ನ್ಯೂಸ್

ಕೋವಿಡ್​-19 ಪರೀಕ್ಷಾ ಕಿಟ್​ಗಳನ್ನು ತಯಾರಿಸಲು ಔಷಧ ಉದ್ಯಮಗಳಿಗೆ ಪ್ರಧಾನಿ ಮೋದಿ ಕರೆ

ನವದೆಹಲಿ: ಕರೊನಾ ಸೋಂಕಿತರ ಪ್ರಕರಣಗಳು ಏರುತ್ತಿರುವ ನಡುವೆಯೇ ಔಷಧ ತಯಾರಿಕ ಕಂಪನಿಗಳಿಗೆ ಕೋವಿಡ್​-19 ಪರೀಕ್ಷಾ ಕಿಟ್​ಗಳನ್ನು ತಯಾರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಕರೆ ನೀಡಿದ್ದಾರೆ.

ಔಷಧ ಕಂಪನಿಯ ನಾಯಕರೊಂದಿಗಿನ ಸಂವಾದದಲ್ಲಿ ಪ್ರಧಾನಿ ಮೋದಿ ಈ ಬಗ್ಗೆ ಪ್ರಸ್ತಾಪ ಮಾಡಿದರು. ವೈದ್ಯಕೀಯ ಸಾಧಗಳು ಮತ್ತು ಔಷಧಗಳ ತಯಾರಿಕೆಗೆ ಈಗಾಗಲೇ ಸರ್ಕಾರ 14000 ಕೋಟಿ ರೂ. ಮೌಲ್ಯದ ಯೋಜನೆಗೆ ಚಾಲನೆ ನೀಡಿದೆ ಎಂದರು. ಹೀಗಾಗಿ ಕರೊನಾ ವೈರಸ್​ ವಿರುದ್ಧದ ಹೋರಾಟಕ್ಕಾಗಿ ಪರೀಕ್ಷಾ ಕಿಟ್​ಗಳನ್ನು ತಯಾರಿಸಲು ಹುರಿದುಂಬಿಸಿದರು.

ವಿಡಿಯೋ ಕಾನ್ಫರೆನ್ಸ್​ ಮೂಲಕ ನಡೆದ ಸಂವಾದದಲ್ಲಿ ಔಷಧ ಉದ್ಯಮದ ಅನೇಕ ಪಾಲುದಾರರು ಪಾಲ್ಗೊಂಡಿದ್ದರು. ಈ ವೇಳೆ ಕೋವಿಡ್​ -19 ತಡೆಗಟ್ಟು ನಿಟ್ಟಿನಲ್ಲಿ ಆಗಿರುವ ಪೂರ್ವಸಿದ್ಧತೆಗಳನ್ನು ಪರಿಶೀಲಿಸಿದರು. ಭಾರತ ಆರೋಗ್ಯವಾಗಿರಲು ಔಷಧ ಉದ್ಯಮ ವಲಯ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಪ್ರಧಾನಿ ತಿಳಿಸಿದರು. ಅಲ್ಲದೆ, ಹೊಸ ಹೊಸ ಪರಿಹಾರಗಳನ್ನು ಹುಡುಕುವಂತೆ ಹುರಿದುಂಬಿಸಿದರು.

ನಿಮಗೆ ಸಹಾಯ ನೀಡಲು ಸರ್ಕಾರ ಬದ್ಧವಾಗಿದೆ. ಔಷಧ ಉದ್ಯಮಕ್ಕೆ ಬೇಕಾಗಿರುವ ಸಕ್ರಿಯ ಔಷಧ ಪದಾರ್ಥಗಳನ್ನು ಒದಗಿಸುವ ಮತ್ತು ನಿರ್ವಹಿಸುವ ಕೆಲಸವನ್ನು ಸರ್ಕಾರ ಮಾಡಲಿದೆ ಎಂದು ಭರವಸೆ ನೀಡಿದರು. (ಏಜೆನ್ಸೀಸ್​)