ಅವಕಾಶ ಸಿಗುತ್ತದೆ ಎಂದುಕೊಂಡಿದ್ದಾರೆ. ತೆರೆಮರೆಯ ಲಾಬಿ ಬದಲಿಗೆ ರಾಜ್ಯ, ರಾಷ್ಟ್ರಮಟ್ಟದ ಕೆಲವು ನಾಯಕರನ್ನು ನೆಚ್ಚಿಕೊಂಡಿದ್ದಾರೆ. ಎಚ್.ವಿಶ್ವನಾಥ್, ಸಿ.ಪಿ. ಯೋಗೇಶ್ವರ್, ಜಗ್ಗೇಶ್, ನಿರ್ಮಲಕುಮಾರ್ ಸುರಾನ, ಭಾರತಿ ಶೆಟ್ಟಿ, ಶ್ರುತಿ, ಮಾಳವಿಕಾ ಅವಿನಾಶ್ ಸೇರಿ ಹಲವರು ‘ಹಿರಿಯರ ಮನೆ’ ಪ್ರವೇಶಕ್ಕೆ ಕಾತರದಿಂದಿದ್ದು, ಅಪೇಕ್ಷಿತರ ಪಟ್ಟಿ ಬೆಳೆಯುತ್ತಿದೆ.

ಒತ್ತಡ ತಂತ್ರ: ಸಿಎಂ ಮೇಲೆ ಭರವಸೆ ಇದೆ ಎಂದು ಎಚ್.ವಿಶ್ವನಾಥ್ ಪದೇಪದೆ ಪುನರುಚ್ಚರಿಸುವ ಮೂಲಕ ಒತ್ತಡ ಹೇರಿದ್ದಾರೆ. ಜತೆಗೆ ನಾಮನಿರ್ದೇಶನ ಮಾಡಲಿದ್ದಾರೆ ಎನ್ನುವ ಮೂಲಕ ‘ಅನಿವಾರ್ಯತೆ’ಯ ತಂತ್ರ ಪ್ರಯೋಗಿಸಿದ್ದು, ‘ಜತೆಗಾರರು’ ಸಾಥ್ ನೀಡುವ ವಿಶ್ವಾಸದಲ್ಲಿದ್ದಾರೆ.

ಹಲವರ ಹೆಸರು ಮುಂಚೂಣಿಗೆ: ಖ್ಯಾತ ಸಾಹಿತಿ ಎಸ್.ಎಲ್.ಭೈರಪ್ಪ, ಶಿಕ್ಷಣ ತಜ್ಞ ಗುರುರಾಜ ಕರಜಗಿ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ, ಗೀತಕ್ಕ, ರಹೀಮ್ ಉಚ್ಚಿಲ, ಅನ್ವರ್ ಮಾಣಿಪ್ಪಾಡಿ ಹೆಸರುಗಳು ಚರ್ಚೆಯ ಮುನ್ನೆಲೆಗೆ ಬಂದಿದ್ದು, ಸದ್ಯಕ್ಕೆ ತೇಲಿಬಿಟ್ಟ ಹೆಸರುಗಳು ಹಲವರ ಮೇಲ್ಮನೆ ಆಸೆಗೆ ತಣ್ಣೀರು ಎರಚಿದೆ. ಸಂಗೀತ, ಸಾಹಿತ್ಯ, ಕಲೆಯೂ ಸೇರಿ ಅಲ್ಪಸಂಖ್ಯಾತರಿಗೆ ಪ್ರಾತಿನಿಧ್ಯದ ಸೂತ್ರವೊಂದು ಹರಳುಗಟ್ಟುತ್ತಿದೆ. ಅಲ್ಲದೆ, ಪ್ರಸ್ತಾಪಿತ ಹೆಸರಿನವರು ಪಕ್ಷ ಹಾಗೂ ಸಂಘ ಪರಿವಾರಕ್ಕೆ ಪ್ರಿಯವಾದವರು, ವರ್ಚಸ್ಸು ವೃದ್ಧಿಗೆ ಕಾರಣರಾದವರು ಆಗಿರುವ ಕಾರಣ ಹೈಕಮಾಂಡ್ ಹೀಗೆಯೇ ಚಿಂತಿಸುತ್ತಿರುವ ಅನುಮಾನ ಆಕಾಂಕ್ಷಿಗಳಲ್ಲಿ ಹುಟ್ಟಿಕೊಂಡಿದೆ.

ಸಾಹಿತ್ಯ ಕ್ಷೇತ್ರದಿಂದ ಆ್ಕಯ್ಕೆ: ನಾನೊಬ್ಬ ಬರಹಗಾರ. ನನ್ನ ಪುಸ್ತಕಗಳು ರಾಜಕೀಯಕ್ಕೆ ಸಂಬಂಧಪಟ್ಟಿವೆ. ಲಂಡನ್ ಪಾರ್ಲಿಮೆಂಟ್ ಬಗ್ಗೆ ಪುಸ್ತಕ ಬರೆದಿದ್ದೇನೆ. ಈ ಹಿನ್ನೆಲೆಯಲ್ಲಿ ಸಾಹಿತ್ಯ ಕ್ಷೇತ್ರದಿಂದ ನನ್ನನ್ನು ವಿಧಾನ ಪರಿಷತ್​ಗೆ ಆಯ್ಕೆ ಮಾಡಿ ಎಂದು ಮನವಿ ಮಾಡಿದ್ದೇನೆ. ಸಿಎಂ ಯಡಿಯೂರಪ್ಪ ಕೂಡ ಇದಕ್ಕೆ ಒಪ್ಪಿದ್ದು, ನನ್ನನ್ನು ನಾಮನಿರ್ದೇಶನ ಮಾಡಲು ಯಾವುದೇ ಕಾನೂನಿನ ತೊಡಕಿಲ್ಲ ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ವಿಶ್ವಾಸ ವ್ಯಕ್ತಪಡಿಸಿದರು.

ಟಿಕೆಟ್ ಕೈ ತಪ್ಪಿದ್ದಕ್ಕೆ ಬೇಸರ ಇಲ್ಲ. ತಳಮಟ್ಟದ ಕಾರ್ಯಕರ್ತರಿಗೆ ಟಿಕೆಟ್ ನೀಡಿರುವುದು ಸ್ವಾಗತಾರ್ಹ. ಕೆಲವೊಮ್ಮೆ ನಾವು ಅಂದುಕೊಂಡಿದ್ದಕ್ಕಿಂತ ದೊಡ್ಡದು ಸಿಗುತ್ತೆ. ಕೆಲವೊಮ್ಮೆ ಏನೂ ಸಿಗೋದೇ ಇಲ್ಲ. ರಾಜಕಾರಣ ಅಂದರೆ ಸಿಗೋದು, ಪಡೆದುಕೊಳ್ಳೋದಲ್ಲ ಎಂದರು. ನನಗೆ ಟಿಕೆಟ್ ಕೈ ತಪ್ಪಲು ಸಿದ್ದರಾಮಯ್ಯ ಹೇಗೆ ಕಾರಣ ಅಂತ ಸಂದರ್ಭ ಬಂದಾಗ ಹೇಳ್ತೀನಿ. ಅವರ ಮಾತುಗಳಿಗೆ ಈಗ ಪ್ರತಿಕ್ರಿಯೆ ನೀಡಲ್ಲ ಎಂದು ತಿಳಿಸಿದರು.