ನ್ಯೂಸ್

ಸೋಂಕಿನಿಂದ ಮುಕ್ತಗೊಂಡು ಮಗುವಿಗೆ ಜನ್ಮ ನೀಡಿದ ಮಹಿಳೆ: ಕೇರಳದಲ್ಲಿ ಗರ್ಭಿಣಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ

ಕಣ್ಣೂರು: ಗಲ್ಫ್‌ನಿಂದ ಬಂದ ಗಂಡನಿಂದಾಗಿ ಕರೊನಾ ಸೋಂಕಿನಿಂದ ನರಳುತ್ತಿದ್ದ ತುಂಬು ಗರ್ಭಿಣಿಯೊಬ್ಬರು ಇಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸೋಂಕಿನಿಂದಾಗಿ ಕಳೆದ ಮಾರ್ಚ್‌ನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಕೂಡ ಈಗ ಸೋಂಕುಮುಕ್ತಗೊಂಡಿದ್ದಾರೆ.

ಕಣ್ಣೂರಿನ ಪರಿಯಾರಂನಲ್ಲಿರುವ ಸರ್ಕಾರಿ ವೈದ್ಕಕೀಯ ಕಾಲೇಜಿನಲ್ಲಿ ದಾಖಲಾಗಿದ್ದ ಕಾಸರಗೋಡಿನ ಮಹಿಳೆ ಮತ್ತು ಮಗು ಸಂಪೂರ್ಣ ಆರೋಗ್ಯದಿಂದ ಇದ್ದಾರೆ, ಜತೆಗೆ ಗಲ್ಫ್‌ನಿಂದ ಬಂದಿರುವ ವ್ಯಕ್ತಿಗೆ ನೀಡಿರುವ ಚಿಕಿತ್ಸೆಯೂ ಫಲದಾಯಕವಾಗಿದ್ದು, ಅವರೂ ಸೋಂಕು ಮುಕ್ತರಾಗಿದ್ದಾರೆ ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಎರಡು ದಿನಗಳ ಮುಂಚೆ ಮಳೆಯಲ್ಲಿ ನೆಗೆಟಿವ್‌ ಬಂದಿದ್ದರೂ, ಅವರನ್ನು ಪ್ರತ್ಯೇಕ ವಾರ್ಡ್‌ಗೆ ಶಿಫ್ಟ್‌ ಮಾಡಿ ನಂತರ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಇದು ಅತ್ಯಂತ ಸೂಕ್ಷ್ಮ ಶಸ್ತ್ರಚಿಕಿತ್ಸೆ ಆಗಿತ್ತು. ಅದರಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ ಎಂದಿರುವ ಮುಖ್ಯಮಂತ್ರಿಗಳು ವೈದ್ಯಕೀಯ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಸಾಮಾನ್ಯವಾಗಿ ಗರ್ಭಿಣಿಯರು ಸೋಂಕಿನಿಂದ ಬಳಲುತ್ತಿದ್ದರೆ, ಆಕೆಯ ಜತೆಗೆ ಮಗುವಿನ ಆರೋಗ್ಯವನ್ನೂ ಕಾಪಾಡುವುದು ವೈದ್ಯರಿಗೆ ದೊಡ್ಡ ಸವಾಲಿನ ಕೆಲಸವೇ. ಮಗುವಿಗೆ ಸೋಂಕು ತಗುಲದಂತೆ ಬಹಳ ಎಚ್ಚರಿಕೆಯಿಂದ ಚಿಕಿತ್ಸೆ ನೀಡಬೇಕು. ಅದನ್ನು ಮಾಡುವಲ್ಲಿ ವೈದ್ಯರು ಯಶಸ್ವಿಯಾಗಿದ್ದು, ಇದು ತುಂಬಾ ಹೆಮ್ಮೆಯ ಕಾರ್ಯ ಎಂದು ಮುಖ್ಯಮಂತ್ರಿಗಳ ಶ್ಲಾಘಿಸಿದ್ದಾರೆ.

ಕರೊನಾ ಸೋಂಕಿನಿಂದ ಬಳಲುತ್ತಿರುವ ಐದು ಗರ್ಭಿಣಿಯರು ಈ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಉಳಿದ ನಾಲ್ವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿತ ಗರ್ಭಿಣಿಗೆ ಯಶಸ್ವಿಯಾಗಿ ಮಗು ಹುಟ್ಟಿರುವುದು ಕೇರಳದಲ್ಲಿ ಇದು ಮೊದಲು ಹಾಗೂ ಭಾರತದಲ್ಲಿ ಮೂರನೆಯ ಪ್ರಕರಣ ಎನ್ನಲಾಗಿದೆ.

ಮಹಿಳೆಯಲ್ಲಿ ಕರೊನಾ ಸೋಂಕು ಇಲ್ಲದಿದ್ದರೂ, ಕೆಲವು ದಿನಗಳವರೆಗೆ ನವಜಾತ ಶಿಶುವನ್ನು ತಾಯಿಯಿಂದ ದೂರವಿಡಲಾಗುತ್ತದೆ. ಕೆಲವು ದಿನಗಳ ನಂತರ ಮಾತ್ರ ಶಿಶುವಿಗೆ ತಾಯಿಯ ಎದೆ ಹಾಲು ನೀಡಲಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

ಕೇರಳದಲ್ಲಿ 387 ಸೋಂಕು ಪ್ರಕರಣ ಪತ್ತೆಯಾಗಿದ್ದು, 211 ಮಂದಿ ಗುಣಮುಖರಾಗಿದ್ದಾರೆ. ಕರೊನಾದಿಂದ ಮೂವರು ಮೃತಪಟ್ಟಿದ್ದಾರೆ.
ಏಜೆನ್ಸೀಸ್‌