ಸರ್ಕಾರಿ ಆಡಳಿತದಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಜಾರಿಗೆ ತಂದಿರುವ ಮಾಹಿತಿ ಹಕ್ಕು ಕಾಯ್ದೆ (ಆರ್ಟಿಐ) ಭ್ರಷ್ಟ ಅಧಿಕಾರಿಗಳಿಗೆ ನುಂಗಲಾರದ ತುತ್ತಾಗಿದೆ. ತಾವು ಮಾಡಿದ ಅಕ್ರಮವನ್ನು ಮುಚ್ಚಿಕೊಳ್ಳಲು ಆರ್ಟಿಐ ಯೋಜನೆಯನ್ನೇ ಬುಡಮೇಲು ಮಾಡುತ್ತಿದ್ದು, ಅಕ್ರಮದ ವಾಸನೆ ಬಡಿದಿರುವ ಸರ್ಕಾರಿ ಯೋಜನೆಗಳ ಮಾಹಿತಿ ಕೇಳಿ ಸಾರ್ವಜನಿಕರು ಹಾಕುವ ಅರ್ಜಿಗಳಿಗೆ ಸಮರ್ಪಕ ಮಾಹಿತಿ ಕೊಡದೆ ಕಳ್ಳಾಟ ಆಡುತ್ತಿರುವ ಆರೋಪ ಕೇಳಿಬಂದಿದೆ. ಏತನ್ಮಧ್ಯೆ ಅಧಿಕಾರಿಗಳಿಂದ ಹಣ ವಸೂಲಿ ಮಾಡಲು ಆರ್ಟಿಐ ‘ಬೆದರಿಕೆ ಅಸ್ತ್ರ’ವಾಗಿ ದುರ್ಬಳಕೆಯಾಗುತ್ತಿರುವ ಆರೋಪವೂ ಇದೆ. ದೇಶದಲ್ಲಿ ಭ್ರಷ್ಟಾಚಾರ ಹೊರಗೆಳೆಯಲು ಪ್ರಯತ್ನಿಸಿದ 101 ಆರ್ಟಿಐ ಕಾರ್ಯಕರ್ತರ ಹತ್ಯೆ ನಡೆದಿದೆ.
ಆರ್ಟಿಐನಡಿ ಮಾಹಿತಿ ಕೋರಿ ಸಲ್ಲಿಕೆಯಾಗುವ ಶೇ.80 ಅರ್ಜಿಗಳಲ್ಲಿ ಅಧಿಕಾರಿಗಳು ಅನಗತ್ಯವಾಗಿ ಯಾವುದೋ ಒಂದು ಕಾರಣ ಕೊಟ್ಟು ಮಾಹಿತಿ ನೀಡದೆ ಅರ್ಜಿದಾರರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇಲಾಖೆಗಳಲ್ಲಿ ಯೋಜನೆಗಳ ಅನುಷ್ಠಾನ, ಕಾಮಗಾರಿಗಳಿಗೆ ಅನುದಾನ ಸೇರಿ ಸರ್ಕಾರದ ಹಣ ಬಳಕೆಯಾಗುವಂತಹ ಯಾವುದೇ ಸಂಸ್ಥೆಗೆ ಸಂಬಂಧಿಸಿದ ಖರ್ಚು-ವೆಚ್ಚಗಳ ಕುರಿತು ಅರ್ಜಿ ಸಲ್ಲಿಸುವ ಮೂಲಕ ಸಾರ್ವಜನಿಕರು ಮಾಹಿತಿ ಪಡೆಯುವ ಅಧಿಕಾರ ಇದೆ. ಪ್ರತಿವರ್ಷ ರಾಜ್ಯಾದ್ಯಂತ ಮಾಹಿತಿ ಕೋರಿ ಸರಾಸರಿ 5 