ನವದೆಹಲಿ: ಕೋವಿಡ್-19 ಹರಡುವಿಕೆ ನಿಯಂತ್ರಿಸಲು ಭಾರತ ಮೇ ತಿಂಗಳಿಂದ ಪ್ರತಿ ತಿಂಗಳು 10 ಲಕ್ಷ ಟೆಸ್ಟಿಂಗ್ ಕಿಟ್ಗಳನ್ನು ಉತ್ಪಾದಿಸಲು ಮುಂದಾಗಿದೆ.
ತಿಂಗಳಿಗೆ 10 ಲಕ್ಷ ಆರ್ಟಿ & ಪಿಸಿಆರ್ ಪರೀಕ್ಷಾ ಕಿಟ್ ಹಾಗೂ ಪ್ರತಿಕಾಯ ಪತ್ತೆಹಚ್ಚುವ ಪರೀಕ್ಷಾ ಕಿಟ್ಗಳನ್ನು ತಯಾರಿವ ಯೋಜನೆ ಹೊಂದಿದೆ.
ಈ ಸಾಂಕ್ರಾಮಿಕ ರೋಗದ ಉಲ್ಬಣದಿಂದಾಗಿ ಜಾಗತಿಕ ಮಟ್ಟದಲ್ಲಿ ಆಮದು ಬೇಡಿಕೆ ಗಗನಕ್ಕೇರುತ್ತಿದ್ದು, ಇತರ ದೇಶಗಳ ಮೇಲೆ ಅವಲಂಬನೆಯನ್ನು ಕಡಿಮೆಗೊಳಿಸಲು ಭಾರತ ಈ ಕ್ರಮಕ್ಕೆ ಮುಂದಾಗಿದ್ದು, ರೋಗ ಪತ್ತೆ, ಚಿಕಿತ್ಸೆ ಹಾಗೂ ಲಸಿಕೆ ಬಗ್ಗೆ ವಿಶೇಷ ಒತ್ತು ನೀಡಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಕೇಂದ್ರ ಸೇರಿ ವಿವಿಧ ರಾಜ್ಯಗಳು ಕೋವಿಡ್-19 ಕೇಂದ್ರ ಹಾಗೂ ಸೌಲಭ್ಯಗಳಿಗೆ ಗಮನಾರ್ಹ ಕಾರ್ಯನಿರ್ವಹಿಸಿವೆ. ಶುಕ್ರವಾರದವರೆಗೆ 1,73,746 ಐಸೋಲೇಷನ್ ಹಾಸಿಗೆಗಳ ಕೇಂದ್ರಗಳು ಮತ್ತು 21,806 ಐಸಿಯು ಹಾಸಿಗೆಗಳ ಕೇಂದ್ರಗಳು ಸೇರಿ ಒಟ್ಟು 1919 ಕೋವಿಡ್-19 ಘಟಕಗಳು ದೇಶಾದ್ಯಂತ ಗುರುತಿಸಲ್ಪಟ್ಟಿವೆ. ಇವುಗಳ ಪೈಕಿ ತೃತೀಯ ಆರೋಗ್ಯ ಸೇವೆಯ ಅಗತ್ಯವಿರುವ ರೋಗಿಗಳಿಗಾಗಿ 672 ವಿಶೇಷ ಕೋವಿಡ್ ಆಸ್ಪತ್ರೆಗಳು ಮತ್ತು ಮಧ್ಯಮ ಪ್ರಮಾಣದಲ್ಲಿ ಕೋವಿಡ್ -19 ಲಕ್ಷಣಗಳಿರುವ ರೋಗಿಗಳಿಗೆ (ಗಂಭೀರವಲ್ಲದ) 1247 ಆರೋಗ್ಯ ರಕ್ಷಣಾ ಕೇಂದ್ರಗಳು ಸೇರಿವೆ.
ಗುರುವಾರ ಚೀನಾದಿಂದ ಪೂರೈಕೆಯಾದ ಐದು ಲಕ್ಷ ಪ್ರತಿಕಾಯ ಪರೀಕ್ಷಾ ಕಿಟ್ಗಳನ್ನು ತುರ್ತು ಅಗತ್ಯವಿರುವ ಜಿಲ್ಲೆಗಳಿಗೆ ಆದ್ಯತೆಯ ಮೇರೆಗೆ ಹಂಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್)