ಬೆಂಗಳೂರು:
ಕೇಂದ್ರ ಸರ್ಕಾರ ಮಾಡಿದ ಎಡವಟ್ಟಿನಿಂದ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ. ನೀಟ್ ಪರೀಕ್ಷೆ ಮಾಡುವಲ್ಲಿ ಕೇಂದ್ರ ಸರ್ಕಾರ ಎಡವಿದೆ ಎಂದು
ಸಚಿವ ಶರಣುಪ್ರಕಾಶ್ ಪಾಟೀಲ್ ಹೇಳಿದ್ದು, ಮೇಲ್ಮನೆಯಲ್ಲಿ ವಾಕ್ಸಮರಕ್ಕೆ ಕಾರಣವಾಯಿತು.
ಸಚಿವರ ಮಾತಿಗೆ ಪ್ರತಿರೋಧ ಒಡ್ಡಿದ ಬಿಜೆಪಿ ಸದಸ್ಯರು ನೀವು ಪ್ರಶ್ನೆಗೆ ಉತ್ತರ ಹೇಳುವುದನ್ನು ಬಿಟ್ಟು ಅನಗತ್ಯವಾಗಿ ಆರೋಪ ಮಾಡುತ್ತಿದ್ದೀರಿ ಎಂದು ಮುಗಿಬಿದ್ದರು.
ಅದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಸಿಬಿಐ ತನಿಖೆಗೆ ಆಗ್ರಹ ಮಾಡಿದ್ದೇವೆ, ಅಕ್ರಮ ಆಗಿದೆ ಎಂದು ಕೇಂದ್ರ ಒಪ್ಪಿದೆ. ಎನ್‌ಎಮ್ಸಿ ಆಕ್ಟ್ ಮೂಲಕ ನೀಟ್ ಎಕ್ಸಾಂ ಬಂದಿದೆ. ಸುಪ್ರಿಂ ಕೋರ್ಟ್ ಆದೇಶ ಕೂಡ ಇದೆ. ಈ ಹಂತದಲ್ಲಿ ರಾಜ್ಯ ಸರ್ಕಾರ ಏನು ಮಾಡಲು ಸಾಧ್ಯವಿಲ್ಲ. ಕೋಟ್ ತೀರ್ಮಾನ ತೆಗೆದುಕೊಳ್ಳಬೇಕು ಎಂದರು.
ಕಾಯಿದೆಗೆ ಕೇಂದ್ರ ಸರ್ಕಾರ ಅಮೆಂಡ್ಮೆಂಟ್ ತರಬೇಕು. ನೀಟ್ ಎಕ್ಸಾಂನಲ್ಲಿ ಕೇಂದ್ರ ಪಾರದರ್ಶಕವಾಗಿಲ್ಲ ಎಂದರು.
ವಾಕ್ಸಮರ ಮುಂದುವರಿದಿದ್ದಾಗ ಮಧ್ಯ ಪ್ರವೇಶಿಸಿದ ಸಭಾಪತಿ ಸ್ಥಾನದಲ್ಲಿರುವ ಪ್ರಾಣೇಶ್
ಕೇಳಿದ ಪ್ರಶ್ನೆಗೆ ನೇರ ಉತ್ತರಿಸಿ ಎಂದು ಸೂಚಿಸಿದರು.
ಅರ್ಧಗಂಟೆ ಚರ್ಚೆಗೆ ಅವಕಾಶ ನೀಡಿ ಎಂದ ಕಾಂಗ್ರೆಸ್ ಸದಸ್ಯರು ಕೇಳಿದಾಗ ಸಭಾಪತಿ ಸಮ್ಮತಿಸಿದರು.
ಈ ಮೊದಲು ವಿಷಯ ಪ್ರಸ್ತಾಪಿಸಿದ್ದ ಕಾಂಗ್ರೆಸ್‌ನ ಐವಾನ್ ಡಿಸೋಜ, 24 ಲಕ್ಷ ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಬರೆಯುತ್ತಿದ್ದಾರೆ. ನೀಟ್ ಕಡ್ಡಾಯವಾಗಿದೆ. ಹೀಗಾಗಿ ಪಿಯುಸಿ ಓದೋದನ್ನೆ ಬಿಟ್ಟಿದ್ದಾರೆ. ಹಳ್ಳಿಯ ಮಕ್ಕಳು ಏನು ಮಾಡಬೇಕು? ಎಂದು ಪ್ರಶ್ನಿಸಿದ್ದರು.