ಲಕ್ಷ ಅರ್ಜಿಗಳು ಸಲ್ಲಿಕೆಯಾಗುತ್ತವೆ. ಆರ್ಟಿಐನಡಿ ಅರ್ಜಿ ಸಲ್ಲಿಸುವವರಿಗೆ ಮಾಹಿತಿ ನೀಡಬೇಕೆಂದು ಸುಪ್ರೀಂಕೋರ್ಟ್ನ ಆದೇಶವಿದೆ. ಹೀಗಿದ್ದರೂ ಸಾಮಾಜಿಕ ಕಾರ್ಯಕರ್ತರು, ಮಾಹಿತಿ ಹಕ್ಕು ಕಾರ್ಯಕರ್ತರು, ಸಾರ್ವಜನಿಕರು ಸಲ್ಲಿಸುವ ಎಷ್ಟೋ ಅರ್ಜಿಗಳಿಗೆ ಯಾವುದೋ ಆದೇಶ ಅಥವಾ ಸೆಕ್ಷನ್ ಉಲ್ಲೇಖಿಸಿ ಸಾರ್ವಜನಿಕ ಹಿತಾಸಕ್ತಿ ಇಲ್ಲ ಎಂದು ನಮೂದಿಸಿ ಪ್ರತಿಕ್ರಿಯಿಸುತ್ತಿದ್ದಾರೆ. ಅದರಲ್ಲೂ, ಗೋಲ್‍ಮಾಲ್ ನಡೆದಿರುವ ಯೋಜನೆಗಳ ಕುರಿತು ಸಲ್ಲಿಕೆಯಾಗುವ ಅರ್ಜಿಗಳಿಗೆ ಅಧಿಕಾರಿಗಳು ಅಸಂಬದ್ಧ ಉತ್ತರ ಕೊಟ್ಟು ಸಾಗಹಾಕುತ್ತಿರುವ ಆರೋಪಗಳು ಕೇಳಿಬಂದಿವೆ.
101 ಜನರ ಹತ್ಯೆ, 183 ಜನರ ಮೇಲೆ ಹಲ್ಲೆ: ಆರ್ಟಿಐ ಹೆಸರಲ್ಲಿ ಅಧಿಕಾರಿಗಳನ್ನು ಬೆದರಿಸಿ ಹಣ ವಸೂಲಿ ಮಾಡುವ ಆರೋಪ ಒಂದೆಡೆಯಾದರೆ, ಭ್ರಷ್ಟ ಅಧಿಕಾರಿಗಳಿಂದ ಹತ್ಯೆಯಾಗಿರುವ ಆರ್ಟಿಐ ಕಾರ್ಯಕರ್ತರೂ ಇದ್ದಾರೆ. ಖಾಸಗಿ ಸಂಸ್ಥೆಯೊಂದರ ಮಾಹಿತಿ ಪ್ರಕಾರ ದೇಶದಲ್ಲಿ 101 ಆರ್ಟಿಐ ಕಾರ್ಯಕರ್ತರ ಹತ್ಯೆಯಾಗಿದೆ. 183 ಜನರ ಮೇಲೆ ಗಂಭೀರ ಹಲ್ಲೆಗಳಾಗಿದ್ದು, 188 ಕಾರ್ಯಕರ್ತರಿಗೆ ಜೀವ ಬೆದರಿಕೆ ಹಾಕಲಾಗಿದೆ. ಜತೆಗೆ, ಜೀವ ಬೆದರಿಕೆ ಹಾಗೂ ಕಿರುಕುಳದ ಹಿನ್ನೆಲೆಯಲ್ಲಿ 7 ಕಾರ್ಯಕರ್ತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಿಹಾರ ರಾಜ್ಯವೊಂದರಲ್ಲೇ 20 ಆರ್ಟಿಐ ಕಾರ್ಯಕರ್ತರ ಹತ್ಯೆಯಾಗಿದೆ.
ರಾಜ್ಯದಲ್ಲಿ ಹತ್ಯೆಯಾದವರೆಷ್ಟು?
