ನ್ಯೂಸ್

ಮಾರಕ ವೈರಸ್​ನಿಂದ ಮೃತಪಟ್ಟವರು 24 ಸಾವಿರ ದಾಟಿದೆ ಎಂದ ಖಾಸಗಿ ಸಂಸ್ಥೆ; ಸರ್ಕಾರಿ ಅಧಿಕಾರಿಗಳು ತಪ್ಪು ಲೆಕ್ಕ ಕೊಟ್ಟಿದ್ದೇಕೆ?

ತೈಪೆ (ಚೀನಾ): ಚೀನಾದ ಬಹುರಾಷ್ಟ್ರೀಯ ಕಂಪನಿ ಟೆನ್ಸೆಂಟ್, ಕೊರೊನಾ ವೈರಸ್​ನಿಂದ ಮೃತ ಪಟ್ಟವರ "ನೈಜ" ದತ್ತಾಂಶವನ್ನು 24,589 ಎಂದು ಪ್ರಕಟಿಸಿದ್ದು ಎಲ್ಲರನ್ನೂ ಹುಬ್ಬೇರುವಂತೆ ಮಾಡಿದೆ.

ಟೆನ್ಸೆಂಟ್ ಕಂಪನಿಯು ಅಧಿಕೃತ ಅಂಕಿ ಅಂಶಗಳಿಗಿಂತ ಹೆಚ್ಚು ಸೋಂಕು ಪೀಡಿತರ ಮತ್ತು ಸಾವುಗಳ ಸಂಖ್ಯೆಯನ್ನು ಅಜಾಗರೂಕತೆಯಿಂದ ಬಿಡುಗಡೆ ಮಾಡಿದಂತಿದೆ ಎಂದು ತೈವಾನ್​ ನ್ಯೂಸ್​ ವರದಿ ಮಾಡಿದೆ.

ಟೆನ್ಸೆಂಟ್ ಕಂಪನಿಯು ತನ್ನ ಅಧಿಕೃತ ವೆಬ್​ಸೈಟ್​ 'ಎಪಿಡೆಮಿಕ್​ ಸಿಚ್ಯುವೇಷನ್​ ಟ್ರ್ಯಾಕರ್​'ನಲ್ಲಿ ಈ ಅಂಕಿಅಂಶ ಪ್ರಕಟಿಸಿದೆ. ಕೊರೊನಾ ವೈರಸ್​ನ ಪೀಡಿತರು 1,54,023 ಎಂದು ಪ್ರಕಟಿಸಿದೆ. ಇದು ಅಲ್ಲಿನ ಸರ್ಕಾರಿ ಅಧಿಕಾರಿಗಳು ಫೆಬ್ರವರಿ 1ರಂದು ಪ್ರಕಟಿಸಿದ ಸಂಖ್ಯೆಗಿಂತ ಹತ್ತು ಪಟ್ಟು ಹೆಚ್ಚಿದೆ.

ಇನ್ನು ಶಂಕಿತ ಪ್ರಕರಣಗಳು 79,808 ಎಂದು ಕಂಪನಿ ಪ್ರಕಟಿಸಿದ್ದು, ಇದು ಅಧಿಕಾರಿಗಳು ನೀಡಿದ ಸಂಖ್ಯೆಗಿಂತ 4 ಪಟ್ಟು ಹೆಚ್ಚಿದೆ. ಮೃತರ ಸಂಖ್ಯೆ 24,589 ಎಂದಿದ್ದು, ಅಧಿಕಾರಿಗಳು ನೀಡಿದ ಸಂಖ್ಯೆಗೂ ಇದಕ್ಕೂ ಅಜಗಜಾಂತರ ವ್ಯತ್ಯಾಸವಿದೆ.

ನಂತರ ಟೆನ್ಸೆಂಟ್ ಕಂಪನಿಯು ತನ್ನ ವೆಬ್​ಸೈಟ್​ನಲ್ಲಿ ಅಧಿಕಾರಿಗಳು ನೀಡಿದ ಸಂಖ್ಯೆಯನ್ನೇ ಅಪ್​ಡೇಟ್​ ಮಾಡಿದೆ. ಆದರೆ ಅಷ್ಟು ಹೊತ್ತಿಗಾಗಲೇ ನೆಟ್ಟಿಗರು ಈ ಬಗ್ಗೆ ಗಮನಹರಿಸಿದ್ದಾರೆ. ಕೆಲವರು ಡೇಟಾ ನೀಡುವಾಗ ಹೆಚ್ಚು ಕಡಿಮೆಯಾಗಿದೆ ಎಂದರೆ, ಇನ್ನು ಕೆಲವರು ಕಂಪನಿ ನಿಜವಾದ ಸಂಖ್ಯೆಯನ್ನೇ ಬಯಲಾಗಿಸಿದೆ ಎಂದಿದ್ದಾರೆ.

ಆದರೆ ಟೆನ್ಸೆಂಟ್ ಕಂಪನಿಯು, ವುಹಾನ್​ನಲ್ಲಿನ ನಮ್ಮ ಮೂಲಗಳ ಪ್ರಕಾರ ತುಂಬ ಜನ ಕೊರೊನಾ ಪೀಡಿತರಿಗೆ ಚಿಕಿತ್ಸೆ ದೊರೆತೇ ಇಲ್ಲ. ಮತ್ತವರು ಆಸ್ಪತ್ರೆ ಕಾಣದೆ ಮೃತ ಪಟ್ಟಿದ್ದಾರೆ ಎಂದು ಹೇಳಿಕೊಂಡಿದೆ.

ಕೊರೊನಾ ವೈರಸ್ ಕುರಿತು ನೈಜ ಅಂಕಿಅಂಶಗಳನ್ನು ವುಹಾನ್ ಅಧಿಕಾರಿಗಳು ಏಕೆ ವರದಿ ಮಾಡುತ್ತಿಲ್ಲ ಎಂದು ವಿವರಿಸುವ ಬೀಜಿಂಗ್​ನ ಮಾಧ್ಯಮದ ಕೈಜಿಂಗ್ ಅವರ ಲೇಖನವನ್ನು ಚೀನಾದಲ್ಲಿ ಸೆನ್ಸಾರ್ ಮಾಡಲಾಗಿದೆ. ಗುರುವಾರದಂದು ಚೀನಾದಲ್ಲಿ ಅಧಿಕೃತ ಸಾವಿನ ಸಂಖ್ಯೆ 563ಕ್ಕೆ ಏರಿದೆ, 28,018 ಪ್ರಕರಣಗಳು ದೃಢಪಟ್ಟಿವೆ. (ಏಜೆನ್ಸೀಸ್​)