ನ್ಯೂಸ್

ಶಂಕಿತ ಕರೊನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಆತ್ಮಹತ್ಯೆ; 7ನೇ ಮಹಡಿಯಿಂದ ಬಿದ್ದವನ ರಕ್ತ ತಪಾಸಣೆ ವರದಿ ಇನ್ನೂ ಬಂದಿರಲಿಲ್ಲ...!

ನವದೆಹಲಿ: ಕರೊನಾ ವೈರಸ್​ ತುಂಬ ವೇಗವಾಗಿ ಪಸರಿಸುತ್ತಿದೆ. ಭಾರತದಲ್ಲೂ ದಿನೇದಿನೆ ಪೀಡಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಅಂದರೆ 42 ಮಂದಿಗೆ ಕರೊನಾ ವೈರಸ್ ತಗುಲಿದೆ.

ದೆಹಲಿಯಲ್ಲಿ ಓರ್ವ ವಿದೇಶಿಗ ಸೇರಿ ಒಟ್ಟು 10 ಮಂದಿಯಲ್ಲಿ ವೈರಸ್ ದೃಢಪಟ್ಟಿದ್ದು, ಅವರನ್ನೆಲ್ಲ ವಿವಿಧ ಆಸ್ಪತ್ರೆಗಳ ಐಸೋಲೇಶನ್​ ವಾರ್ಡ್​ನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಮಧ್ಯೆ ದೆಹಲಿಯ ಸಫ್ದರ್​ಜಂಗ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಶಂಕಿತ ಕರೊನಾ ವೈರಸ್​ ಸೋಂಕಿತ ರೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸುಮಾರು 35 ವರ್ಷದ ವ್ಯಕ್ತಿ ಇಂದು ಬೆಳಗ್ಗೆ 9ಗಂಟೆಗೆ ಸಫ್ದರ್​ಜಂಗ್ ಆಸ್ಪತ್ರೆಗೆ ದಾಖಲಾಗಿದ್ದ. ಸಂಜೆ ಆಸ್ಪತ್ರೆಯ ಏಳನೇ ಮಹಡಿಯಿಂದ ಕೆಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರಿಗೆ ವೈದ್ಯರು ಮಾಹಿತಿ ನೀಡಿದ್ದಾರೆ.

ಈತ ಆಸ್ಟ್ರೇಲಿಯಾದ ಸಿಡ್ನಿಯಿಂದ ವಾಪಸ್​ ಆಗಿದ್ದ. ಏರ್​ಪೋರ್ಟ್​ನಲ್ಲಿ ಸ್ಕ್ರೀನಿಂಗ್​ ತಪಾಸಣೆ ಮಾಡಿದಾಗ ಕರೊನಾ ಲಕ್ಷಣಗಳು ಕಂಡುಬಂದಿದ್ದವು. ಆತನಿಗೆ ತೀವ್ರ ತಲೆನೋವು ಕೂಡ ಕಾಡುತ್ತಿತ್ತು. ವಿಮಾನನಿಲ್ದಾಣದಿಂದ ಆಸ್ಪತ್ರೆಗೆ ಕರೆದುಕೊಂಡು ಬಂದು ಪ್ರತ್ಯೇಕ ವಾರ್ಡ್​ನಲ್ಲಿ ದಾಖಲಿಸಿಕೊಳ್ಳಲಾಗಿತ್ತು. ರಕ್ತ ಹಾಗೂ ಗಂಟಲಿನ ಮಾದರಿಯನ್ನು ಲ್ಯಾಬ್​ಗೆ ಕಳಿಸಲಾಗಿದೆ. ಇನ್ನೂ ವರದಿಯೇ ಬಂದಿರಲಿಲ್ಲ. ಆದರೆ ಸಂಜೆಯಷ್ಟರಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. (ಏಜೆನ್ಸೀಸ್)