ನ್ಯೂಸ್

ಕರೊನಾ ತಾಂಡವಕ್ಕೆ ತತ್ತರಿಸಿ ಹೋದ ದೊಡ್ಡ ದೇಶಗಳು: ಅಮೆರಿಕದಲ್ಲಿ ಒಂದೇ ದಿನ ನಾಲ್ಕೂವರೆ ಸಾವಿರ ಜನರ ಸಾವು!

ವಾಷಿಂಗ್ಟನ್: ಕರೊನಾ ವೈರಸ್‌ನ ತೀವ್ರ ಹೊಡೆತಕ್ಕೆ ಸಿಲುಕಿರುವ ದೊಡ್ಡ ದೊಡ್ಡ ರಾಷ್ಟ್ರಗಳು ನಲುಗಿಹೋಗುತ್ತಿವೆ. ಅಮೆರಿಕವೊಂದರಲ್ಲಿಯೇ 24 ತಾಸಿನ ಅಂತರದಲ್ಲಿ ನಾಲ್ಕೂವರೆ ಸಾವಿರ ಜನರು ಮೃತಪಟ್ಟಿರುವುದಾಗಿ ವರದಿಯಾಗಿದೆ.

ಬುಧವಾರ ರಾತ್ರಿ 8.30ರಿಂದ 24 ತಾಸಿನ ಅಂತರದಲ್ಲಿ 4,491 ಮಂದಿ ಅಸುನೀಗಿದ್ದಾರೆ. ಕಳೆದ ವಾರ ನ್ಯೂಯಾರ್ಕ್ ನಗರವೊಂದರಲ್ಲೇ 3,778 ಸಾವುಗಳು ಸಂಭವಿಸಿವೆ. ಅಮೆರಿಕದ ತಜ್ಞರ ವಿಶ್ಲೇಷಣೆ ಪ್ರಕಾರ ಕರೊನಾ ವೈರಸ್‌ನ ಅಟ್ಟಹಾಸ ತಣ್ಣಗಾಗುವುದರೊಳಗಾಗಿ ಅಮೆರಿಕವೊಂದರಲ್ಲೇ 1 ಲಕ್ಷದಿಂದ 2.4 ಲಕ್ಷ ಸಾವುಗಳು ಸಂಭವಿಸಲಿವೆ. ಕರೊನಾ ಒಮ್ಮೆ ನಿಯಂತ್ರಣಕ್ಕೆ ಸಿಕ್ಕರೆ ಅಥವಾ ಆದಷ್ಟು ಬೇಗ ಇದಕ್ಕೆ ಲಸಿಕೆ ಸಿದ್ಧವಾದರೆ ಒಟ್ಟು ಸಾವಿನ ಪ್ರಮಾಣ ಇಳಿಕೆಯಾಗುವ ಭರವಸೆಯೂ ಇದೆ. ಈವರೆಗೆ ಅಮೆರಿಕದಲ್ಲಿ 34,641 ಜನರು ಮೃತಪಟ್ಟಿದ್ದು, ಸೋಂಕಿತರ ಸಂಖ್ಯೆ 6,78,210ಕ್ಕೆ ಏರಿಕೆಯಾಗಿದೆ.

ಇಟಲಿಯಲ್ಲೇನಿದೆ ಸ್ಥಿತಿ?:

ಅಮೆರಿಕದ ನಂತರ ಇಟಲಿ ಅತೀ ದೊಡ್ಡ ಸಂಕಷ್ಟ ಅನುಭವಿಸುತ್ತಿದೆ. ಅಧಿಕ ಪ್ರಮಾಣದ ವಯೋವೃದ್ಧರನ್ನು ಹೊಂದಿರುವ ಇಟಲಿಯಲ್ಲಿ ಈವರೆಗೆ 22 ಸಾವಿರಕ್ಕಿಂತ ಹೆಚ್ಚು ಜನರು ಅಸುನೀಗಿದ್ದಾರೆ. ಜತೆಗೆ 1.68 ಲಕ್ಷಕ್ಕಿಂತ ಅಧಿಕ ಜನರಿಗೆ ಕರೊನಾ ಸೋಂಕು ಪಾಸಿಟಿವ್ ತೋರಿಸಿದೆ. ಆದಾಗ್ಯೂ ಮೊದಲಿಗೆ ಹೋಲಿಸಿದರೆ ಸದ್ಯ ಇಟಲಿಯಲ್ಲಿ ಮರಣ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ. ಪ್ರತಿದಿನ ಸಾವಿರಕ್ಕಿಂತ ಅಧಿಕ ಸಾವುಗಳನ್ನು ದಾಖಲಿಸುತ್ತಿದ್ದ ಇಟಲಿಯಲ್ಲಿ ಸದ್ಯ ಸರಾಸರಿ 500 ರಿಂದ 650 ಜನರು ಸಾವನ್ನಪ್ಪುತ್ತಿದ್ದು, ಈ ಪ್ರಮಾಣ ಇನ್ನೂ ಇಳಿಕೆಯಾಗುವ ನಿರೀಕ್ಷೆ ಇದೆ. ಜತೆಗೆ ಹೊಸ ಸೋಂಕಿತರ ಪ್ರಮಾಣದಲ್ಲೂ ಇಳಿಕೆಯಾಗಿದೆ.

