Whitefield Pani Puri: ನೀರೂರಿಸುವ ರುಚಿ, ಬಾಯಲ್ಲಿ ನೀರೂರಿಸುವ ಹುಳಿ-ಖಾರ, ನೋಡಿದ ತಕ್ಷಣ ತಿನ್ನಬೇಕೆನಿಸುವ ಪಾನಿಪುರಿ ಎಂದರೆ ಸಾಕು, ಅದರಲ್ಲೂ ಮಕ್ಕಳು ಹಾಗೂ ಮಹಿಳೆಯರು ಸೇರಿದಂತೆ ಸಾಕಷ್ಟು ಮಂದಿ ಮುಗಿಬಿದ್ದು ಸವಿಯುತ್ತಾರೆ. ಸಂಜೆ ವೇಳೆ ರಸ್ತೆ ಬದಿಯ ಪಾನಿಪುರಿ ಅಂಗಡಿಗಳ ಮುಂದೆ ಗ್ರಾಹಕರ ಸಾಲು ಸಾಮಾನ್ಯ. ಆದರೆ, ರುಚಿಯ ಆಸೆಗೆ ಆರೋಗ್ಯವನ್ನೇ ಅಪಾಯಕ್ಕೆ ಸಿಲುಕಿಸುವಂತಾದರೆ ಹೇಗೆ? ಗ್ರಾಹಕರ ಆರೋಗ್ಯದ ಸುರಕ್ಷತೆ ಮತ್ತು ಆಹಾರದ ಸ್ವಚ್ಛತೆಯ ಬಗ್ಗೆ ಈಗ ಗಂಭೀರ ಪ್ರಶ್ನೆಗಳು ಎದ್ದಿವೆ.
ಬೆಂಗಳೂರಿನ ವೈಟ್ಫೀಲ್ಡ್ನ ಬೋರ್ವೆಲ್ ರಸ್ತೆಯಲ್ಲಿರುವ ರಸ್ತೆ ಬದಿಯ ಪಾನಿಪುರಿ ಅಂಗಡಿಯೊಂದರಲ್ಲಿ ಕೊಳೆತ ಆಲೂಗಡ್ಡೆ ಬಳಸಿ ಪಾನಿಪುರಿ ತಯಾರಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆಹಾರ ಸುರಕ್ಷತೆ ಹಾಗೂ ಗ್ರಾಹಕರ ಆರೋಗ್ಯದ ಬಗ್ಗೆ ಆತಂಕ ವ್ಯಕ್ತವಾಗಿದೆ.
ನಿನ್ನೆ ಸಂಜೆ ಸುಮಾರು 5 ಗಂಟೆಯ ವೇಳೆಗೆ ಅಂಗಡಿಯಲ್ಲಿ ಪಾನಿಪುರಿ ತಿನ್ನುತ್ತಿದ್ದ ಗ್ರಾಹಕರಿಗೆ ಆಲೂಗಡ್ಡೆಯಿಂದ ಕೆಟ್ಟ ವಾಸನೆ ಬಂದಿದೆ. ಅನುಮಾನಗೊಂಡು ಪರಿಶೀಲಿಸಿದಾಗ ಪಾನಿಪುರಿ ತಯಾರಿಕೆಗೆ ಬಳಸುತ್ತಿದ್ದ ಆಲೂಗಡ್ಡೆಗಳು ಹಾಳಾಗಿರುವುದು ಕಂಡುಬಂದಿದೆ ಎನ್ನಲಾಗಿದೆ. ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ರಸ್ತೆ ಬದಿಯ ಆಹಾರ ಮಳಿಗೆಗಳಲ್ಲಿ ಸ್ವಚ್ಛತೆ ಮತ್ತು ಆಹಾರದ ಗುಣಮಟ್ಟವನ್ನು ಯಾರು ಪರಿಶೀಲಿಸುತ್ತಿದ್ದಾರೆ ಎಂಬ ಪ್ರಶ್ನೆ ಎದುರಾಗಿದೆ.
