ನ್ಯೂಸ್

ನಿಗಮ-ಮಂಡಳಿ ನೇಮಕಾತಿ ಶೀಘ್ರ; ಬಿಜೆಪಿ ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ಒಪ್ಪಿಗೆ ಸಾಧ್ಯತೆ

ಬೆಂಗಳೂರು: ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಚಾತಕಪಕ್ಷಿಯಂತೆ ಕಾಯುತ್ತಿರುವ ನಿಗಮ-ಮಂಡಳಿಗಳ ಪುನರ್ ರಚನೆಯ ಕಾಲ ಸನ್ನಿಹಿತವಾಗಿದೆ. ಹುಬ್ಬಳ್ಳಿಯಲ್ಲಿ ಡಿ.28, 29ರಂದು ಪಕ್ಷದ ರಾಜ್ಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಹಾಗೂ ಕೋರ್ ಕಮಿಟಿ ಸಭೆಗಳು ನಿಗದಿಯಾಗಿದ್ದು, ಇದೇ ಸಂದರ್ಭದಲ್ಲಿ ನಿಗಮ-ಮಂಡಳಿ ಪಟ್ಟಿಯೂ ಒಪ್ಪಿಗೆ ಪಡೆಯುವ ಸಾಧ್ಯತೆಗಳಿವೆ.

ಮುಂಬರುವ ಬಿಬಿಎಂಪಿ, ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆ ಜತೆಗೆ 2023ರ ವಿಧಾನಸಭೆ ಸಾರ್ವತ್ರಿಕ ಚುನಾವಣೆ ದೃಷ್ಟಿಯಿಂದಲೂ ಹೊಸದಾಗಿ ನೇಮಕ ಅಗತ್ಯ ಎನ್ನುವುದು ವರಿಷ್ಠರ ನಿಲುವಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ತಕ್ಷಣ ಸಚಿವ ಸಂಪುಟ ಪುನರ್ ರಚನೆ ಸಹಿತ ಆಡಳಿತಾತ್ಮಕವಾಗಿ ಸಾಕಷ್ಟು ಬದಲಾವಣೆಗಳಾಗಿವೆ. ಪುನರ್ ರಚನೆಗೆ ಒಂದಿಲ್ಲೊಂದು ಚುನಾವಣೆ, ಕರೊನಾ ಅಡ್ಡಗಾಲಾಗಿವೆ. ಶಾಸಕರು ಮತ್ತು ಹಿರಿಯ ಕಾರ್ಯಕರ್ತರಿಗೆ ತಲಾ ಅರ್ಧ ಸ್ಥಾನಗಳ ಹಂಚಿಕೆ ನಿರ್ಧಾರ ಅನುಷ್ಠಾನಕ್ಕೆ ಬರದಿದ್ದರೆ ಬೇರೆ ಸಂದೇಶ ರವಾನೆಯಾಗಲಿದೆ ಎಂಬ ಕಳವಳ ವ್ಯಕ್ತವಾಗಿದೆ.

ಕೊನೇ ಘಳಿಗೆಯಲ್ಲಿ ಹಿಂದಡಿ: ವರಿಷ್ಠರು, ಪಕ್ಷದ ರಾಜ್ಯ ನಾಯಕರೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರ್ಚಚಿಸಿ ಪಟ್ಟಿ ಸಿದ್ಧಪಡಿಸಿದ್ದು, ಬೆಂಗಳೂರಿನಲ್ಲಿ ಕಳೆದ ತಿಂಗಳು ನಡೆದ ಪಕ್ಷದ ರಾಜ್ಯ ಕೋರ್ ಕಮಿಟಿ ಸಭೆಯ ಅನುಮೋದನೆ ನೀಡಿಯಾಗಿತ್ತು. ಇನ್ನೇನು ಅಧಿಕೃತ ಆದೇಶ ಹೊರಬೀಳಲಿದೆ ಎನ್ನುವಾಗ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಚುನಾವಣೆ ವೇಳಾ ಪಟ್ಟಿ ಪ್ರಕಟವಾಯಿತು. ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿಗೆ ಬಂದ ಹಿನ್ನೆಲೆಯಲ್ಲಿ ಪಟ್ಟಿ ಬಿಡುಗಡೆ ಯೋಚನೆಯಿಂದ ಸಿಎಂ ಬೊಮ್ಮಾಯಿ ಹಿಂದಡಿಯಿಟ್ಟರು ಎಂದು ಉನ್ನತ ಮೂಲಗಳು ತಿಳಿಸಿವೆ. ವಿಧಾನ ಪರಿಷತ್ ಚುನಾವಣೆ ಫಲಿತಾಂಶ ಆಧಾರದಲ್ಲಿ ಸಿದ್ಧವಾದ ಪಟ್ಟಿ ಮತ್ತೆ ಪರಿಷ್ಕರಣೆಯಾಗುವ ಸಂಭವವಿದ್ದು, ಸಮತೋಲನ ಕಸರತ್ತು ನಡೆಯಲಿದೆ.