2012ರ ನ.2ರಂದು ಆರ್ಟಿಐ ಕಾರ್ಯಕರ್ತ ಲಿಂಗರಾಜು ಹತ್ಯೆಯಾಗಿತ್ತು. ಬೆಂಗಳೂರಿನಲ್ಲಿ ‘ಮಹಾ ಪ್ರಚಂಡ’ ಎಂಬ ಪತ್ರಿಕೆಯ ಸಂಪಾದಕರಾಗಿದ್ದು, ಆರ್ಟಿಐನಡಿ ದಾಖಲೆಗಳನ್ನು ತೆಗೆದು ದೂರು ನೀಡುತ್ತಿದ್ದರು. ಅಂದಿನ ಪಾಲಿಕೆ ಸದಸ್ಯೆ ಗೌರಮ್ಮ ಪತಿ ಗೋವಿಂದರಾಜು ಭೂ ಅಕ್ರಮ ಕುರಿತು 2010ರಲ್ಲಿ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ರಾಜಿಗೆ ಗೋವಿಂದರಾಜು ಯತ್ನಿಸಿ ವಿಫಲರಾದಾಗ ಕೊಲೆ ಮಾಡಿಸಿದ್ದ ಆರೋಪ ಕೇಳಿಬಂದಿತ್ತು. ಸಾಕ್ಷ್ಯಾಧಾರ ಕೊರತೆ ಹಿನ್ನೆಲೆಯಲ್ಲಿ ಗೌರಮ್ಮ ಸೇರಿ 10 ಮಂದಿ ಖುಲಾಸೆಯಾಗಿದ್ದಾರೆ.
- 2021 ಜು.15ರಂದು ಬಳ್ಳಾರಿ ಹರಪನಹಳ್ಳಿಯಲ್ಲಿ ಆರ್ಟಿಐ ಕಾರ್ಯಕರ್ತ ಶ್ರೀಧರ್ ಹತ್ಯೆಯಾಗಿತ್ತು. ಪುರಸಭೆ ಅಧ್ಯಕ್ಷರಿಗೆ ಸಂಬಂಧಿಸಿದ ಭೂ ಅಕ್ರಮದ ಕುರಿತು ದೂರುಗಳನ್ನು ದಾಖಲಿಸಿದ್ದರಿಂದ ಹತ್ಯೆ ಮಾಡಿದ ಆರೋಪ ಇದೆ.
- 2021 ಜು.15ರಂದು ಮಾಗಡಿ ರಸ್ತೆ ತಾವರೆಕೆರೆಯ ತೋಟದಲ್ಲಿದ್ದಾಗ ಆರ್ಟಿಐ ಕಾರ್ಯಕರ್ತ ವೆಂಕಟೇಶ್ ಮೇಲೆ ದಾಳಿ ಮಾಡಿದ್ದ ದುಷ್ಕರ್ವಿುಗಳು ಕೈ-ಕಾಲು ಕತ್ತರಿಸಿದ್ದರು. ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.
- 2013 ಜ.7ರಂದು ಚಿಕ್ಕಮಗಳೂರಲ್ಲಿ ಆರ್ಟಿಐ ಕಾಯರ್åಕರ್ತ ವಂಡಾರು ವಾಸುದೇವ ಅಡಿಗ ಹತ್ಯೆಯಾಗಿತ್ತು. ಭೂವ್ಯಾಜ್ಯದ ವಿಚಾರವಾಗಿ ಹತ್ಯೆಯಾಗಿ ಆರೋಪಿಗಳನ್ನು ಬಂಧಿಸಲಾಗಿತ್ತು.
ನೋಡಲ್ ಅಧಿಕಾರಿ ಪಾತ್ರ
ಪ್ರತಿ ಇಲಾಖೆಗಳಲ್ಲಿ ಒಬ್ಬ ನೋಡಲ್ ಅಧಿಕಾರಿಯಿದ್ದು, ಅವರಿಗೆ ಪ್ರತ್ಯೇಕ ಲಾಗಿನ್ ಐಡಿ ನೀಡಲಾಗಿದೆ. ಅವರ ಲಾಗಿನ್ಗೆ ಬರುವ ಅರ್ಜಿಗಳನ್ನು ಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ರವಾನಿಸುವ ಕೆಲಸ ನೋಡಲ್ ಅಧಿಕಾರಿಗಳದ್ದು. ಆದರೆ, ಕೆಲವರು ಸ್ವೀಕೃತವಾಗುವ ಅರ್ಜಿಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ವರ್ಗಾಯಿಸುವುದೇ ಇಲ್ಲ.
