ಕಲಬುರಗಿ: ಶಂಕಿತ ಕರೊನಾ ಸೋಂಕಿತ 76ರ ವೃದ್ಧ ಮಹಮದ್ ಹುಸೇನ ಸಿದ್ದಿಕಿ ಅವರು ಕಲಬುರಗಿ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ವರದಿಯಾದ ಬೆನ್ನಲ್ಲೇ ಆರೋಗ್ಯ ಇಲಾಖೆಯಿಂದ ಸ್ಪಷ್ಟನೆ ಬಂದಿದೆ.
ಮಹಮದ್ ಸಿದ್ಧಕಿ ಅವರು ಮೃತಪಟ್ಟಿದ್ದು ಕಲಬುರಗಿ ಆಸ್ಪತ್ರೆಯಲ್ಲಿ ಅಲ್ಲ. ಹಾಗೇ ಕರೊನಾದಿಂದಲೇ ಮೃತಪಟ್ಟಿದ್ದು ದೃಢಪಟ್ಟಿಲ್ಲ. ಕೆಮ್ಮಿನಿಂದ ಬಳಲುತ್ತಿದ್ದ ಅವರು ಮೊದಲು ಕಲಬುರಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಅಲ್ಲಿಂದ ಅವರನ್ನು ಹೈದರಾಬಾದ್ಗೆ ಕರೆದುಕೊಂಡು ಹೋಗಲಾಗಿತ್ತು. ರಕ್ತದ ಮಾದರಿಯನ್ನು ಪರಿಶೀಲನೆಗೆ ಕಳಿಸಲಾಗಿದೆ ಹೊರತು ಇನ್ನೂ ವರದಿ ಬಂದಿಲ್ಲ. ಅವರು ಸತ್ತಿದ್ದು ಹೈದರಾಬಾದ್ನ ಖಾಸಗಿ ಆಸ್ಪತ್ರೆಯಲ್ಲಿ ಎಂದು ಜಿಲ್ಲಾ ಆರೋಗ್ಯ ಇಲಾಖೆ ತಿಳಿಸಿದೆ.
ಇನ್ನು ಕರೊನಾ ಶಂಕೆ ವ್ಯಕ್ತವಾಗಿದ್ದರಿಂದ ಅವರ ಅಂತ್ಯಕ್ರಿಯೆವರೆಗೂ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ. ತಾಲೂಕು ಆರೋಗ್ಯ ಅಧಿಕಾರಿ ಡಾ. ಶರಣಬಸಪ್ಪ ಹಾಗೂ ತಂಡದವರು ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ವೃದ್ಧನ ಸಾವಿಗೆ ಕರೊನಾ ಎಂದು ದೃಢಪಟ್ಟಿಲ್ಲದ ಕಾರಣ ಮಾಧ್ಯಮಗಳೂ ಜನರನ್ನು ಗಾಬರಿಬೀಳಿಸಬಾರದು ಎಂದು ಡಿಎಚ್ಒ ಮನವಿ ಮಾಡಿದ್ದಾರೆ.
ಮೃತನ ಕುಟುಂಬದವರಿಗೂ ಸ್ಕ್ರೀನಿಂಗ್ ಟೆಸ್ಟ್ ಮಾಡಿಸಲಾಗಿದ್ದು ಯಾರಲ್ಲೂ ಸೋಂಕಿನ ಶಂಕೆ ಕಂಡು ಬಂದಿಲ್ಲ ಎಂದು ಡಿಸಿ ಶರತ್ ತಿಳಿಸಿದ್ದಾರೆ.