ಮೇಲ್ಮನೆಯಲ್ಲಿ ಸಂಖ್ಯಾಬಲದಾಟ: ‘ಧಾರ್ವಿುಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ’ (ಮತಾಂತರ ನಿಷೇಧ ತಡೆ)ದ ವಿಚಾರದಲ್ಲಿ ಆಡಳಿತ ಬಿಜೆಪಿ, ಪ್ರತಿಪಕ್ಷ ಕಾಂಗ್ರೆಸ್ ನಡುವೆ ಸಂಖ್ಯಾಬಲದಾಟಕ್ಕೆ ಮೇಲ್ಮನೆ ವೇದಿಕೆಯಾಯಿತು.

ಚಳಿಗಾಲದ ಅಧಿವೇಶನದ ಕೊನೆಯ ದಿನ ಆಡಳಿತ ಮತ್ತು ಪ್ರತಿಪಕ್ಷ ಚದುರಂಗದಾಟವು ಸಭಾಪತಿ ಬಸವರಾಜ ಹೊರಟ್ಟಿಗೆ ಬೇಸರ ಹುಟ್ಟಿಸಿ, ಒಂದು ಹಂತದಲ್ಲಿ ರಾಜೀನಾಮೆಗೂ ಮುಂದಾಗಿದ್ದರು. ವಿಧಾನಸಭೆಯಲ್ಲಿ ಪ್ರತಿಪಕ್ಷಗಳ ವಿರೋಧದ ಮಧ್ಯೆ ಬಿಜೆಪಿ ತನಗಿರುವ ಸರಳ ಬಹುಮತದ ಬಲದಿಂದ ಮಸೂದೆಯನ್ನು ಪಾಸ್ ಮಾಡಿಸಿಕೊಂಡಿದ್ದು, ಮೇಲ್ಮನೆಯಲ್ಲಿ ಪರಾವಲಂಬಿಯಾಗಿದೆ. ವಿಧಾನ ಪರಿಷತ್​ನಲ್ಲಿ ಬಿಜೆಪಿ ಜತೆಗೆ ಜೆಡಿಎಸ್ ವಿಷಯಾಧಾರಿತ ಹೊಂದಾಣಿಕೆ ಮಾಡಿಕೊಂಡಿದ್ದು, ಈ ಮಸೂದೆಗೆ ಜೆಡಿಎಸ್ ಸಹಮತ ಇಲ್ಲದಿರುವುದು ಅಂಗೀಕಾರಕ್ಕೆ ಅಡ್ಡಿಯಾಯಿತು.

ಅವಕಾಶ ಸದ್ಬಳಕೆ ತಂತ್ರ: ಹಿರಿಯರ ಸದನದಲ್ಲಿ ಬಹುಮತವಿಲ್ಲದ ಕಮಲ ಪಡೆ ಕೊನೇ ದಿನ ಲಭ್ಯ ‘ಅವಕಾಶ’ದ ಸದ್ಬಳಕೆ ಮಾಡಿಕೊಳ್ಳುವ ತಂತ್ರಗಾರಿಕೆ ಹೆಣೆದಿತ್ತು. ಅಧಿವೇಶನದ ಮುಕ್ತಾಯದ ದಿನ ಸದನದಲ್ಲಿ ಬಿಜೆಪಿಯ 28 ಸದಸ್ಯರಿದ್ದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ಒಳಗೊಂಡು 28 ಸದಸ್ಯರಿದ್ದರು. ಸಮಬಲ ಗಮನಿಸಿದ ಬಿಜೆಪಿ ನಾಯಕರು ಮತಾಂತರ ಮಸೂದೆ ಮಂಡಿಸಿ, ಒಪ್ಪಿಗೆ ಪಡೆಯಲೆಂದು ಬೆಳಗಾವಿಗೆ ವಾಪಸ್ಸಾಗಲು ತುರ್ತು ಬುಲಾವ್ ನೀಡಿತು. ಕಾರ್ಯನಿಮಿತ್ತ ಚಿಕ್ಕಮಗಳೂರಿಗೆ ಹೊರಟಿದ್ದ ಉಪ ಸಭಾಪತಿ ಎಂ.ಕೆ.ಪ್ರಾಣೇಶ್, ಶಿವಮೊಗ್ಗದ ದಾರಿ ಹಿಡಿದಿದ್ದ ಎಸ್.ರುದ್ರೇಗೌಡ ಗಡಬಡಿಸಿ ಮರಳಿದರು. ತಾವು ಪೀಠದಲ್ಲಿದ್ದಾಗ ಈ ಮಸೂದೆ ಮಂಡನೆಗೆ ಅವಕಾಶ ನೀಡುವುದಿಲ್ಲವೆಂದು ಹೊರಟ್ಟಿ ಬಿಗಿ ನಿಲುವು ತಳೆದ ಕಾರಣ ಭೋಜನ ವಿರಾಮದ ಬಳಿಕ ನಾಟಕೀಯ ಬೆಳವಣಿಗೆ ನಡೆಯಿತು.