ಮೇಲ್ಮನವಿ ಸಲ್ಲಿಸಲ್ಲವೆಂದೇ ತಿರಸ್ಕೃತ
- ಒಮ್ಮೆ ಅರ್ಜಿ ತಿರಸ್ಕರಿಸಿದರೆ ಮೇಲ್ಮನವಿ ಸಲ್ಲಿಕೆಗೆ ಅವಕಾಶ ಇದೆ. ಬಹುತೇಕರು ಸಲ್ಲಿಸುವುದಿಲ್ಲ
- ಪ್ರಥಮ ಮೇಲ್ಮನವಿಗೆ ಮಾತ್ರ ಆನ್ಲೈನ್ನಲ್ಲಿ ಸಲ್ಲಿಸಲು ಅವಕಾಶ
- ಮೇಲ್ಮನವಿ ವಿಚಾರಣೆಗೆ ಕಚೇರಿಗೆ ಹೋಗಿ ತಾಸುಗಟ್ಟಲೆ ಕಾಯುವ ತಾಪತ್ರಯ
- ಮೇಲ್ಮನವಿ ಸಲ್ಲಿಸುವುದಿಲ್ಲವೆಂದು ಅರ್ಜಿ ತಿರಸ್ಕರಿಸುವ ಅಧಿಕಾರಿಗಳು
- ಆರ್ಟಿಐ ಕಾರ್ಯಕರ್ತರೆಂದು ಗುರುತಿಸಿಕೊಂಡವರು ಮಾತ್ರ ಪಟ್ಟುಹಿಡಿದು ಮಾಹಿತಿ ಸಂಗ್ರಹ
ಕಳ್ಳಾಟ ಹೇಗೆ?
- 30 ದಿನದೊಳಗೆ ಮಾಹಿತಿ ನೀಡಬೇಕೆಂಬ ನಿಯಮ ಪಾಲಿಸಲ್ಲ
- ಅರ್ಜಿಗಳನ್ನು ಪರಿಶೀಲಿಸದೆ ಉದಾಸೀನ ತೋರುವ ಕೆಲ ನೋಡಲ್ ಅಧಿಕಾರಿಗಳು
- ಅಕ್ರಮ ನಡೆದಿದ್ದರೆ ಅರ್ಜಿಗೆ ತಪು್ಪ ಸೆಕ್ಷನ್ ಉಲ್ಲೇಖಿಸಿ ಅರ್ಜಿ ವಜಾ
- ಮುಖ್ಯ ಅಂಶಗಳನ್ನು ಮುಚ್ಚಿಟ್ಟು ಅರ್ಧಂಬರ್ಧ ಮಾಹಿತಿ ರವಾನೆ
- ಪ್ರಥಮ, ದ್ವಿತೀಯ ಮೇಲ್ಮನವಿ ಸಲ್ಲಿಸಿದ್ದರೂ ಸಿಗದ ಮಾಹಿತಿ
- ಕೆಲ ಪ್ರಕರಣಗಳಲ್ಲಿ ಮಾಹಿತಿಗಾಗಿ ವರ್ಷಗಳ ಕಾಲ ಅಲೆದಾಟ
- ಸಾವಿರಾರು ರೂ.ದಂಡ ಹಾಕಿದ್ದರೂ ಬುದ್ಧಿ ಕಲಿಯದ ಸಿಬ್ಬಂದಿ
ಅಧಿಕಾರಿಗಳ ಅಕ್ರಮಕ್ಕಿದೆ ಸಾಕ್ಷ್ಯ
- ಆಹಾರ ನಾಗರಿಕ ಮತ್ತು ಸರಬರಾಜು ನಿಗಮದಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ 2021-22 ಮತ್ತು 2022-23ರ ಸಾಲಿನಲ್ಲಿ ಗೋಣಿಚೀಲ (ಗನ್ನಿ ಬ್ಯಾಗ್) ಖರೀದಿ, ಟೆಂಡರ್ ಪಡೆದಿರುವ ಕಾರ್ಯಾದೇಶಗಳ ನಕಲು ಪ್ರತಿ ನೀಡುವಂತೆ ಕೋರಿ ಮಾಹಿತಿ ಹಕ್ಕು ಕಾಯ್ದೆಯಡಿ ಹರೀಶ್ ಎಂಬುವರು ಕಳೆದ ಜು.25ರಂದು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ, ಈವರೆಗೆ ಅರ್ಜಿಗೆ ಅಧಿಕಾರಿಗಳು ಮಾಹಿತಿ ಕೊಟ್ಟಿಲ್ಲ. ಪೋರ್ಟಲ್ನಲ್ಲಿ ಅರ್ಜಿ ಸ್ಥಿತಿ ಪರಿಶೀಲಿಸಿದರೆ ಅರ್ಜಿಯನ್ನು ವರ್ಗಾಯಿಸಲಾಗಿದೆ ಎಂದು ಕಾಣುತ್ತಿದೆ.
