ನ್ಯೂಸ್

ಟ್ರಾವೆಲ್​​ ಹಿಸ್ಟರಿಯಿಲ್ಲದ ಮತ್ತೊರ್ವ ವ್ಯಕ್ತಿಯಲ್ಲಿ ಕೋವಿಡ್-19 ಸೋಂಕು ಧೃಡ: ಕರೊನಾದ 3ನೇ ಹಂತಕ್ಕೆ ತಲುಪಿದ್ವಾ ನಾವು?

ಲಖನೌ: ಟ್ರಾವೆಲ್​ ಹಿಸ್ಟರಿ ಇಲ್ಲದ 33 ವರ್ಷದ ಮತ್ತೊರ್ವ ವ್ಯಕ್ತಿಯಲ್ಲಿ ಕರೊನಾ ವೈರಸ್​ ಸೋಂಕು ಧೃಡವಾಗಿದ್ದು, ನಾವು ಕೋವಿಡ್​-19 ಮೂರನೇ ಹಂತಕ್ಕೆ ತಲುಪಿದ್ವಾ? ಎಂಬ ಆತಂಕ ಮನೆಮಾಡಿದೆ.

ಉತ್ತರ ಪ್ರದೇಶದ ಪಿಲಿಭಿತ್​ ಜಿಲ್ಲೆಯ ವ್ಯಕ್ತಿಗೆ ಬುಧವಾರ ಕರೊನಾ ವೈರಸ್ ಪಾಸಿಟಿವ್​ ವರದಿಯಾಗಿದೆ. ಆದರೆ, ಟ್ರಾವೆಲ್​ ಹಿಸ್ಟರಿ ಇಲ್ಲದಿರುವುದರಿಂದ ಸಮುದಾಯ ಹರಡುವಿಕೆಯ ಪ್ರಕರಣ ಎಂದು ಪರಿಗಣಿಸಲಾಗಿದೆ.

ನಿನ್ನೆಯಷ್ಟೇ ಗೌತಮಬುದ್ಧ ನಗರದ ಮೂರು ಪ್ರಕರಣಗಳಲ್ಲಿ ನೊಯ್ಡಾದ 137ನೇ ಸೆಕ್ಟರ್​ನಲ್ಲಿ ವಾಸವಾಗಿಗಿರುವ ದಂಪತಿಗೆ ಸೋಂಕು ತಗುಲಿರುವುದಾಗಿ ವರದಿಯಾಗಿತ್ತು. ಕಳವಳಕಾರಿಯೆಂದರೆ ನೊಯ್ಡಾ ದಂಪತಿಗೂ ಟ್ರಾವೆಲ್​ ಹಿಸ್ಟರಿ ಇರಲಿಲ್ಲ. ಆದರೆ ಲಂಡನ್​ನಿಂದ ಬಂದಿದ್ದ ಆಪ್ತರೊಬ್ಬರಿಗೆ ಆತಿಥ್ಯ ನೀಡಿದ್ದರು ಎಂದು ತಿಳಿದುಬಂದಿದೆ.

ಆತಿಥ್ಯ ಸ್ವೀಕರಿಸಿದವರಿಗೇನಾದರೂ ರೋಗದ ಲಕ್ಷಣಗಳಿದ್ದರೆ, ದಂಪತಿಗೆ ಹರಡಿರಬಹುದು ಎಂದು ಅಂದಾಜಿಸಲಾಗಿದೆ. ಲಂಡನ್​ ಅತಿಥಿಯ ಜಾಲವನ್ನು ಪತ್ತೆ ಮಾಡಿದರೆ ಎಲ್ಲ ಸಂಶಯಗಳಿಗೆ ಉತ್ತರ ಸಿಗಲಿದೆ ಎಂದು ಯುಪಿಯ ಆರೋಗ್ಯ ಇಲಾಖೆ ತಿಳಿಸಿದೆ.

ಟ್ರಾವೆಲ್​ ಹಿಸ್ಟರಿಯಿಲ್ಲದ ಪ್ರಕರಣಗಳು ಬೆಳಕಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳಲ್ಲಿ ಹಾಗೂ ಜನತೆಯಲ್ಲಿ ಆತಂಕ ಸೃಷ್ಟಿಯಾಗಿದೆ. ಕರೊನಾ ವೈರಸ್​ ಎರಡನೇ ಹಂತದಿಂದ ಮೂರನೇ ಹಂತಕ್ಕೇನಾದರೂ ನಾವು ಕಾಲಿಟ್ಟೆವಾ ಎಂಬ ಸಂಶಯ ಆರಂಭವಾಗತೊಡಗಿದೆ.

ಈವರೆಗೂ ಉತ್ತರ ಪ್ರದೇಶದಲ್ಲಿ 34 ಸೋಂಕು ಪ್ರಕರಣಗಳು ವರದಿಯಾಗಿವೆ. ಕರೊನಾಗೆ ದಾಳಿಗೆ ಸಿಲುಕಿರುವ ಪ್ರಮುಖ ನಗರಗಳಲ್ಲಿ ಇದು ಕೂಡ ಒಂದಾಗಿದೆ. (ಏಜೆನ್ಸೀಸ್​)