ಅರುಣ್ ಸಿಂಗ್ ಭಾಗಿ: ಹುಬ್ಬಳ್ಳಿಯಲ್ಲಿ ನಡೆಯಲಿರುವ ಸಭೆಗಳಲ್ಲಿ ಭಾಗವಹಿಸಲೆಂದು ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಡಿ.27ರ ಸಂಜೆ ಬೆಂಗಳೂರಿಗೆ ಆಗಮಿಸಲಿದ್ದಾರೆ. ಸಿಂಗ್ ಸಮಕ್ಷಮವೇ ಮೂರು ಮಹತ್ವದ ಸಭೆಗಳು ನಡೆಯಲಿವೆ. ವಿಧಾನ ಪರಿಷತ್ ಚುನಾವಣೆ ಫಲಿತಾಂಶದ ಅವಲೋಕನ, ನಿಗಮ-ಮಂಡಳಿಗಳಿಗೆ ನೇಮಕ, ಮುಂಬರುವ ಚುನಾವಣೆಗಳು ಹಾಗೂ ಸರ್ಕಾರದ ನೀತಿ-ನಿರ್ಧಾರಗಳ ಬಗ್ಗೆ ಚರ್ಚೆಯಾಗಲಿವೆ ಎಂದು ಪಕ್ಷದ ಮೂಲಗಳು ಹೇಳಿವೆ.

ಸುಗ್ರೀವಾಜ್ಞೆ ಮೂಲಕ ಕಾಯ್ದೆ ಅನುಷ್ಠಾನ: ವಿಧಾನಸಭೆಯಲ್ಲಿ ಮತಾಂತರ ನಿಷೇಧ ವಿಧೇಯಕ ಮಂಡನೆಯಾಗಿದ್ದು, ವಿಧಾನ ಪರಿಷತ್ ಬಹುಮತ ಕೊರತೆಯಿರುವ ಕಾರಣ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಸುಗ್ರೀವಾಜ್ಞೆ ಹೊರಡಿಸುವ ಮೂಲಕ ಕಾಯ್ದೆ ಅನುಷ್ಠಾನಕ್ಕೆ ತರಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತಾಂತರ ನಿಷೇಧ ಕಾಯ್ದೆಯನ್ನು ಎಲ್ಲ ಧರ್ಮ, ಜಾತಿಯವರು ಹೆಮ್ಮೆಯಿಂದ ಸ್ವಾಗತಿಸಬೇಕು. ಇದು ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಾದ ಸಮಸ್ಯೆ ಅಲ್ಲ. ಯಾವುದೇ ಪ್ರದೇಶದಲ್ಲಿ ಸಣ್ಣ ಸಮುದಾಯವೊಂದಿದ್ದರೆ ಆ ಧರ್ಮಕ್ಕೆ ಅನ್ಯಾಯವಾಗಬಾರದು ಎನ್ನುವ ಅಂಶವೂ ಸೇರಿ ವಂಚನೆ, ಬಲಾತ್ಕಾರ, ಮೋಸದ ಮೂಲಕ ವಿವಾಹ ಮಾಡಿಕೊಳ್ಳುವುದಾಗಿ ನಂಬಿಸುವ ಕೃತ್ಯಕ್ಕೆ ಕಡಿವಾಣ ಹಾಕಲು ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡಲಾಗುವುದು ಎಂದರು.