ನವದೆಹಲಿ: ಮೇ ಮೊದಲ ವಾರದಲ್ಲಿ ಸೋಂಕು ಪೀಡಿತರ ಸಂಖ್ಯೆ ದೊಡ್ಡ ಮಟ್ಟದಲ್ಲಿ ಏರಿಕೆಯಾಗಿ, ಕ್ರಮೇಣ ಇಳಿಮುಖವಾಗಲಿದೆ. ಹೀಗಾಗಿ ಮುಂಬರುವ ವಾರಗಳು ಅತ್ಯಂತ ಮಹತ್ವದ್ದಾಗಿದೆ ಎಂದು ಸರ್ಕಾರದ ಆಂತರಿಕ ವಿಶ್ಲೇಷಣೆಯ ವರದಿಯೊಂದು ಹೇಳಿದೆ.
ಈ ಮಧ್ಯೆ, ಭಾರತದಲ್ಲಿ ಕರೊನಾ ಸೋಂಕು ಪ್ರಸರಣ ವೇಗ ಶುಕ್ರವಾರ ಶೇ. 40 ಇಳಿಕೆಯಾಗಿದೆ. ಲಾಕ್‌ಡೌನ್ ಘೋಷಣೆಗೂ ಮುನ್ನ ಮೂರೇ ದಿನಕ್ಕೆ ದ್ವಿಗುಣವಾಗುತ್ತಿದ ಸೋಂಕು ಪ್ರಕರಣದ ಸಂಖ್ಯೆ ಈಗ ಆರು ದಿನಕ್ಕೆ ಏರಿದೆ. ಮಾರ್ಚ್ 15ರಿಂದ 31ರವರೆಗೆ ಶೇ. 2.1ರಷ್ಟಿದ್ದ ಸೋಂಕು ಹರಡುವಿಕೆಯ ಪ್ರಮಾಣ ಏಪ್ರಿಲ್ 1ರಿಂದ ಈವರೆಗೆ ಶೇ. 1.2ಕ್ಕೆ ಬಂದಿದೆ. ಕೋವಿಡ್-19 ಪ್ರಕರಣ ಹೆಚ್ಚಿರುವ ರಾಜ್ಯಗಳಿಗೆ 5 ಲಕ್ಷ ರ‌್ಯಾಪಿಡ್ ಆ್ಯಂಟಿಬಾಡಿ ಟೆಸ್ಟಿಂಗ್ ಕಿಟ್‌ಗಳನ್ನು ರವಾನಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ಲವ ಅಗರವಾಲ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಒಂದು ಕೇಂದ್ರಾಡಳಿತ ಪ್ರದೇಶವೂ ಸೇರಿ 19 ರಾಜ್ಯಗಳಲ್ಲಿ ಸೋಂಕಿನ ಪ್ರಮಾಣ ದ್ವಿಗುಣವಾಗುವಿಕೆ 6.2 ದಿನಕ್ಕೆ ಏರಿದೆ. ಇದು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚು. ವಿದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಸೋಂಕಿತರು ಮತ್ತು ಸಾವಿನ ಪ್ರಕರಣ 80:20ರಲ್ಲಿದೆ. ಅಂದರೆ ಸೋಂಕು ಪೀಡಿತರಲ್ಲಿ ಶೇ. 80 ಮಂದಿ ಗುಣ ಹೊಂದುತ್ತಿದ್ದು, ಶೇ. 20 ಜನರು ಸಾವನ್ನಪ್ಪುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದರು.