ನವದೆಹಲಿ: ಭಾರತದಲ್ಲಿ ಕರೊನಾ ಮಹಾಮಾರಿ ಸೋಂಕಿತರ ಸಂಖ್ಯೆ ದಿನೇ ದಿನೆ ಏರುತ್ತಿದ್ದು, ಸರಾಸರಿ ಪ್ರತಿ ನಾಲ್ಕು ದಿನಕ್ಕೆ ಸೋಂಕಿತರ ಸಂಖ್ಯೆ ದ್ವಿಗುಣವಾಗುತ್ತಿದೆ. ಇದೇ ಗತಿಯಲ್ಲಿ ಮುಂದುವರಿದರೆ ಲಾಕ್ಡೌನ್ ಮುಗಿಯುವ ವೇಳೆಗೆ ಅಂದರೆ ಏ. 14ಕ್ಕೆ ಸೋಂಕಿತ ಪ್ರಕರಣಗಳ ಸಂಖ್ಯೆ 17 ಸಾವಿರ ದಾಟುವ ಆತಂಕ ಇದೆ. ದೇಶದಲ್ಲಿ ಕರೊನಾ ಸಾಮುದಾಯಿಕ ಹಂತಕ್ಕೆ ಬಂದಿಲ್ಲ. ಆದರೆ, ಸೋಂಕು ಏರಿಕೆ ಇದೇ ರೀತಿಯಲ್ಲಿದ್ದರೆ ಪರಿಸ್ಥಿತಿ ಕೈಮೀರುತ್ತದೆ ಎಂದು ಅಧ್ಯಯನವೊಂದು ಎಚ್ಚರಿಸಿದೆ.
ದೆಹಲಿ ಹಜರತ್ ನಿಜಾಮುದ್ದೀನ್ನ ತಬ್ಲಿಘಿ ಜಮಾತ್ ಸದಸ್ಯರಲ್ಲಿ ಸೋಂಕು ಕಾಣಿಸಿಕೊಳ್ಳದಿದ್ದರೆ ಕೋವಿಡ್-19 ಪ್ರಕರಣಗಳು ದ್ವಿಗುಣಗೊಳ್ಳುವ ಪ್ರಮಾಣ 7.4 ದಿನಗಳಾಗಿರುತ್ತಿತ್ತು. ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಭಾಗಿಯಾದವರು ದೇಶಾದ್ಯಂತ ಚದುರಿ ಅವರ ಮೂಲಕ ಇತರರಿಗೂ ಸೋಂಕು ಅಂಟಿಕೊಂಡಿತು. ತತ್ಪರಿಣಾಮ ಒಟ್ಟು ಸೋಂಕಿತರಲ್ಲಿ ಮೂರನೇ ಒಂದು ಭಾಗದಷ್ಟು ಮಂದಿ ತಬ್ಲಿಘಿ ಜಮಾತ್ ಸದಸ್ಯರು ಇದ್ದಾರೆ ಎಂದು ಅಧ್ಯಯನ ಹೇಳಿದೆ. ದೇಶದಲ್ಲಿ ಇದುವರೆಗೂ 90 ಸಾವಿರ ಜನರಿಗೆ ಕೊರನಾ ಪರೀಕ್ಷೆ ನಡೆಸಲಾಗಿದ್ದು, ಪರೀಕ್ಷೆ ತ್ವರಿತಗೊಳಿಸಲು 5 ಲಕ್ಷ ಕಿಟ್ಗೆ ಬೇಡಿಕೆ ಇರಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಅಧ್ಯಯನ ಮಂಡಳಿ ತಿಳಿಸಿದೆ.
ಒಬ್ಬ ಸೋಂಕಿತ 400 ಮಂದಿಗೆ ವೈರಾಣು ದಾಟಿಸುವ ಸಾಧ್ಯತೆ
ಕರೊನಾ ಸೋಂಕು ಪೀಡಿತ ವ್ಯಕ್ತಿ ಸಾಮಾಜಿಕ ಅಂತರ ಮತ್ತು ಲಾಕ್ಡೌನ್ ನಿಯಮ ಪಾಲನೆ ಮಾಡದಿದ್ದರೆ ಆತ 30 ದಿನಗಳಲ್ಲಿ 406 ಮಂದಿ ಸೋಂಕು ಹಬ್ಬಿಸಬಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ವರದಿ ತಿಳಿಸಿದೆ. ಲಾಕ್ಡೌನ್ ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಂಡರೆ ಸೋಂಕು ತಗುಲುವ ಪ್ರಮಾಣ ಶೇ. 75 ಇಳಿಮುಖ ಆಗಲಿದ್ದು, ಸೋಂಕು ದಾಟಿಸುವ ಗತಿ ಎರಡೂವರೆ ವ್ಯಕ್ತಿಯ ಅನುಪಾತಕ್ಕೆ ಕುಗ್ಗುತ್ತದೆ.
ಚೀನಾದಲ್ಲಿ ದಾಖಲಾಗಿಲ್ಲ ಹೊಸ ಸಾವು
ಚೀನಾದಲ್ಲಿ ಕಳೆದ 24 ತಾಸಿನಲ್ಲಿ ಯಾವುದೇ ವ್ಯಕ್ತಿಯೂ ಕರೊನಾ ದಿಂದ ಸಾವನ್ನಪ್ಪಿಲ್ಲ ಎಂದು ತಿಳಿದುಬಂದಿದೆ. ವಿದೇಶಗಳಿಂದ ಬರುತ್ತಿರುವ ಹೊಸ ಸೋಂಕಿತರನ್ನು ನಿಯಂತ್ರಿಸಿದಾಗಿನಿಂದ ಚೀನಾದಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ. ಆದರೆ ಚೀನಾದ ಕಮ್ಯುನಿಸ್ಟ್ ಸರ್ಕಾರ ಅಲ್ಲಿನ ಸಾವು-ನೋವುಗಳ ಬಗ್ಗೆ ನೈಜ ಸಂಖ್ಯೆಗಳನ್ನು ನೀಡುತ್ತಿಲ್ಲವೆಂಬ ಅನುಮಾನಗಳೂ ವ್ಯಕ್ತವಾಗಿವೆ. ಆದರೆ ಚೀನಾ ಈ ಆರೋಪವನ್ನು ತಿರಸ್ಕರಿಸಿದೆ.