ನ್ಯೂಸ್

ಬಾವಲಿಯಲ್ಲಿ ಕರೊನಾ: ಸಂಶೋಧನೆಯಿಂದ ಹೊರಬಿತ್ತು ಸ್ಪೋಟಕ ಮಾಹಿತಿ

ರಮೇಶ್​ ಕುಮಾರ್​​ ಬಿ ಎಡಮೋಳೆ

ನವದೆಹಲಿ: ಭಾರತದ ಪೆಟ್ರೋಪಸ್ (ಇಂಡಿಯನ್ ಫ್ಲೈಯಿಂಗ್ ಫಾಕ್ಸ್) ಮತ್ತು ರೌಸೆಟ್ಟಸ್ (ಓಲ್ಡ್ ವರ್ಲ್ಡ್ ಫ್ರೂಟ್ ಬ್ಯಾಟ್) ಪ್ರಭೇದದ ಬಾವಲಿಗಳಲ್ಲಿ ಬೀಟಾಕರೊನಾವೈರಸ್ ಇರುವುದನ್ನು ಕೇರಳ ಮತ್ತು ಪುಣೆಯಲ್ಲಿರುವ ರಾಷ್ಟ್ರೀಯ ವೈರಾಲಜಿ ಸಂಸ್ಥೆ ಮೊದಲ ಬಾರಿಗೆ ಪತ್ತೆ ಮಾಡಿದೆ. ಇದು ಕೋವಿಡ್-19 ವೈರಾಣುವಿನ ಮೂಲವಾದ ಸಾರ್ಸ್-ಕೋವಿ-2 ಸೋಂಕಿಗಿಂತ ಭಿನ್ನವಾಗಿದೆ ಎಂದು ಸಂಶೋಧನಾ ತಂಡ ಹೇಳಿದೆ.

ಕೇರಳ, ಹಿಮಾಚಲ ಪ್ರದೇಶ, ಪುದುಚೆರಿ ಮತ್ತು ತಮಿಳುನಾಡಿನ ಬಾವಲಿಗಳಿಂದ ಸಂಗ್ರಹಿಸಿದ್ದ ಮಾದರಿಯಲ್ಲಿ (ಸ್ಯಾಂಪಲ್) ಕರೊನಾವೈರಸ್ ಪಾಸಿಟಿವ್ ಬಂದಿದೆ. ಹಿಂದೆ ಕೇರಳದಲ್ಲಿ ಕಾಣಿಸಿಕೊಂಡ ಮಾರಣಾಂತಿಕ ನಿಫಾ ಸೋಂಕಿಗೂ ಪೆಟ್ರೋಪಸ್ ಜಾತಿಯ ಬಾವಲಿಗಳು ಕಾರಣವಾಗಿದ್ದವು ಎಂದು ಸಂಶೋಧನಾ ತಂಡ ತಿಳಿಸಿದೆ. ಈ ಅಧ್ಯಯನವು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ಪ್ರಕಾಶನದ ಭಾರತೀಯ ವೈದ್ಯಕೀಯ ಸಂಶೋಧನಾ ನಿಯತಕಾಲಿಕೆಯಲ್ಲಿ ಪ್ರಕಟವಾಗಿದೆ.

ಬಾವಲಿಗಳಿಂದ ಸಂಗ್ರಹಿಸಿದ ಸ್ಯಾಂಪಲ್​ಗಳಲ್ಲಿ ಕರೊನಾ ಸೋಂಕಿನ ಕುರಿತು ಅಧ್ಯಯನ ಭಾರತದಲ್ಲಿ ನಡೆದಿರುವುದು ಇದೇ ಮೊದಲು. ಕರೊನಾವೈರಸ್ ಚೆನ್ನಾಗಿ ಅರ್ಥಮಾಡಿಕೊಳ್ಳಲು ಈ ಅಧ್ಯಯನ ಸಹಕಾರಿ. | ಅಧ್ಯಯನದ ಸಹಲೇಖಕ ಐಸಿಎಂಆರ್​ನ ವಿಜ್ಞಾನಿ

586 ಮಾದರಿ ಸಂಗ್ರಹ

ಪೆಟ್ರೋಪಸ್ ಮತ್ತು ರೌಸೆಟ್ಟಸ್ ಪ್ರಭೇದದ ಬಾವಲಿಗಳ ಸ್ರಾವದ 586 ಸ್ಯಾಂಪಲ್​ಗಳನ್ನು ಕೇರಳ, ಕರ್ನಾಟಕ, ತಮಿಳುನಾಡು, ಹಿಮಾಚಲ ಪ್ರದೇಶ, ಪಂಜಾಬ್, ಗುಜರಾತ್, ತೆಲಂಗಾಣ, ಒಡಿಶಾ, ಛತ್ತೀಸ್​ಗಢ ಮತ್ತು ಪುದುಚೆರಿಗಳಿಂದ 2018 ಮತ್ತು 2019ರಲ್ಲಿ ಸಂಗ್ರಹಿಸಲಾಗಿತ್ತು. ಇವುಗಳನ್ನು ಈಗ ರಿವರ್ಸ್-ಟ್ರಾನ್ಸ್ಕ್ರಿಪ್ಷನ್ ಪಾಲಿಮರೇಸ್ ಚೈನ್ ರಿಯಾಕ್ಷನ್ (ಆರ್​ಟಿ-ಪಿಸಿಆರ್) ಪರೀಕ್ಷೆ ಒಳಪಡಿಸಿ ಕರೊನಾವೈರಸ್ ಇರುವಿಕೆ ಬಗ್ಗೆ ವಿಶ್ಲೇಷಣೆ ನಡೆಸಲಾಯಿತು. ಈ ಪೈಕಿ ಕೇರಳ, ತಮಿಳುನಾಡು, ಹಿಮಾಚಲ ಪ್ರದೇಶ ಮತ್ತು ಪುದುಚೇರಿಯಲ್ಲಿ ಸಂಗ್ರಹಿಸಲಾದ ಕನಿಷ್ಠ 25 ಸ್ಯಾಂಪಲ್​ಗಳಲ್ಲಿ ಪಾಸಿಟಿವ್ ಅಂಶ ಕಂಡುಬಂತು ಎಂದು ಸಂಶೋಧಕರ ತಂಡ ಹೇಳಿದೆ.

ಸಾಂಕ್ರಾಮಿಕ ಸಾಮರ್ಥ್ಯ ಸಮೀಕ್ಷೆ

ಬಾವಲಿಗಳ ಮೂಲಕ ಈ ವೈರಸ್ ಮಾನವರಿಗೆ ತಗುಲಲು ಸಾಧ್ಯವೇ ಎಂಬ ಬಗ್ಗೆ ಸಂಶೋಧಕರ ತಂಡ ವಿಸõತ ಅಧ್ಯಯನ ಕೈಗೊಂಡಿದೆ. ಬಾವಲಿಯಲ್ಲಿ ಕಂಡುಬಂದಿರುವ ಸೋಂಕಿಗೆ ಸಾಂಕ್ರಾಮಿಕ ಸಾಮರ್ಥ್ಯ ಇದೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳಲು ಪಾಸಿಟಿವ್ ಅಂಶ ಕಂಡು ಬಂದಿರುವ 4 ರಾಜ್ಯಗಳ ಸೋಂಕಿತರು, ಸಾಕುಪ್ರಾಣಿಗಳ ಮಾದರಿ ಸಂಗ್ರಹಕ್ಕೆ ಶಿಫಾರಸು ಮಾಡಲಾಗಿದೆ.