ನ್ಯೂಸ್

ದೇಶದಲ್ಲಿ ಹೆಚ್ಚುತ್ತಲೇ ಇದೆ ಕರೊನಾ ಸೋಂಕು​; 24ಗಂಟೆಯಲ್ಲಿ 5000ಕ್ಕೂ ಹೆಚ್ಚು ಹೊಸ ಪ್ರಕರಣಗಳು ಪತ್ತೆ

ನವದೆಹಲಿ: ಲಾಕ್​ಡೌನ್​ ನಾಲ್ಕನೇ ಹಂತ ಬಹುಪಾಲು ಸಡಿಲಿಕೆ ಆಗಿದೆ. ಅದರ ಬೆನ್ನಲ್ಲೇ ಕರೊನಾ ಪ್ರಸರಣದ ಪ್ರಮಾಣವೂ ಜಾಸ್ತಿಯಾಗುತ್ತಲೇ ಇದೆ.

ಕಳೆದ 24 ಗಂಟೆಯಲ್ಲಿ ದೇಶದಲ್ಲಿ 5611 ಹೊಸ ಕರೊನಾ ಪ್ರಕರಣಗಳು ಪತ್ತೆಯಾಗಿದ್ದು, ಸತ್ತವರು 140 ಮಂದಿ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

ದೇಶದಲ್ಲಿ ಒಟ್ಟು ಕರೊನಾ ಸೋಂಕಿತರ ಸಂಖ್ಯೆ 1,06, 750ಕ್ಕೆ ಏರಿದ್ದು, ಒಟ್ಟು ಮೃತಪಟ್ಟವರು 3,303. ಒಟ್ಟು 42,298 ಮಂದಿ ಸೋಂಕಿನಿಂದ ಚೇತರಿಸಿಕೊಂಡು ಡಿಸ್​ಚಾರ್ಜ್​ ಆಗಿದ್ದಾರೆ.

ಒಂದೇ ದಿನದಲ್ಲಿ 5611 ಪ್ರಕರಣಗಳು ಪತ್ತೆಯಾಗಿ, 140 ಸಾವಾಗಿದ್ದು ಇಲ್ಲಿಯವರೆಗೆ ದಾಖಲಾದ ಅತಿ ಹೆಚ್ಚು ಸಂಖ್ಯೆ. ನಮ್ಮ ದೇಶದಲ್ಲಿ ಕರೊನಾ ವೈರಸ್​ ರೋಗಿಗಳು ಚೇತರಿಸಿಕೊಳ್ಳುವ ಪ್ರಮಾಣ ಶೇ.39.62%. ಇದ್ದರೂ ಪ್ರಸರಣ ನಿಯಂತ್ರಣಕ್ಕೆ ಬಾರದೆ ಇರುವುದು ಆತಂಕ ಮೂಡಿಸಿದೆ.

ಕರೊನಾ ಸೋಂಕಿತರ ಸಂಖ್ಯೆ ಲಕ್ಷ ದಾಟಿದ ದೇಶಗಳ ಪಟ್ಟಿಗೆ ಭಾರತ ಮಂಗಳವಾರ ಸೇರ್ಪಡೆಯಾಗಿದೆ. ಯುಎಸ್​ಎ, ರಷ್ಯಾ, ಸ್ಪೇನ್​, ಬ್ರೆಜಿಲ್​, ಯುಕೆ, ಇಟಲಿ, ಫ್ರಾನ್ಸ್​, ಜರ್ಮನಿ, ಟರ್ಕಿ ಮತ್ತು ಇರಾನ್​ ನಂತರ ಅಂದರೆ 11ನೇ ಸ್ಥಾನದಲ್ಲಿ ಭಾರತ ಇದೆ.

ದೇಶದಲ್ಲಿ ಅತಿ ಹೆಚ್ಚು ಸೋಂಕಿತರು (37, 136) ಇರುವುದು ಮಹಾರಾಷ್ಟ್ರದಲ್ಲಿ. ಅಲ್ಲಿ ಮೃತಪಟ್ಟವರ ಸಂಖ್ಯೆ 1325ಕ್ಕೆ ಏರಿದೆ. ಅದು ಬಿಟ್ಟರೆ ತಮಿಳುನಾಡಿನಲ್ಲಿ 12, 448 ಸೋಂಕಿತರು ಇದ್ದಾರೆ. (ಏಜೆನ್ಸೀಸ್​)