ಸೂಳೇಬೈಲ್ ಸರ್ಕಾರಿ ಪ್ರೌಢಶಾಲೆಯಲ್ಲಿ ನೂತನ ಕೊಠಡಿಗಳನ್ನು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಉದ್ಘಾಟಿಸಿದರು. ಶಾರದಾ ಪೂರ್ರ‌್ಯಾನಾಯ್ಕ, ಡಾ. ಧನಂಜಯ ಸರ್ಜಿ, ಡಿ.ಎಸ್.ಅರುಣ್, ಪ್ರಶಾಂತ್, ಕುಮಾರ್ ಪಾಲ್ ಜೈನ್, ಸುಶೃತ್ ಬೆಳಗೂರ, ಈಶ್ವರ ಸರ್ಜಿ, ಆದಿತ್ಯ ಆಚಾರ್ಯ ಇದ್ದರು. 
ನ್ಯೂಸ್

ಸಮಾಜದ ಅಭಿವೃದ್ಧಿಗೆ ಕಾರ್ಪೋರೇಟ್ ನಿಧಿ ಬುನಾದಿ

ಶಿವಮೊಗ್ಗ: ಎಲ್ಲ ಸಾಮಾಜಿಕ ಕಾರ್ಯಗಳನ್ನೂ ಸರ್ಕಾರವೇ ಮಾಡಲು ಸಾಧ್ಯವಿಲ್ಲ. ಹಾಗಾಗಿ ಕಾರ್ಪೊರೇಟ್ ವಲಯದ ಸಾಮಾಜಿಕ ಜವಾಬ್ದಾರಿ ನಿಧಿಯು ಸಮಾಜದ ಅಭಿವೃದ್ಧಿಗೆ ಬುನಾದಿಯಾಗಬೇಕಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

ನಗರದ ಹೊರವಲಯದ ಸೂಳೇಬೈಲ್ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಶಿವಮೊಗ್ಗ ಮಲೆನಾಡು ರೌಂಡ್ ಟೇಬಲ್-266 ನಿಂದ ಕಾರ್ಪೋರೇಟ್ ಸಾಮಾಜಿಕ ನಿಧಿ ಹಾಗೂ ವಿವಿಧ ದಾನಿಗಳಿಂದ ಸಂಗ್ರಹವಾದ 23 ಲಕ್ಷ ರೂ. ಮೊತ್ತದಲ್ಲಿ ಮೊದಲ ಅಂತಸ್ತಿನಲ್ಲಿ ನಿರ್ಮಿಸಿರುವ 3 ನೂತನ ಕೊಠಡಿ ಉದ್ಘಾಟಿಸಿ ಮಾತನಾಡಿದರು.

ಸಮಾಜ ಮುಖಿ ಕೆಲಸಗಳನ್ನು ದೇಶಾದ್ಯಂತ ಸದ್ದಿಲ್ಲದೇ ರೋಟರಿ ಸಂಸ್ಥೆಗಳು, ರೌಂಡ್ ಟೇಬಲ್ ಸಂಸ್ಥೆಗಳು ವಿವಿಧ ಸಂಸ್ಥೆಗಳ ಸಿಎಸ್‌ಆರ್ ನಿಧಿ, ಕೊಡುಗೈ ದಾನಿಗಳಿಂದ ಸಂಗ್ರಹಿಸಿ, ಕ್ರೋಢಿಕರಿಸಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ತನ್ನದೇ ಆದ ರೀತಿಯಲ್ಲಿ ಶ್ರಮಿಸುತ್ತಿವೆ ಎಂದು ಶ್ಲಾಘಿಸಿದರು.

ಶಾಸಕಿ ಶಾರದಾ ಪೂರ್ರ‌್ಯಾನಾಯ್ಕ ಮಾತನಾಡಿ, ಶಿವಮೊಗ್ಗ ಮಲೆನಾಡು ರೌಂಡ್ ಟೇಬಲ್-266 ಸಂಸ್ಥೆಯು ಜಿಲ್ಲೆಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಿಗೆ ತನ್ನದೇ ಆದ ರೀತಿಯಲ್ಲಿ ಹಲವಾರು ಕೊಡುಗೆಗಳನ್ನು ನೀಡುತ್ತಿದ್ದು, ಈ ಸಂಸ್ಥೆಯು ಬಹಳ ಎತ್ತರಕ್ಕೆ ಬೆಳೆಯಲಿ ಆಶಿಸಿದರು.

ಎಂಎಲ್‌ಸಿ ಡಿ.ಎಸ್.ಅರುಣ್, ಎಂಎಲ್‌ಸಿ ಡಾ. ಧನಂಜಯ ಸರ್ಜಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಶಿವಮೊಗ್ಗ ಪಿಯರ್ ಲೈಟ್ ಲೈನರ್ಸ್ ಪ್ರೈ.ಲಿ. ಸಹಭಾಗಿತ್ವ ಹಾಗೂ ಪ್ರಾಯೋಜಕತ್ವದಲ್ಲಿ ಜಿಲ್ಲೆಯ 7 ಸರ್ಕಾರಿ ಕಿರಿಯ/ಹಿರಿಯ ಪ್ರಾಥಮಿಕ ಶಾಲೆಗಳಿಗೆ 5 ಲಕ್ಷ ರೂ. ವೆಚ್ಚದಲ್ಲಿ ಶುದ್ಧವಾದ ಕುಡಿಯುವ ನೀರಿನ ಘಟಕಗಳನ್ನು ಸಂಸದರ ಮೂಲಕ ಶಾಲೆಗಳಿಗೆ ಹಸ್ತಾಂತರಿಸಲಾಯಿತು. ಕಾಡಾ ಅಧೀಕ್ಷಕ ಇಂಜಿನಿಯರ್ ಪ್ರಶಾಂತ್, ವಿವಿಧ ರೌಂಟ್ ಟೇಬಲ್ ಮುಖ್ಯಸ್ಥ ಕುಮಾರ್ ಪಾಲ್ ಜೈನ್, ಸುಶೃತ್ ಬೆಳಗೂರ, ಈಶ್ವರ ಸರ್ಜಿ, ಆದಿತ್ಯ ಆಚಾರ್ಯ, ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು, ಮುಖ್ಯ ಶಿಕ್ಷಕರು ಮತ್ತು ಶಾಲಾ ಶಿಕ್ಷಕರು ಇದ್ದರು.