ನವದೆಹಲಿ: ರಾಷ್ಟ್ರದಲ್ಲಿ ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟಕ್ಕೆ ವೈರಸ್ ಪತ್ತೆ ಹಾಗೂ ಚಿಕಿತ್ಸೆ ಸೌಲಭ್ಯ ವಿಸ್ತರಿಸುವಂತೆ ಪ್ರಧಾನ ಮಂತ್ರಿಗಳ ಕಚೇರಿ ಆರೋಗ್ಯ ಸಚಿವಾಲಯಕ್ಕೆ ಸೂಚನೆ ನೀಡಿದೆ.
ಜಿಲ್ಲಾ ಮಟ್ಟಗಳಲ್ಲಿ ಇರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಪರೀಕ್ಷೆ ಕೇಂದ್ರ, ಪತ್ತೆಯಾದ ಸೋಂಕಿತರ ಚಿಕಿತ್ಸೆಗೆ ಪ್ರತ್ಯೇಕ ವಾರ್ಡ್, ಸೋಂಕು ಹರಡದಂತೆ ತಡೆಯುವ ಕ್ರಮ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಜಿಲ್ಲಾ ಮಟ್ಟಕ್ಕೆ ವಿಸ್ತರಿಸುವಂತೆ ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ.
ಇಟಲಿ ಮೂಲಕ ವ್ಯಕ್ತಿಯಿಂದ ರಾಷ್ಟ್ರದಲ್ಲಿ 28 ಮಂದಿಗೆ ವೈರಸ್ ಹರಡಿದೆ. ಅವರು ರಾಜಸ್ತಾನಕ್ಕೆ ಭೇಟಿ ನೀಡಿದ್ದರು. ಅವರ ಸಂಪರ್ಕಕ್ಕೆ ಅಂದಾಜು 200 ಮಂದಿ ಬಂದಿದ್ದರು ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರದಲ್ಲಿ ಜಿಲ್ಲಾ ಮಟ್ಟದಲ್ಲಿ ಸೌಲಭ್ಯ ವಿಸ್ತರಿಸುವಂತೆ ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ.
ಸರ್ಕಾರಿ ಇಲಾಖೆಗಳು ಯಾವುದೇ ಸಮಾವೇಶ ಹಾಗೂ ಸಭೆಗಳನ್ನು ನಡೆಸಬೇಕಾದರೆ ಆರೋಗ್ಯ ಇಲಾಖೆಯನ್ನು ಸಂಪರ್ಕಿಸಿ ಸಲಹೆ ಪಡೆಯಬೇಕು ಎಂದು ಪ್ರಧಾನಮಂತ್ರಿ ಅವರ ಪ್ರಧಾನ ಕಾರ್ಯದರ್ಶಿ ಪಿ.ಕೆ.ಮಿಶ್ರಾ ಹೇಳಿದ್ದಾರೆ.
(ಏಜೆನ್ಸೀಸ್)