ನ್ಯೂಸ್

ರಾಜ್ಯದಲ್ಲಿ ಕೊರೊನಾ ಸೋಂಕು ದೃಢಪಟ್ಟಿಲ್ಲ

ಬೆಂಗಳೂರು: ರಾಜ್ಯದಲ್ಲಿ ಈವರೆಗೆ ಕೊರೊನಾ ವೈರಸ್ ದೃಢಪಟ್ಟಿಲ್ಲ. ಆದರೆ, ಶುಕ್ರವಾರ ರೋಗ ಲಕ್ಷಣ ಕಂಡು ಬಂದ ಮೂವರು ಸೇರಿ ಇದುವರೆಗೆ 8 ಜನರನ್ನು ಪ್ರತ್ಯೇಕ ನಿಗಾದಲ್ಲಿಡಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ತಿಳಿಸಿದರು.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪ್ರತ್ಯೇಕ ನಿಗಾದಲ್ಲಿಡಲಾಗಿರುವವರ ರಕ್ತದ ಮಾದರಿ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬರಬೇಕಿದೆ. ಇದುವರೆಗೆ 72,542 ಮಂದಿ ತಪಾಸಣೆ ಮಾಡಲಾಗಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 49,594 ಮಂದಿ ತಪಾಸಣೆ ನಡೆಸಲಾಗಿದೆ. ವಿದೇಶಗಳಿಂದ ಬಂದ ಎಲ್ಲ ಪ್ರಯಾಣಿಕರನ್ನು ತಪಾಸಣೆ ಮಾಡುತ್ತಿದ್ದೇವೆ. ಮಾಲ್​ಗಳಲ್ಲೂ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಐಟಿ ಕಂಪನಿಗಳವರಿಗೂ ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಗ್ರಾಮೀಣ ಭಾಗದಲ್ಲೂ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ವಿದೇಶಗಳಲ್ಲಿ 15 ದಿನ ವಾಸ್ತವ್ಯವಿದ್ದು ಬಂದವರು ತಪಾಸಣೆ ಮಾಡಿಸಿಕೊಳ್ಳಬೇಕು. ಅನಗತ್ಯ ಆತಂಕಕ್ಕೆ ಒಳಗಾಗುವುದು, ಅನಗತ್ಯ ಪರೀಕ್ಷೆ ಅವಶ್ಯಕತೆ ಇಲ್ಲ ಎಂದು ಹೇಳಿದರು.

ಈ ಸಂಬಂಧ ಸ್ಥಾಪಿಸಲಾಗಿರುವ ಸಹಾಯವಾಣಿ ಕಾರ್ಯನಿರ್ವಹಿಸುತ್ತಿದೆ. ಸಾರ್ವಜನಿಕರು ವೈರಸ್ ಬಗ್ಗೆ ಯಾವುದೇ ಅನುಮಾನವಿದ್ದರೂ ಕರೆ ಮಾಡಿ ಅನುಮಾನ ಪರಿಹರಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.

ಮಾಸ್ಕ್ ಅಭಾವ ಸೃಷ್ಟಿಸುವುದು, ಹೆಚ್ಚಿನ ದರಕ್ಕೆ ಮಾರಾಟ ಮಾಡುವುದರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿ ಹರಡುವವರ ವಿರುಧ್ಧ ಕ್ರಮ ಕೈಗೊಳ್ಳಲಾಗುವುದು. ಔಷಧಿಗಳ ದರವನ್ನು ಹೆಚ್ಚು ಮಾಡಿದರೂ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಮಂಗಳೂರು ಬಂದರಿನಲ್ಲಿ 5, 147 ಪ್ರಯಾಣಿಕರನ್ನು ತಪಾಸಣೆ ಮಾಡಲಾಗಿದೆ. ಶುಕ್ರವಾರ 22 ಮಂದಿಯನ್ನು ನಿಗಾದಲ್ಲಿಡಲಾಗಿದೆ. 11 ಮಂದಿ 28 ದಿನಗಳ ನಿಗಾದಲ್ಲಿರುವುದು ಪೂರ್ಣಗೊಂಡಿದೆ. 19 ಜನರನ್ನು ಮನೆಯಲ್ಲೇ ನಿಗಾದಲ್ಲಿರಿಸಲಾಗಿದೆ. ಒಟ್ಟು 343 ಜನರ ರಕ್ತ ಮಾದರಿ ಸಂಗ್ರಹಿಸಲಾಗಿದೆ. ಶುಕ್ರವಾರ 23 ಮಂದಿಯ ವರದಿ ಒಳ ಗೊಂಡಂತೆ ಒಟ್ಟು 296 ಮಂದಿಯ ರಕ್ತ ಮಾದರಿ ಪರೀಕ್ಷಾ ವರದಿ ಬಂದಿದ್ದು, ಯಾರಲ್ಲೂ ಸೋಂಕು ದೃಢಪಟ್ಟಿಲ್ಲ ಎಂದು ಹೇಳಿದರು.

ರಾಹುಲ್​ಗೆ ಕೊರೊನಾ ಸೋಂಕು ಪರೀಕ್ಷೆ

ಇಟಲಿಯಿಂದ ಫೆ.29ರಂದು ಆಗಮಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕರೊನಾ ತಪಾಸಣೆಗೆ ಒಳಪಟ್ಟಿದ್ದರು ಎಂದು ಕಾಂಗ್ರೆಸ್ ಹೇಳಿದೆ. ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ನಿವಾಸದಿಂದ ಕರೊನಾ ಹರಡುತ್ತಿದೆ ಎಂದು ಎನ್​ಡಿಎ ಅಂಗಪಕ್ಷದ ಸಂಸದ ಆರೋಪ ಮಾಡಿದ್ದಕ್ಕೆ ಕಾಂಗ್ರೆಸ್ ಈ ಪ್ರತಿಕ್ರಿಯೆ ನೀಡಿದೆ.