ನ್ಯೂಸ್

ಇನ್ನು ಜಿಲ್ಲಾ ಹೊಣೆ: ಕೆಳಹಂತಕ್ಕೆ ಕರೊನಾ ತಡೆ ಜವಾಬ್ದಾರಿ

ರಮೇಶ್​ ಕುಮಾರ್​​ ಬಿ ಎಡಮೋಳೆ

ಬೆಂಗಳೂರು: ವಿವಿಧ ಕ್ರಮಗಳ ಮೂಲಕ ಕರೊನಾ ವಿರುದ್ಧ ಹೋರಾಡುತ್ತಲೇ, ‘ಕರೊನಾ ಜತೆಗೆ ಬದುಕುವುದನ್ನು ಕಲಿಯಬೇಕು’ ಎಂದು ಜನರಲ್ಲಿ ಧೈರ್ಯ ತುಂಬಿದ್ದ ರಾಜ್ಯ ಸರ್ಕಾರವೀಗ ಮಹಾಮಾರಿಯನ್ನು ಕಟ್ಟಿಹಾಕುವ ಹೊಣೆಗಾರಿಕೆಯನ್ನು ಜಿಲ್ಲಾಡಳಿತಗಳಿಗೆ ವರ್ಗಾವಣೆ ಮಾಡಿದೆ.

ಆಗಸ್ಟ್ ವೇಳೆಗೆ ರಾಜ್ಯದಲ್ಲಿ ಕರೊನಾ ಸೋಂಕಿತರ ಸಂಖ್ಯೆ 2 ಲಕ್ಷ ದಾಟುವುದಾಗಿ ತಜ್ಞರು ಅಂದಾಜಿಸಿದ್ದರೂ ಮತ್ತಷ್ಟು ಕಠಿಣ ಕ್ರಮಗಳ ಮೂಲಕ ಸಿದ್ಧತೆ ಆರಂಭಿಸಬೇಕಾದ ಸರ್ಕಾರ ತನ್ನ ಗುರುತರ ಹೊಣೆಗಾರಿಕೆಯನ್ನು ಕೆಳಹಂತಕ್ಕೆ ವರ್ಗಾಯಿಸಲು ಮುಂದಾಗಿದೆಯೇ ಎಂಬ ಸಂಶಯವೂ ಮೂಡಿದೆ.

ರಾಜ್ಯದಲ್ಲಿ 711 ‘ಆರೋಗ್ಯ ಕವಚ 108’ ಆಂಬುಲೆನ್ಸ್ ಗಳಿವೆ. ಕರೊನಾ ಸೋಂಕಿತರು, ಪ್ರಾಥಮಿಕ, ದ್ವಿತೀಯ ಹಂತದ ಸೋಂಕಿತರ ಸ್ಥಳಾಂತರ, ಕರೊನಾ ಗಂಟಲು ದ್ರವ ಮಾದರಿ ಸಾಗಣೆ, ಕ್ವಾರಂಟೈನ್ ಹಾಗೂ ಮತ್ತಿತರ ಸೋಂಕು ಸಂಬಂಧಿ ಕೆಲಸಗಳಿಗೆ ಜಿಲ್ಲೆಗೆ 2-3 ಆಂಬುಲೆನ್ಸ್​ಗಳನ್ನು ಪ್ರತ್ಯೇಕವಾಗಿಡಲಾಗಿತ್ತು. ಬಿಬಿಎಂಪಿ, ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಗಳಿಗೆ ಈ ಆಂಬುಲೆನ್ಸ್ ಬಳಸದೆ ಅವುಗಳನ್ನು ಕರೊನೇತರ ರೋಗಿಗಳಿಗೆ ಮೀಸಲಿಡಲಾಗಿತ್ತು. ಕರೊನಾ ಸೋಂಕಿಗೆಂದೇ ಖಾಸಗಿ ಆಂಬುಲೆನ್ಸ್​ಗಳನ್ನು ಬಾಡಿಗೆ ಆಧಾರದಲ್ಲಿ ಪಡೆದು ನಿರ್ವಹಣೆ ಮಾಡಲಾಗುತ್ತಿತ್ತು. ಈಗ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಿಗಾಗಿ ಬಾಡಿಗೆ ಆಧಾರದಲ್ಲಿ ಪಡೆದ 50 ಆಂಬುಲೆನ್ಸ್​ಗಳನ್ನು ಸೋಮವಾರದಿಂದ ವಾಪಸ್ ಕಳುಹಿಸಲಾಗುತ್ತಿದೆ.

ಆಯಾ ಜಿಲ್ಲೆಗಳ ಜಿಲ್ಲಾಡಳಿತಗಳೇ ಇನ್ನು ಮುಂದೆ ಆಂಬುಲೆನ್ಸ್ ಸೇರಿದಂತೆ ಕರೊನಾ ನಿರ್ವಹಣಾ ಹೊರೆ ಹೊರಬೇಕೆಂದು ಸುತ್ತೋಲೆಯೊಂದನ್ನು ಆರೋಗ್ಯ ಇಲಾಖೆ ಹೊರಡಿಸಿದೆ.

ಸಮಿತಿ ರಚನೆ

ಜೂ.15 ರಿಂದ ರಾಜ್ಯ ಮಟ್ಟದ ನಿರ್ವಹಣಾ ಹೊಣೆಯನ್ನು ಸಾಧ್ಯವಾದಷ್ಟು ಮಟ್ಟಿಗೆ ಹಸ್ತಾಂತರಿಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ. ಅದಕ್ಕಾಗಿ ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿ, ಜಿಲ್ಲಾ ಶಸ್ತ್ರ ಚಿಕಿತ್ಸಕರು, ಜಿಲ್ಲಾ ಸರ್ವೆಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಲು ಸೂಚಿಸಿದ್ದು, ಈ ಸಮಿತಿಗಳೇ ಕರೊನಾ ಸೋಂಕು ನಿಯಂತ್ರಣ ಚಟುವಟಿಕೆಗಳನ್ನು ನಿರ್ವಹಿಸಲು ನಿರ್ದೇಶಿಸಲಾಗಿದೆ. ಜತೆಗೆ ಹೆಚ್ಚುವರಿ ಆಂಬುಲೆನ್ಸ್ ಪಡೆದುಕೊಳ್ಳುವ ಅನಿವಾರ್ಯತೆ ಜಿಲ್ಲಾಡಳಿತಗಳ ಮೇಲೆ ಬಿದ್ದಿದೆ.

ಯಾವ ಜಿಲ್ಲೆಗೆ ಹೆಚ್ಚಿನ ಹೊರೆ

ಉಡುಪಿ, ಕಲಬುರಗಿ, ಯಾದಗಿರಿ,ಬೀದರ್, ಬೆಂಗಳೂರು ನಗರ, ರಾಯಚೂರು, ಮಂಡ್ಯ, ಬೆಳಗಾವಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕರೊನಾ ಸೋಂಕು ಉಲ್ಬಣಗೊಳ್ಳುತ್ತಿದ್ದು, ಇಂತಹ ಕಡೆಗಳಲ್ಲೆಲ್ಲ ಜಿಲ್ಲಾಡಳಿತಗಳಿಗೆ ಹೆಚ್ಚಿನ ಹೊರೆ ಬೀಳಲಿದೆ.

ಏಕೆ ವರ್ಗಾವಣೆ?

*ಕರೊನಾ ಕಡೆಗೇ ಹೆಚ್ಚು ಒತ್ತು ಕೊಟ್ಟಿರುವುದರಿಂದ ಆರೋಗ್ಯ ಇಲಾಖೆಯ ನಿತ್ಯದ ಕಾರ್ಯಗಳಿಗೆ ಅಡ್ಡಿಯಾಗಿದೆ

*ಕರೊನೇತರ ರೋಗಿಗಳ ಮೇಲೆ ನಿಗಾ ವಹಿಸಲು ಆಗುತ್ತಿಲ್ಲ

*ನಿರೀಕ್ಷಿತ ಸಂಖ್ಯೆಯಲ್ಲಿ ಶಸ್ತ್ರಚಿಕಿತ್ಸೆಗಳು ನಡೆಯುತ್ತಿಲ್ಲ. ರಾಷ್ಟ್ರೀಯ ಮತ್ತು ರಾಜ್ಯ ಆರೋಗ್ಯ ಅಭಿಯಾನಗಳನ್ನು ಕೈಗೆತ್ತಿಕೊಳ್ಳಲಾಗುತ್ತಿಲ್ಲ.

