ನ್ಯೂಸ್

ಕರೊನಾ ವೈರಸ್ ಎಫೆಕ್ಟ್​; ರಣರಂಗವಾಯ್ತು ಕೋಲ್ಕತ್ತ ಡಂ ಡಂ ಜೈಲು, ಪೊಲೀಸ್ ಸಿಬ್ಬಂದಿ ಮೇಲೆ ಕಲ್ಲು ತೂರಾಟ

ಕರೊನಾ ವೈರಸ್ ಎಂತೆಂಥಾ ಅವಾಂತರಕ್ಕೆ ಕಾರಣವಾಗಲಿದೆಯೋ ಗೊತ್ತಿಲ್ಲ. ಈಗ ಇದೇ ವೈರಸ್ ವಿಚಾರಕ್ಕೆ ಕೋಲ್ಕತ್ತದ ಡಂ ಡಂ ಜೈಲು ಮಾತ್ರ ರಣರಂಗವಾಗಿ ಮಾರ್ಪಾಟಾಗಿದೆ.

ಜೈಲಿನಲ್ಲಿ ಕೈದಿಗಳು ಮೊದಲು ತಮ್ಮತಮ್ಮಲ್ಲೇ ಗಲಾಟೆ ಶುರುಮಾಡಿಕೊಂಡು ನಂತರ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ, ಹೊಡೆದಾಟ ನಡೆಸಿದ್ದಾರೆ. ಜೈಲಿನ ಆವರಣದಲ್ಲಿದ್ದ ಅನೇಕ ವಸ್ತುಗಳನ್ನು ನಾಶಪಡಿಸಿದ್ದಾರೆ. ಅಲ್ಲಿನ ಆಸ್ತಿಪಾಸ್ತಿ ಹಾಳು ಮಾಡಲೂ ಪ್ರಯತ್ನಿಸಿದ್ದಾರೆ. ಕಲ್ಲುಗಳನ್ನು ತೂರಿದ್ದಾರೆ. ಬೆಂಕಿಯನ್ನೂ ಹಚ್ಚಿದ್ದಾರೆ. ಇದೆಲ್ಲದಕ್ಕೂ ಕರೊನಾ ವೈರಸ್​ ಕಾರಣ !

ಪೊಲೀಸ್ ಹಿರಿಯ ಅಧಿಕಾರಿಗಳು, ಅಗ್ನಿಶಾಮಕ ದಳದ ಸಿಬ್ಬಂದಿ ಜೈಲು ಆವರಣದೊಳಗೆ ಪ್ರವೇಶ ಮಾಡಿದ್ದು, ಗಲಭೆಯನ್ನು ನಿಯಂತ್ರಿಸಲು ಪ್ರಯತ್ನ ಪಡುತ್ತಿದ್ದಾರೆ.

ಇಂದು ಬೆಳಗ್ಗೆ ವಿಚಾರಣಾಧೀನ ಕೈದಿಗಳು ಮತ್ತು ಕೈದಿಗಳ ನಡುವೆ ಸಣ್ಣ ಗಲಾಟೆ ಶುರುವಾಯಿತು. ಅದೂ ಕೂಡ ಮಾಸ್ಕ್​, ಸ್ಯಾನಿಟೈಸರ್​ ವಿಚಾರಕ್ಕೆ ಎನ್ನಲಾಗಿದೆ. ಮಧ್ಯಪ್ರವೇಶ ಮಾಡಿದ ಪೊಲೀಸರು ಎಲ್ಲರನ್ನೂ ಸಮಾಧಾನಗೊಳಿಸಿ, ಭದ್ರತೆಗಾಗಿ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಿದರು. ಆದರೆ ನಂತರ ಕೈದಿಗಳೆಲ್ಲ ಸೇರಿ ಜೈಲು ಅಧಿಕಾರಿಗಳ ಮೇಲೆಯೇ ದಾಳಿ ಮಾಡಿದ್ದಾರೆ. ಕಲ್ಲುಗಳನ್ನು ತೂರಲು ಪ್ರಾರಂಭಿಸಿದರು. ಅದರಲ್ಲಿ ಕೆಲವರಂತೂ ಉದ್ದನೆಯ ಏಣಿಗಳ ಸಹಾಯದಿಂದ ಜೈಲು ಗೋಡೆಯನ್ನೇ ಹಾರಲು ಯತ್ನಿಸಿದರು ಎಂದೂ ವರದಿಯಾಗಿದೆ. ಆದರೆ ಯಾರೂ ಅಲ್ಲಿಂದ ಪರಾರಿಯಾದ ಬಗ್ಗೆ ಜೈಲು ಆಡಳಿತ ಸ್ಪಷ್ಟಪಡಿಸಿಲ್ಲ.

ಜೈಲು ಸಿಬ್ಬಂದಿ ತಮ್ಮ ಕುಟುಂಬದವರ ಭೇಟಿಗೆ ಅವಕಾಶ ಕೊಡುತ್ತಿಲ್ಲ ಎಂಬುದಾಗಿ ಕೈದಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ. ಇದಕ್ಕೆ ಪ್ರತ್ಯುತ್ತರ ನೀಡಿರುವ ಜೈಲು ಆಡಳಿತ, ಕರೊನಾ ವೈರಸ್ ಭೀತಿಯಿಂದಾಗಿ ಹೊರಗಿನವರ ಪ್ರವೇಶಕ್ಕೆ ಅವಕಾಶ ಮಾಡಿಕೊಡುತ್ತಿಲ್ಲ ಎಂದು ಸ್ಪಷ್ಟನೆ ನೀಡಿದೆ.

ಈ ವಿಚಾರಣಾಧೀನ ಕೈದಿಗಳ ಜಾಮೀನು ಅರ್ಜಿ ವಿಚಾರಣೆ ಮಾಡಲು ಕೋರ್ಟ್​ಗಳು ತೆರೆದಿಲ್ಲ. ಹಾಗಾಗಿ ಅನಿವಾರ್ಯವಾಗಿ ಮುಂದೂಡಬೇಕಾಗಿದೆ. ಎಲ್ಲರೂ ಮಾಸ್ಕ್ ಮತ್ತು ಸ್ಯಾನಿಟೈಸರ್​ಗಳಿಗಾಗಿ ಮುಗಿಬೀಳುತ್ತಿದ್ದಾರೆ ಎನ್ನಲಾಗಿದೆ.(ಏಜೆನ್ಸೀಸ್)