- ಆರೋಗ್ಯ ಇಲಾಖೆ ಅಧೀನದ ಕರ್ನಾಟಕ ಆಯುರ್ವೆದ ಮತ್ತು ಯುನಾನಿ ವೈದ್ಯ ಮಂಡಳಿಯಲ್ಲಿ ನೋಂದಣಿಯಾಗಿರುವ ವೈದ್ಯರ ವಿವರ, ರಾಜ್ಯದಲ್ಲಿ ನಕಲಿ ವೈದ್ಯರು ಸಿಕ್ಕಿಬಿದ್ದಿರುವುದು, ಅವರ ವಿರುದ್ಧ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ವಿವರ ಒಳಗೊಂಡ ನಕಲು ಪ್ರತಿಗಳನ್ನು ನೀಡುವಂತೆ ಅರ್ಜಿದಾರರೊಬ್ಬರು ಸೆ.14ರಂದು ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯನ್ನು ನೋಡಲ್ ಅಧಿಕಾರಿ ಇಲಾಖೆ ಆಯುಕ್ತರಿಗೆ ವರ್ಗಾಯಿಸಿ ಮಾಹಿತಿ ನೀಡುವಂತೆ ಉಲ್ಲೇಖಿಸಿದ್ದಾರೆ. ಆದರೆ, ಈವರೆಗೆ ಅರ್ಜಿದಾರರಿಗೆ ಮಾಹಿತಿ ನೀಡಿಲ್ಲ. ಪ್ರಥಮ ಮೇಲ್ಮನವಿ ಸಲ್ಲಿಸಿದ್ದಾರೆ.
- ಬೇರೆ ಇಲಾಖೆಗಳಿಂದ ಸಾರಿಗೆ ಇಲಾಖೆ ಮೋಟಾರು ವಾಹನ ನಿರೀಕ್ಷಕರ ಹುದ್ದೆಗಳಿಗೆ ಕಾಯಂ ವರ್ಗಾವಣೆ ಗೊಂಡಿರುವ ನೌಕರರ ಮಾಹಿತಿ ಹಾಗೂ ದೈಹಿಕ ಅರ್ಹತೆ ದಾಖಲೆಗಳ ನಕಲು ಪ್ರತಿ ಒದಗಿಸಲು ಕೋರಲಾಗಿತ್ತು. ಆದರೆ, ನೌಕರರ ವೈಯಕ್ತಿಕ ಮಾಹಿತಿ ಕೇಳಿರುವುದರಿಂದ ಕೊಡಲಾಗಲ್ಲ. ಮೇಲ್ಮನವಿ ಸಲ್ಲಿಸಬಹುದು ಎಂದು ಪ್ರತಿಕ್ರಿಯೆ ಕೊಡಲಾಗಿದೆ. ಪ್ರತಿಯೊಬ್ಬ ನೌಕರನ ಶೈಕ್ಷಣಿಕ ಹಾಗೂ ದೈಹಿಕ ಅರ್ಹತೆ ಮಾಹಿತಿ ಪಡೆಯಲು ಆರ್ಟಿಐನಲ್ಲಿ ಅವಕಾಶ ಕಲ್ಪಿಸಲಾಗಿದೆ.
- ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಪದವೀಧರರ ಮಾಹಿತಿ ನೀಡುವಂತೆ ಕೋರಿ ಸಲ್ಲಿಸಿದ್ದ ಆರ್ಟಿಐ ಅರ್ಜಿಗೆ ರಾಜ್ಯದ ಎಲ್ಲ ಘಟಕ ಹಾಗೂ ಜಿಲ್ಲೆಗಳಲ್ಲಿ ಲಭ್ಯವಿರುವುದರಿಂದ ಆಯಾ ಘಟಕಕ್ಕೆ ಅರ್ಜಿ ಸಲ್ಲಿಸಿ ನೇರವಾಗಿ ಮಾಹಿತಿ ಪಡೆಯುವಂತೆ ಪ್ರತಿಕ್ರಿಯೆ ನೀಡುವ ಮುಖೇನ ಜವಾಬ್ದಾರಿಯಿಂದ ನುಣುಚಿಕೊಳ್ಳಲಾಗಿದೆ.