ನ್ಯೂಸ್

'ನಾ ಖಾವೂಂಗಾ, ನಾ ಖಾನೆ ದೂಂಗಾ' ಹೇಳಿಕೆ ಪ್ರಶ್ನಿಸಿ ಪ್ರಧಾನಿ ಮೋದಿಗೆ ಬಹಿರಂಗ ಪತ್ರ!

ಬೆಂಗಳೂರು: ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಿದ ವೇಗದಷ್ಟೇ ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷಗಳ ಆರೋಪದ ಸುರಿಮಳೆಯೂ ತೀವ್ರತೆ ಪಡೆದುಕೊಂಡಿದೆ. ಕರೊನಾ ನಿರ್ವಹಣೆಯಲ್ಲಿ ಕೋಟ್ಯಂತರ ರೂ. ಅವ್ಯವಹಾರ ನಡೆದಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದ್ದು, ಖರ್ಚು ವೆಚ್ಚದ ಲೆಕ್ಕವನ್ನು ಜನರ ಮುಂದೆ ಇಡಲೇಬೇಕೆಂದು ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪಟ್ಟು ಹಿಡಿದಿದ್ದಾರೆ. ಈ ನಡುವೆ KRS ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಹಿರಂಗ ಪತ್ರವೊಂದನ್ನು ಬರೆದಿರುವುದು ಭಾರೀ ಚರ್ಚೆಯಾಗುತ್ತಿದೆ.

ರವಿ ಕೃಷ್ಣಾರೆಡ್ಡಿ ತನ್ನ ಫೇಸ್​ಬುಕ್​ನಲ್ಲಿ ''ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ, 'ना खाऊंगा, ना खाने दूंगा' (ನಾನೂ ತಿನ್ನುವುದಿಲ್ಲ, ತಿನ್ನಲು ಬಿಡುವುದೂ ಇಲ್ಲ); ನಾನೂ ಭ್ರಷ್ಟಾಚಾರ ಮಾಡುವುದಿಲ್ಲ ಮತ್ತು ಮಾಡಲು ಬಿಡುವುದೂ ಇಲ್ಲ ಎಂಬ ಅರ್ಥದಲ್ಲಿ ನೀವು ಐದಾರು ವರ್ಷದ ಹಿಂದೆ ಹೀಗೆ ಘೋಷಿಸಿದ್ದಿರಿ. ಕೇಂದ್ರ ಸರ್ಕಾರದ ಬಗ್ಗೆ ನಾನು ಈ ಪತ್ರದಲ್ಲಿ ಪ್ರಸ್ತಾಪಿಸುವುದಿಲ್ಲ. ಕರ್ನಾಟಕದಲ್ಲಿ, ನಿಮ್ಮದೇ ಬಿಜೆಪಿ ಆಡಳಿತದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಮಾತ್ರ ಪ್ರಸ್ತಾಪಿಸ ಬಯಸುತ್ತೇನೆ'' ಎನ್ನುತ್ತ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಈ ಪತ್ರದ ಪೂರ್ಣ ವಿವರ ಇಲ್ಲಿದೆ.