*ಇಮ್ಯೂನೈಸೇಷನ್, ಸ್ಟೆರಿಲೈಸೇಷನ್ ನನೆಗುದಿ ಬೀಳುತ್ತಿವೆ. ಅಂಗವಿಕಲರ ಪ್ರಮಾಣಪತ್ರ ಕೊಡಲು ಆಗುತ್ತಿಲ್ಲ.

*ಬಜೆಟ್​ನಲ್ಲಿ ಘೋಷಿಸಿದ ಕಾರ್ಯಕ್ರಮಗಳ ಅನುಷ್ಠಾನವಾಗುತ್ತಿಲ್ಲ.

ಸೂಕ್ಷ್ಮತೆಯ ಅರಿವಿರುತ್ತೆ

ಯಾವುದೋ ಒಂದು ಮೂಲೆಯಲ್ಲಿರುವ ಪ್ರಕರಣಗಳನ್ನು ರಾಜ್ಯಮಟ್ಟದಿಂದ ನಿಯಂತ್ರಿಸುವುದು ಕಷ್ಟ. ಸ್ಥಳೀಯ ಆಡಳಿತಗಳಿಗೆ ಅಲ್ಲಿನ ಪರಿಸ್ಥಿತಿಯ ಸೂಕ್ಷಾ್ಮತಿಸೂಕ್ಷ್ಮಗಳು ಗಮನದಲ್ಲಿರುತ್ತವೆ. ಹಾಗಾಗಿ ಸೋಂಕು ನಿಯಂತ್ರಣ ಜಿಲ್ಲಾಡಳಿತಗಳಿಂದಲೇ ಆಗಲಿ ಎಂಬ ಉದ್ದೇಶವೂ ಇದರ ಹಿಂದಿದೆ ಎಂದು ಹೇಳಲಾಗುತ್ತಿದೆ.

ಹೊಣೆ ಸಡಿಲಕ್ಕೆ ಕಾತುರ

ಅನೇಕ ಕಡೆ ಕಂದಾಯ ಇಲಾಖೆ ಅಧಿಕಾರಿಗಳೂ ಕೂಡ ಕರೊನಾ ತಲೆನೋವಿನಿಂದ ಪಾರಾಗಲು ತುದಿಗಾಲ ಮೇಲೆ ನಿಂತಿದ್ದಾರೆ. ಕೆಲವು ಜಿಲ್ಲಾಧಿಕಾರಿಗಳು/ಉಪ ವಿಭಾಗಾಧಿಕಾರಿಗಳು ‘ನೀವೇ ನಿರ್ವಹಿಸಿ, ನೆರವು ಬೇಕಿದ್ದರೆ ಕೇಳಿ’ ಎಂದು ಈಗಾಗಲೇ ಡಿಎಚ್​ಒಗಳಿಗೆ ಸೂಚಿಸುತ್ತಿರುವುದು ಕೇಳಿಬರುತ್ತಿದೆ. ಹಾಗಾಗಿ ಡಿಎಚ್​ಒಗಳು ರೋಸಿ ಹೋಗಿದ್ದಾರೆ. ಕ್ವಾರಂಟೈನ್, ಕ್ವಾರಂಟೈನ್​ಗೆ ಕಟ್ಟಡಗಳನ್ನು ವಶಪಡಿಸಿಕೊಳ್ಳುವುದು ಡಿಎಚ್​ಒಗಳಿಗೆ ಕಷ್ಟವಾಗಲಿದೆ ಎಂದು ಹೇಳಲಾಗುತ್ತಿದೆ.

ಏನೇನು ವರ್ಗಾವಣೆ?

ಕರೊನಾ ನಿಯಂತ್ರಣಕ್ಕಾಗಿ ರಚಿಸಿದ್ದ ಸ್ಕಾ್ವಡ್, ವಾರ್ ರೂಂ, ಕಾಲ್ ಸೆಂಟರ್, ಆಂಬುಲೆನ್ಸ್ ಸೇರಿದಂತೆ ಕರೊನಾ ಮೇಲ್ವಿಚಾರಣೆಯ ಎಲ್ಲ ಹೊಣೆಗಾರಿಕೆ.

| ವಿಲಾಸ ಮೇಲಗಿರಿ