ನ್ಯೂಸ್

ಭ್ರಷ್ಟಾಚಾರ ಆರೋಪ; ಸಚಿವ ಜಮೀರ್ ಅಹ್ಮದ್ ರಾಜೀನಾಮೆ ಕೊಟ್ಟು ತೊಲಗಲಿ: MLC ಟಿ.ಎ.ಶರವಣ ಕಿಡಿ

ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ತಾಂಡವ ನೃತ್ಯ ಆಡುತ್ತಿದೆ ಎನ್ನುವುದಕ್ಕೆ ಹಿರಿಯ ಶಾಸಕ ಬಿ.ಆರ್​.ಪಾಟೀಲ್ ತಮ್ಮದೇ ಸರ್ಕಾರದ ವಿರುದ್ಧ ಮಾಡಿರುವ ಸ್ಫೋಟಕ ಆರೋಪವೇ ಸಾಕ್ಷಿಯಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಣ್ಣ ಬಯಲಾಗಿದೆ ಎಂದು MLC ಹಾಗೂ ಜೆಡಿಎಸ್ ನಾಯಕ ಟಿ. ಎ.ಶರವಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅದರಲ್ಲೂ ವಸತಿ ಇಲಾಖೆಯಲ್ಲಿ ಹೆಜ್ಜೆ ಹೆಜ್ಜೆಗೂ ಕಾಂಚಾಣವೇ ಮಾತಾಡಬೇಕು. ಹಣ ಇಲ್ಲದಿದ್ದರೆ ಅಲ್ಲಿ ಏನೇನೂ ಆಗುವುದಿಲ್ಲ ಎಂದು ಆಡಳಿತ ಪಕ್ಷದ ಶಾಸಕರೇ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಮಂತ್ರಿ ಜಮೀರ್ ಅಹ್ಮದ್ ರಾಜೀನಾಮೆ ಕೊಟ್ಟು ತೊಲಗಬೇಕು.ಇಲ್ಲದಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜಮೀರ್​​ ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಸಚಿವ ಜಮೀರ್ ಅಹ್ಮದ್ ಅವರ ಆಪ್ತ ಕಾರ್ಯದರ್ಶಿ ಸರ್ಫರೋಜ್ ಖಾನ್ ಅವರೇ ಇಲಾಖೆಯಲ್ಲಿನ ಮನೆ ಹಂಚಿಕೆಗೆ ಲಂಚ ಕೊಡುವ ಪರಿಸ್ಥಿತಿ ಇದೆ ಎಂದು ಆಡಳಿತ ಪಕ್ಷದ ಶಾಸಕರಿಗೇ ಹೇಳಿರುವುದು ನೋಡಿದರೆ ಆಡಳಿತ ವ್ಯವಸ್ಥೆ ಕುಲಗೆಟ್ಟು ಹೋಗಿರುವುದು ಅರ್ಥವಾಗುತ್ತದೆ. ಈ ಸರ್ಕಾರ ಅಧಿಕಾರದಲ್ಲಿ ಉಳಿಯುವ ನೈತಿಕತೆಯನ್ನು ಕಳೆದುಕೊಂಡಿದೆ ಎಂದು ಶರವಣ ಕಿಡಿ ಕಾರಿದ್ದಾರೆ.

ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತನಿಖೆಗೆ ಆದೇಶಿಸಬೇಕು. ತನಿಖೆಯ ಮೇಲೆ ಒತ್ತಡ ಹೇರಬಾರದು ಎನ್ನುವ ಕಾರಣಕ್ಕೆ ವಸತಿ ಮಂತ್ರಿ ಅಧಿಕಾರದಿಂದ ಕೆಳಗೆ ಇಳಿಯಬೇಕು ಎಂದು ಆಗ್ರಹಿಸಿದ್ದಾರೆ.