ರಸ್ತೆ ಬದಿಯಲ್ಲಿ ಆಹಾರ ಮಾರಾಟ ಮಾಡುವ ವ್ಯಾಪಾರಿಗಳು ಗ್ರಾಹಕರ ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಬೇಕು. ಆಹಾರ ತಯಾರಿಕೆಗೆ ಬಳಸುವ ಆಲೂಗಡ್ಡೆ, ನೀರು, ಮಸಾಲೆ ಸೇರಿದಂತೆ ಪ್ರತಿಯೊಂದು ಪದಾರ್ಥವೂ ತಾಜಾ ಮತ್ತು ಸ್ವಚ್ಛವಾಗಿರಬೇಕು.
ಆಹಾರ ಪದಾರ್ಥಗಳು ಹಾಳಾಗಿದ್ದರೆ ಅವುಗಳನ್ನು ಬಳಸುವುದು ಗ್ರಾಹಕರ ಆರೋಗ್ಯಕ್ಕೆ ಅಪಾಯ ಉಂಟುಮಾಡಬಹುದು. ಕಡಿಮೆ ಬೆಲೆಗೆ ಆಹಾರ ಸಿಗುತ್ತದೆ ಎಂಬ ಕಾರಣಕ್ಕೆ ಗುಣಮಟ್ಟ ಮತ್ತು ಶುಚಿತ್ವದಲ್ಲಿ ರಾಜಿ ಮಾಡಿಕೊಳ್ಳುವುದು ಸರಿಯಲ್ಲ.
ವೈಟ್ಫೀಲ್ಡ್ನಲ್ಲಿ ಕೇಳಿಬಂದಿರುವ ಈ ಆರೋಪ ಆಹಾರ ಸುರಕ್ಷತಾ ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ಪ್ರಶ್ನೆ ಹುಟ್ಟುಹಾಕಿದೆ. ರಸ್ತೆ ಬದಿಯ ಆಹಾರ ಮಳಿಗೆಗಳ ಮೇಲೆ ನಿಯಮಿತ ತಪಾಸಣೆ ನಡೆಯುತ್ತಿದೆಯೇ, ಆಹಾರದ ಗುಣಮಟ್ಟ ಮತ್ತು ಶುಚಿತ್ವವನ್ನು ಯಾರು ಮೇಲ್ವಿಚಾರಣೆ ಮಾಡುತ್ತಿದ್ದಾರೆ ಹಾಗೂ ನಿಯಮ ಉಲ್ಲಂಘಿಸುವ ವ್ಯಾಪಾರಿಗಳ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗುತ್ತಿದೆ ಎಂಬುದಕ್ಕೆ ಸಂಬಂಧಿಸಿದ ಅಧಿಕಾರಿಗಳು ಉತ್ತರ ನೀಡಬೇಕಿದೆ.
20–25 ರೂ ಪಾನಿಪುರಿ ರುಚಿಗಾಗಿ ಆರೋಗ್ಯವನ್ನು ಅಪಾಯಕ್ಕೆ ತಳ್ಳಿಕೊಳ್ಳಬೇಡಿ. ರಸ್ತೆ ಬದಿಯಲ್ಲಿ ಆಹಾರ ಸೇವಿಸುವಾಗ ಅದರ ತಾಜಾತನ, ಶುಚಿತ್ವ ಹಾಗೂ ತಯಾರಿಸುವ ಪರಿಸರದ ಬಗ್ಗೆ ಗಮನಹರಿಸುವುದು ಅಗತ್ಯ. ವೈಟ್ಫೀಲ್ಡ್ನಲ್ಲಿ ಕೇಳಿಬಂದಿರುವ ಈ ಆರೋಪದ ಬಗ್ಗೆ ಆಹಾರ ಸುರಕ್ಷತಾ ಅಧಿಕಾರಿಗಳು ಪರಿಶೀಲನೆ ನಡೆಸಿ, ಲೋಪ ಕಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ರುಚಿಯ ಆಸೆಗಿಂತ ಆರೋಗ್ಯ ಮುಖ್ಯ; ಗ್ರಾಹಕರ ಸುರಕ್ಷತೆ ಪ್ರತಿಯೊಬ್ಬ ಆಹಾರ ವ್ಯಾಪಾರಿಯ ಮೊದಲ ಆದ್ಯತೆಯಾಗಿರಲಿ.