''ಕೋವಿಡ್-19 ನಿಯಂತ್ರಣದ ಹೆಸರಿನಲ್ಲಿ ರಾಜ್ಯ ಸರ್ಕಾರ ಮಾಡಿರುವ ಸಾವಿರಾರು ಕೋಟಿ ರೂ. ಖರ್ಚುವೆಚ್ಚದಲ್ಲಿ ನೂರಾರು ಕೋಟಿ ರೂ. ಅಕ್ರಮ ಆಗಿದೆ ಎಂದು ನಾವು ಸಾಕ್ಷ್ಯಾಧಾರಗಳ ಸಮೇತ ಮೂರ್ನಾಲ್ಕು ತಿಂಗಳಿಂದ ಆರೋಪಿಸುತ್ತಲೇ ಇದ್ದೇವೆ. ನಿಮ್ಮದೇ ಪಕ್ಷದ ಹಾಲಿ ಶಾಸಕ ಮುರುಗೇಶ್ ನಿರಾಣಿ ಈ ವಿಚಾರದಲ್ಲಿ 'ಒಟ್ಟಾರೆ ಅಕ್ರಮದ ವಿವರಗಳುಳ್ಳ ಪೆನ್‌ಡ್ರೈವ್ ನನ್ನ ಬಳಿ ಇದೆ' ಎಂದು ವಿಧಾನಮಂಡಲದ PAC ಸಭೆಯಲ್ಲಿ ಅಧಿಕೃತವಾಗಿ ಹೇಳಿದ್ದಾರೆ. ನಿಮ್ಮದೇ ಪಕ್ಷದ ಇನ್ನೊಬ್ಬ ಶಾಸಕರು ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದಾರೆ. ನಮ್ಮ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ನಾವು ACB ಮತ್ತು PAC ಯಲ್ಲಿ ದೂರು ದಾಖಲಿಸಿದ್ದೇವೆ'' ಎಂದು ರವಿ ಕೃಷ್ಣಾರೆಡ್ಡಿ ವಿವರಿಸಿದ್ದಾರೆ.

''ಆದರೆ, 2020ರ ಮೇ 12ರಂದು ನಮ್ಮ ಪಕ್ಷ ನೀಡಿದ್ದ ದೂರಿನ ಆಧಾರದ ಮೇಲೆ PAC ನಡೆಸಲು ಉದ್ದೇಶಿಸಿದ್ದ ಖರೀದಿ ಪ್ರಕ್ರಿಯೆ ಮತ್ತು ವೈದ್ಯಕೀಯ ಉಪಕರಣಗಳ ಪರಿಶೀಲನೆಗೆ ನಿಮ್ಮದೇ ಪಕ್ಷದ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಅವರು ಭ್ರಷ್ಟರನ್ನು ರಕ್ಷಿಸುವ ಏಕೈಕ ಉದ್ದೇಶದಿಂದ ತಡೆಯಾಜ್ಞೆ ನೀಡಿದ್ದಾರೆ. ಹಾಗೆಯೇ, ಮೇ 12, 20202 ರಂದು ನಮ್ಮ ಪಕ್ಷ ನೀಡಿದ್ದ ದೂರಿನ ಆಧಾರದ ಮೇಲೆ ವಿಚಾರಣೆ ಕೈಗೆತ್ತಿಕೊಂಡಿರುವ ರಾಜ್ಯ ACBಗೆ ತನಿಖೆ ಮುಂದುವರಿಸಲು ಸರ್ಕಾರ ಇಲ್ಲಿಯವರೆಗೂ ಅನುಮತಿ ನೀಡಿಲ್ಲ''.

''ಹಾಗಾಗಿ, ನಿಮ್ಮಲ್ಲಿ ನನ್ನ ಒಂದು ಪ್ರಶ್ನೆ. ನಿಮ್ಮ "ना खाऊंगा ना खाने दूंगा" ಹೇಳಿಕೆ ಕೇವಲ ರಾಜಕೀಯ ಹೇಳಿಕೆಯೋ ಅಥವಾ ಪ್ರಾಮಾಣಿಕವಾಗಿ ಹೃದಯದಿಂದ ಬಂದದ್ದೋ? ಅದು ಪ್ರಾಮಾಣಿಕವಾದ ಮಾತು ಆಗಿದ್ದಲ್ಲಿ ನಮ್ಮ ರಾಜ್ಯದಲ್ಲಿಯ ಬ್ರಹ್ಮಾಂಡ ಭ್ರಷ್ಟಾಚಾರವನ್ನು ತಡೆಗಟ್ಟುವ ನಿಟ್ಟಿನಲ್ಲಿ ನಮ್ಮ ಪಕ್ಷ ಆಗ್ರಹಿಸುತ್ತಿರುವ ಬೇಡಿಕೆಗಳನ್ನು ಗೌರವಿಸಲು ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ನೇತೃತ್ವದ ಸರ್ಕಾರಕ್ಕೆ ಆದೇಶಿಸಿ'' ಎಂದು ರವಿ ಕೃಷ್ಣಾರೆಡ್ಡಿ ಆಗ್ರಹಿಸಿದ್ದಾರೆ.