ಕೋಲಾರ: ಕರೊನಾ ವೈರಸ್ ವಿರುದ್ಧ ಹೋರಾಡಲು ಅನೇಕರು ತಮ್ಮ ಕೈಲಾದಷ್ಟು ದೇಣಿಗೆಗಳನ್ನು ನೀಡುತ್ತಿದ್ದಾರೆ. ಅದರಲ್ಲೂ ಹಲವು ಮಕ್ಕಳು ತಾವು ಕೂಡಿಟ್ಟ ಹಣವನ್ನು ಸರ್ಕಾರಗಳಿಗೆ ನೀಡಿ ಮಾದರಿಯಾಗುತ್ತಿದ್ದಾರೆ.
ಬೀದರ್ನ ಭಾಲ್ಕಿಯೊಲ್ಲೊಬ್ಬ ಬಾಲಕ ತನ್ನ ತಾಯಿಯ ಹುಟ್ಟುಹಬ್ಬಕ್ಕೆ ಉಡುಗೊರೆ ಕೊಡಲು ಸಂಗ್ರಹ ಮಾಡಿದ್ದ 1664 ರೂಪಾಯಿಯನ್ನು ಅದನ್ನೇ ಸಿಎಂ ಪರಿಹಾರ ನಿಧಿಗೆ ಕೊಟ್ಟಿದ್ದಾನೆ.
ಈಗ ಕೋಲಾರದ 2ನೇ ತರಗತಿಯ ಬಾಲಕಿಯೋರ್ವಳು ತಾನು ಹುಂಡಿಯಲ್ಲಿ ಕೂಡಿಟ್ಟಿದ್ದ ಹಣವನ್ನು ಪ್ರಧಾನಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾಳೆ.
ಮುಳಬಾಗಿಲು ತಾಲೂಕಿನ ಆರ್.ಚರಿತಾ ಎಂಬ ಬಾಲಕಿ ಒಟ್ಟು 11,111 ರೂಪಾಯಿಯ ಚೆಕ್ನ್ನು ಪಾಲಕರಾದ ಲಾವಣ್ಯಾ ಮತ್ತು ರಮೇಶ್ ಕುಮಾರ್ ಜತೆ ಆಗಮಿಸಿ ಜಿಲ್ಲಾಧಿಕಾರಿ ಸತ್ಯಭಾಮಾ ಅವರಿಗೆ ಹಸ್ತಾಂತರ ಮಾಡಿದ್ದಾಳೆ.
ಪುಟ್ಟ ಬಾಲಕಿ ಕೂಡಿಟ್ಟ ಹಣವನ್ನು ಪ್ರತಿವರ್ಷ ತನ್ನ ಹುಟ್ಟುಹಬ್ಬದ ದಿನ ಅನಾಥಾಶ್ರಮಕ್ಕೆ ನೀಡುತ್ತಿದ್ದಳು. ಇಂದು ಅವಳ ಜನ್ಮದಿನವಾಗಿದ್ದು, ಈ ಬಾರಿ ಹಣವನ್ನು ಕೊವಿಡ್-19 ವಿರುದ್ಧ ಹೋರಾಟಕ್ಕೆ ನೀಡಿದ್ದಾಳೆ. (ದಿಗ್ವಿಜಯ ನ್ಯೂಸ್)