ನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ಕರೊನಾವೈರಸ್ ಆರ್ಭಟ ನಿಯಂತ್ರಿಸಲು ಲಾಕ್ಡೌನ್ ಅವಧಿ ವಿಸ್ತರಿಸುವಂತೆ ಬಹುತೇಕ ರಾಜ್ಯಗಳ ಮನವಿಗೆ ಪ್ರಧಾನಿ ನರೇಂದ್ರ ಮೋದಿ ಸಹಮತ ವ್ಯಕ್ತಪಡಿಸಿದ್ದು, ಈ ಕುರಿತ ಅಧಿಕೃತ ಘೋಷಣೆಯನ್ನಷ್ಟೇ ಬಾಕಿ ಉಳಿಸಿದ್ದಾರೆ.
ಕರೊನಾ ಉಪಟಳ ಹೆಚ್ಚುತ್ತಿರುವ ಬಗ್ಗೆ ಮತ್ತು ನಿಯಂತ್ರಣಕ್ಕೆ ಕೈಗೊಂಡಿರುವ, ಮುಂದೆ ಕೈಗೊಳ್ಳಬೇಕಾದ ಕ್ರಮದ ಕುರಿತು ದೇಶದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಶನಿವಾರ ವಿಡಿಯೋ ಕಾನ್ಪರೆನ್ಸ್ ಮೂಲಕ ಪ್ರಧಾನಿ ಮೋದಿ ಸಮಾಲೋಚನೆ ನಡೆಸಿದರು. ಮಧ್ಯಾಹ್ನ 1 ಗಂಟೆಗೆ ಶುರುವಾಗಿ 4 ತಾಸು ನಡೆದ ಸಭೆಯಲ್ಲಿ ಪಂಜಾಬ್, ದೆಹಲಿ, ಮಹಾರಾಷ್ಟ್ರ, ಉತ್ತರಪ್ರದೇಶ, ಪಶ್ಚಿಮ ಬಂಗಾಳ ಸೇರಿ ಬಹುತೇಕ ಎಲ್ಲ ರಾಜ್ಯಗಳ ಸಿಎಂಗಳು ಲಾಕ್ಡೌನ್ ಅವಧಿ ವಿಸ್ತರಿಸುವಂತೆ ಮನವಿ ಮಾಡಿದರು. ಮುಖ್ಯಮಂತ್ರಿಗಳು ತಂತಮ್ಮ ರಾಜ್ಯದಲ್ಲಿನ ಪರಿಸ್ಥಿತಿ, ನಿಯಂತ್ರಣ ಕ್ರಮದ ಬಗ್ಗೆ ವಿವರ ಮತ್ತು ಕೆಲವು ಸಲಹೆ ನೀಡಿದರು. ಬಿಜೆಪಿಯೇತರ ಸರ್ಕಾರಗಳಿರುವ ಎಲ್ಲ ರಾಜ್ಯಗಳ ಸಿಎಂಗಳು ಕರೊನಾ ವಿರುದ್ಧದ ಹೋರಾಟಕ್ಕಾಗಿ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಒತ್ತಾಯಿಸಿದರು. ಗೃಹ ಸಚಿವ ಅಮಿತ್ ಷಾ, ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇದ್ದರು.
ಮೋದಿ ಸೂಚನೆ: ಸಮಾಲೋಚನೆ ವೇಳೆ ಮುಖ್ಯಮಂತ್ರಿಗಳಿಗೆ ಹಲವು ಸೂಚನೆಗಳನ್ನು ನೀಡಿದ ಪ್ರಧಾನಿ ಮೋದಿ, ‘ಕರೊನಾ ವಿರುದ್ಧ ಹೆಗಲೆಣೆಯಾಗಿ ಹೋರಾಡೋಣ. ನಾನು 247 ಸಮಯ ಲಭ್ಯವಿದ್ದು, ಮುಖ್ಯಮಂತ್ರಿಗಳು ಯಾವುದೇ ಸಮಯದಲ್ಲಾದರೂ ಕರೆ ಮಾಡಿ ರ್ಚಚಿಸಬಹುದು ಹಾಗೂ ಸಲಹೆ ನೀಡಬಹುದು ಎಂದು ತಿಳಿಸಿದರು.
