ಕೋಲಾರ: ದೇಶದಲ್ಲಿ ಭ್ರಷ್ಟಾಚಾರವು ಮಿತಿ ಮೀರಿದ್ದು, ಅದು ದೊಡ್ಡ ಕ್ಯಾನ್ಸರ್ ಪೀಡುಗಿನಂತೆ ವ್ಯಾಪಿಸಿದೆ. ಇದಕ್ಕೆಲ್ಲ ಸ್ವಾರ್ಥ ಮಾನೋಭಾವವೇ ಕಾರಣ ಎಂದು ರಾಜ್ಯ ಉಪ ಲೋಕಾಯುಕ್ತ ಬಿ.ವೀರಪ್ಪ ಕಳವಳ ವ್ಯಕ್ತಪಡಿಸಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಮಾಜದಲ್ಲಿ ಅನೇಕ ಬದಲಾವಣೆಗಳನ್ನು ಕಾಣಲಾಗುತ್ತಿದ್ದು, ಭ್ರಷ್ಟಾಚಾರ ಮಿತಿ ಮೀರುತ್ತಿದೆ. ಇದಕ್ಕೆಲ್ಲ ಅಂತ್ಯವಾಡಲು ಲೋಕಾಯುಕ್ತ ಸಂಸ್ಥೆ ಮುಂದಾಗಿದೆ ಎಂದರು.
180 ದೇಶಗಳಲ್ಲಿ ಭಾರತವು ಭ್ರಷ್ಟಾಚಾರದಲ್ಲಿ 96ನೇ ಸ್ಥಾನದಲ್ಲಿದೆ. ಅದರಲ್ಲೂ ರಾಜ್ಯವು 5ನೇ ಸ್ಥಾನದಲ್ಲಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ವಿದ್ಯಾವಂತರು ಕೇವಲ ಶೇ.18 ಇದ್ದರು. ಶೇ.92 ಭಾಗದ ಜನರಲ್ಲಿ ದೇಶ ಭಕ್ತಿ ಇತ್ತು, ಈಗ ಶೇ.80 ವಿದ್ಯಾವಂತರಿದ್ದರೂ ಸಹ ಶೇ.90 ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಶೇ.90 ಮಂದಿಗೆ ದೇಶಭಕ್ತಿಯೇ ಇಲ್ಲ ಎಂದು ವಿಷಾಧಿಸಿದರು.
ದೇಶ ಕಾಯುವ ಸೈನಿಕರಿಗೆ 79 ವರ್ಷವಾದರೂ ಕೂಡ ಅವರ ಸೌಲಭ್ಯಗಳು ಸಿಕ್ಕಿಲ್ಲ, ಕಾರ್ಗಿಲ್ ವಿಜಯೋತ್ಸವ ಸಂದರ್ಭದಲ್ಲಿ ಸುಮಾರು ಯೋಧರು ಸರ್ಕಾರದಿಂದ ದೊರೆಯಬೇಕಿದ್ದ ಸವಲತ್ತುಗಳು ದೊರೆಯದೆ ಇರುವ ಬಗ್ಗೆ ಗಮನಕ್ಕೆ ತಂದರು. ಅದನ್ನು ಪರಿಶೀಲನೆ ನಡೆಸಿದಾಗ ರಾಜ್ಯದ ಎಲ್ಲ 179 ತಹಸೀಲ್ದಾರ್, ಉಪ ವಿಭಾಗಾಧಿಕಾರಿಗಳ ವಿರುದ್ಧ ವಿರುದ್ದ ಪ್ರಕರಣ ದಾಖಲಿಸಿದ್ದು, ಎಲ್ಲ ಸೈನಿಕರಿಗೆ ನ್ಯಾಯಕ್ಕಾಗಿ ಈ ಕ್ರಮ ಕೈಗೊಂಡಿದ್ದೇನೆ ಎಂದರು.
ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ 150 ಮಂದಿಗೆ ಪೇನ್ಷನ್ ಸಿಗುತ್ತಿಲ್ಲ. ಜತೆಗೆ ಇನ್ನಷ್ಟು ಸಮಸ್ಯೆಗಳನ್ನು ಪರಿಶೀಲಿಸಿ ನ್ಯಾಯಾ ದೊರಕಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಪಂಚಾಯತ್ ರಾಜ್ ಕಾಯ್ದೆ ಬಂದಿದ್ದು ಅಧಿಕಾರ ವಿಕೇಂದ್ರಿಕರಣಕ್ಕಾಗಿ, ಸ್ವ ರಾಜ್ಯದ ಉದ್ದೇಶಕ್ಕಾಗಿ ಪಂಚಾಯತ್ ರಾಜ್ ಯೋಜನೆ ಇದೆ. ಅಧಿಕಾರ ವಿಕೇಂದ್ರೀಕರಣ ಆಗಬೇಕು ಎಂಬುದು ಕಾಯ್ದೆ ಉದ್ದೇಶ. ಜನರಿಗೆ ಅಧಿಕಾರ ಸಿಗುವ ಉದ್ದೇಶ ಈಡೇರಿಲ್ಲ. ಅಧಿಕಾರಿಗಳು ತಮ್ಮ ಜವಾಬ್ದಾರಿ ಮರೆತು ವರ್ತಿಸುತ್ತಿದ್ದಾರೆ ಎಂದು ಹೇಳಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸಾರ್ವಜನಿಕರಿಗೆ ಮೋಸ ಮಾಡುತಿದ್ದಾರೆ. ಕೆಲ ಅಭಿವೃದ್ಧಿ ಕೆಲಸಗಳಿಗೆ ಕ್ರಿಯಾ ಯೋಜನೆ ರೂಪಿಸಿ ವರ್ಷ ಪೂರ್ತಿ ಬಿಲ್ ಡ್ರಾ ಮಾಡಿದ್ದಾರೆ. ಆ ಮೂಲಕ ಜನಗಳ ದುಡ್ಡನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. ಈ ಭ್ರಷ್ಟಾಚಾರ ತೊಡೆದು ಹಾಕಲು ಸಮಾಜ ಬದಲಾಗಬೇಕು ಎಂದರು.
ವ್ಯವಸ್ಥೆ ಬದಲಾವಣೆ ಮಾಡುವ ಶಕ್ತಿ ಯುವಕರಲ್ಲಿದೆ. ದುಡ್ಡು ತೆಗೆದುಕೊಂಡು ಮತ ಹಾಕುವುದು ಹೋಗಬೇಕು. ಯುವ ಜನ ಮೊಬೈಲ್ ಬಿಟ್ಟು ಸಮಾಜದ ಉದ್ದಾರಕ್ಕಾಗಿ ಆಲೋಚಿಸಬೇಕು. ಮೊಬೈಲೀಸಂ ಬಿಟ್ಟು ಹೊರ ಬರಬೇಕು ಎಂದು ಎಚ್ಚರಿಸಿದರು.
ಯಾರಿಗೂ ದೇಶ ಭಕ್ತಿಯಂತಹ ಹುಮ್ಮಸ್ಸು, ತಾಕತ್ತು ಇಲ್ಲವಾಗಿದೆ. ಬರೀ ಮೊಬೈಲ್ ಹಿಡಿದು ಕೆಟ್ಟ ಜೀವನ ಮಾಡುತಿದ್ದಾರೆ. ಅವರಲ್ಲಿ ಸ್ವಾತಂತ್ರ$್ಯ ಪ್ರೇಮ ಬಿತ್ತಲು ಶಿಕ್ಷಣ ಸಂಸ್ಥೆಗಳು ಮುಂದಾಗಬೇಕು ಎಂದು ಸಲಹೆ ನೀಡಿದರು.