ನವದೆಹಲಿ: ರಾಷ್ಟ್ರದಲ್ಲಿ ಮಹಾಮಾರಿ ಕರೊನಾ ವೈರಸ್ನಿಂದ ಮೃತಪಟ್ಟವರಲ್ಲಿ ಶೇ 75 ರಷ್ಟು ಸಂತ್ರಸ್ತರು 60 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರೆಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ದಿನನಿತ್ಯದಂತೆ ಶನಿವಾರ ಸಂಜೆಯು ನಡೆದ ಕರೊನಾ ಸುದ್ದಿಗೋಷ್ಠಿಯಲ್ಲಿ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್ ಮಾತನಾಡಿ, ಮೃತ ಕೋವಿಡ್ ಸಂತ್ರಸ್ತರಲ್ಲಿ ಶೇ 83 ರಷ್ಟು ಈಗಾಗಲೇ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದರು ಎಂದು ಮಾಹಿತಿ ನೀಡಿದರು.
ವಯಸ್ಸಿಗೆ ಅನುಗುಣವಾಗಿ ವಿಶ್ಲೇಷಿಸಿರುವ ಮಾಹಿತಿ ಪ್ರಕಾರ 14.4 ರಷ್ಟು ಕರೊನಾ ಸಾವು 0-45 ವಯೋಗುಂಪಿನಲ್ಲಿ ಕಂಡುಬಂದಿದೆ. 10.3 ರಷ್ಟು 45-60ರ ವಯೋಗುಂಪಿನಲ್ಲಿಯೂ, 33.1 ರಷ್ಟು 60-75ರ ವಯೋಮಾನದವರಲ್ಲಿಯೂ ಮತ್ತು 42.2 ರಷ್ಟು ಸಾವು 75 ವರ್ಷ ಮೇಲ್ಪಟ್ಟ ಗುಂಪಿನಲ್ಲಿ ವರದಿಯಾಗಿದೆ ಎಂದು ಅಗರ್ವಾಲ್ ವಿವರಿಸಿದ್ದಾರೆ.
ಸದ್ಯದ ಕರೊನಾ ಅಂಕಿ-ಅಂಶಗಳನ್ನು ನೀಡಿರುವ ಆರೋಗ್ಯ ಸಚಿವಾಲಯ, ಇಲ್ಲಿಯವರೆಗೂ ರಾಷ್ಟ್ರದಲ್ಲಿ 14,378 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಅದರಲ್ಲಿ 4,291 ಕೇಸ್ಗಳು ತಬ್ಲಿಘಿ ಜಮಾತ್ ನಂಟನ್ನು ಹೊಂದಿವೆ. ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 991 ಹೊಸ ಪ್ರಕರಣಗಳು ಹಾಗೂ 43 ಸಾವು ವರದಿಯಾಗಿದೆ ಎಂದು ಅಗರ್ವಾಲ್ ಹೇಳಿದ್ದಾರೆ.
ಇದೇ ವೇಳೆ ರಾಷ್ಟ್ರವ್ಯಾಪಿ 1,992 ರೋಗಿಗಳು ಗುಣಮುಖರಾಗಿದ್ದಾರೆ. ಶೇಕಡವಾರು ಪ್ರಮಾಣದಲ್ಲಿ ಹೇಳುವುದಾದರೆ, ಒಟ್ಟಾರೆ 13.85 ರಷ್ಟು ಮಂದಿ ಕರೊನಾದಿಂದ ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. (ಏಜೆನ್ಸೀಸ್)