ಯುರೋಪ್‌ನಲ್ಲಿ ಸಾವು ಹೆಚ್ಚು:

ವಿಶ್ವದಲ್ಲೇ ಅತಿ ಹೆಚ್ಚು ಸೋಂಕು ಹಾಗೂ ಸಾವು ಪ್ರಕರಣಗಳು ಯುರೋಪ್‌ನಲ್ಲಿ ವರದಿಯಾಗಿವೆ. ಇಟಲಿಯಲ್ಲಿ ಗರಿಷ್ಠ ಸಾವುಗಳು ಸಂಭವಿಸಿದ್ದರೆ, ಸ್ಪೇನ್‌ನಲ್ಲಿ ಸೋಂಕಿತರ ಸಂಖ್ಯೆ ಅತ್ಯಧಿಕಾಗಿದೆ. ಸ್ಪೇನ್‌ನಲ್ಲಿ 19 ಸಾವಿರಕ್ಕಿಂತ ಹೆಚ್ಚು ಜನರು ಸಾವನ್ನಪ್ಪಿದ್ದು, 1.84 ಲಕ್ಷ ಜನರು ಸೋಂಕಿಗೆ ಒಳಗಾಗಿದ್ದಾರೆ. ಅಮೆರಿಕದ ನಂತರ ಅತೀ ಹೆಚ್ಚು ಸೋಂಕು ಪ್ರಕರಣಗಳನ್ನು ಸ್ಪೇನ್ ಹೊಂದಿದೆ. ಇಲ್ಲಿ ಪ್ರತಿ ದಿನ ಸರಾಸರಿ 500 ಜನರು ಸಾವನ್ನಪ್ಪುತ್ತಿದ್ದಾರೆ.

ನಿರ್ವಹಣೆಯಲ್ಲಿ ಜರ್ಮನಿ ಪಾಸ್:

ಅಗತ್ಯ ಮುಂಜಾಗ್ರತಾ ಕ್ರಮಗಳು ಹಾಗೂ ಉತ್ತಮ ಚಿಕಿತ್ಸೆಯಿಂದಾಗಿ ಜರ್ಮನಿಯಲ್ಲಿ ಸೋಂಕಿತರ ಪ್ರಮಾಣ ಲಕ್ಷ ದಾಟಿದ್ದರೂ ಕೂಡ ಮೃತರ ಪ್ರಮಾಣ ಇನ್ನೂ ನಾಲ್ಕಂಕಿ ದಾಟಿಲ್ಲ. ಜರ್ಮನಿಯಲ್ಲಿ ಒಟ್ಟು 1.38 ಲಕ್ಷ ಜನರು ಸೋಂಕಿಗೆ ಒಳಗಾಗಿದ್ದು, ಈವರೆಗೆ 4,105 ಜನರು ಸಾವನ್ನಪ್ಪಿದ್ದಾರೆ. ಲಕ್ಷ ಸೋಂಕಿತರನ್ನು ದಾಟಿದ ಇತರ ದೇಶಗಳಿಗೆ ಹೋಲಿಸಿದರೆ ಜರ್ಮನಿ ಕರೊನಾ ವೈರಸ್‌ನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಿದೆ. ಈವರೆಗೆ ಅಲ್ಲಿ 81,800 ಜನರು ಗುಣಮುಖರಾಗಿದ್ದು, ಸದ್ಯ 52 ಸಾವಿರ ಪ್ರಕರಣಗಳು ಸಕ್ರಿಯವಾಗಿವೆ.