ಲಾಕ್ಡೌನ್ ನಿಯಮ ಮತ್ತು ಸಾಮಾಜಿಕ ಅಂತರ ಪರಿಪಾಲನೆ ಪ್ರತಿಯೊಬ್ಬರ ಜೀವ ರಕ್ಷಣೆಗೆ ಅತ್ಯವಶ್ಯಕ. ಜಾನ್ ಹೈ ತೋ ಜಹಾನ್ ಹೈ (ಜೀವ ಇದ್ದರೇ ಜಗತ್ತು) ಎಂದು ಈ ಹಿಂದೆಯೇ ಹೇಳಿದ್ದೆ. ದೇಶದ ಹೆಚ್ಚಿನ ಜನರು ಈ ವಿಷಯ ಅರ್ಥೈಸಿಕೊಂಡು ತಮ್ಮ ಮನೆಗಳಲ್ಲೇ ಇದ್ದಾರೆ. ಆದರೆ ಈಗ ಭಾರತದ ಉಜ್ವಲ ಭವಿಷ್ಯಕ್ಕಾಗಿ ಹಾಗೂ ಸ್ವಾಸ್ಥ್ಯ ದೇಶಕ್ಕಾಗಿ ಕರೊನಾ ವಿರುದ್ಧದ ನಮ್ಮ ಹೋರಾಟ ಬಲವಾಗುತ್ತದೆ ಎಂದರು.
ಹತ್ತಿಬಟ್ಟೆ ಮಾಸ್ಕ್
ವಿಡಿಯೋ ಕಾನ್ಪರೆನ್ಸ್ನಲ್ಲಿ ನರೇಂದ್ರ ಮೋದಿ ಕೂಡ ಇದೇ ಮೊದಲ ಬಾರಿಗೆ ಮಾಸ್ಕ್ ಧರಿಸಿದ್ದರು. ಹತ್ತಿ ಬಟ್ಟೆಯಿಂದ ಮನೆಯಲ್ಲೇ ತಯಾರಿಸಲಾಗಿದ್ದ ಮಾಸ್ಕ್ ಅದಾಗಿತ್ತು. ಎಲ್ಲ ಮುಖ್ಯಮಂತ್ರಿಗಳೂ ಮಾಸ್ಕ್ ಧರಿಸಿ ಕಾನ್ಪರೆನ್ಸ್ನಲ್ಲಿ ಭಾಗಿಯಾಗಿದ್ದರು.
ಲಾಕ್ಡೌನ್ ಘೋಷಿಸದಿದ್ದರೆ 2 ಲಕ್ಷ ಕೇಸ್!
ದೇಶದಲ್ಲಿ ಲಾಕ್ಡೌನ್ ಸೇರಿ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದಿದ್ದರೆ ಈಗ ಪ್ರಕರಣಗಳ ಸಂಖ್ಯೆ ಎರಡು ಲಕ್ಷ ಸಮೀಪಿಸುವ ಅಪಾಯವಿತ್ತು ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್ ತಿಳಿಸಿದ್ದಾರೆ. ಲಾಕ್ಡೌನ್ ವಿಧಿಸದೆ ಹೋಗಿದ್ದರೆ ಏ.15ರ ವೇಳೆಗೆ ಸೋಂಕಿತರ ಸಂಖ್ಯೆ 8 ಲಕ್ಷದವರೆಗೂ ಮುಟ್ಟುವ ಸಾಧ್ಯತೆ ಇತ್ತು ಎಂದಿದ್ದಾರೆ.
ಮತ್ತೆರಡು ರಾಜ್ಯದಲ್ಲಿ ವಿಸ್ತರಣೆ
ಪಶ್ಚಿಮ ಬಂಗಾಳ ಮತ್ತು ಮಹಾರಾಷ್ಟ್ರ ಸರ್ಕಾರಗಳು ಲಾಕ್ಡೌನ್ ಅವಧಿಯನ್ನು ತಿಂಗಳ ಅಂತ್ಯದವರೆಗೆ ವಿಸ್ತರಿಸಿದ್ದು, ಈಗಾಗಲೇ ಒಡಿಶಾ ಮತ್ತು ಪಂಜಾಬ್ ಸರ್ಕಾರಗಳೂ ಈ ನಿರ್ಧಾರ ಕೈಗೊಂಡಿವೆ.
ಷರತ್ತಿನ ವಿನಾಯಿತಿ?: ಆರ್ಥಿಕತೆಗೆ ದೊಡ್ಡ ಪ್ರಮಾಣದ ಪೆಟ್ಟು ಬಿದ್ದಿರುವ ಹಿನ್ನೆಲೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಷರತ್ತಿನ ಮೇಲೆ ಕೆಲ ವಲಯಗಳಿಗೆ ವಿನಾಯಿತಿ ನೀಡಬಹುದೆನ್ನಲಾಗಿದೆ.