ನ್ಯೂಸ್

ಗ್ರಾಮಗಳಲ್ಲಿ ಕರೊನಾ ಸೋಂಕು ಹರಡುವಿಕೆ ತಡೆಗಟ್ಟಲು ಕಾರ್ಯಪಡೆ ರಚನೆ

kumarvrl

ಬೆಂಗಳೂರು: ರಾಜ್ಯದ ಪ್ರಮುಖ ನಗರಗಳಿಗೆ ವ್ಯಾಪಿಸಿರುವ ಕರೊನಾ ವೈರಸ್​ ಸೋಂಕು ಗ್ರಾಮೀಣ ಪ್ರದೇಶಗಳಿಗೆ ಹರಡದಂತೆ ತಡೆಯಲು ಸರ್ಕಾರ ಗ್ರಾಮೀಣ ಕಾರ್ಯಪಡೆ ರಚನೆ ಮಾಡಿದೆ.

ಗ್ರಾಮ ಪಂಚಾಯಿತಿ ಅಧ್ಯಕ್ಷರ ನೇತೃತ್ವದಲ್ಲಿ ಕಾರ್ಯಪಡೆ ರಚನೆ ಮಾಡಿ ಸರ್ಕಾರ ಸುತ್ತೋಲೆ ಹೊರಡಿಸಿದೆ. ಕಾರ್ಯಪಡೆ ಹಳ್ಳಿಗಳಲ್ಲಿ ಸೋಂಕು ಹರಡದಂತೆ ಮುಂಜಾಗ್ರತೆ ವಹಿಸಬೇಕು ಹಾಗೂ ಗ್ರಾಮಸ್ಥರಿಗೆ ಸೋಂಕು ಬಗ್ಗೆ ಮಾಹಿತಿ ನೀಡಬೇಕು ಎಂದು ಸೂಚಿಸಿದೆ.

ಕಾರ್ಯಪಡೆಯಲ್ಲಿ 10 ಮಂದಿ ಸದಸ್ಯರು ಇರುತ್ತಾರೆ. ಗ್ರಾಮ ಪಂಚಾಯಿತಿ ಅಧ್ಯಕ್ಷರು ಕಾರ್ಯಪಡೆಯ ಅಧ್ಯಕ್ಷರಾಗಿರುತ್ತಾರೆ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.

ಗ್ರಾಮಪಂಚಾಯಿತಿ ಉಪಾಧ್ಯಕ್ಷರು, ಸದಸ್ಯರು, ಗ್ರಾಮ ಲೆಕ್ಕಾಧಿಕಾರಿ, ಗ್ರಾಮದ ಬೀಟ್​ ಪೊಲೀಸ್​, ಗ್ರಾಮದ ಆರೋಗ್ಯ ಕೇಂದ್ರ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ನೋಂದಾಯಿತ ಸ್ಥಳೀಯ ವೈದ್ಯರು ಕಾರ್ಯಪಡೆ ಸದಸ್ಯರಾಗಿರುತ್ತಾರೆ.

ಕಾರ್ಯಪಡೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕರೊನಾ ವೈರಸ್​ ಸೋಂಕು ಹರಡುವುದನ್ನು ತಡೆಯಲು ಜಾರಿಗೆ ತಂದ ಸೂಚನೆಗಳನ್ನು ಅನುಷ್ಠಾನಗೊಳಿಸುವುದು. ಗ್ರಾಮಗಳಲ್ಲಿ 5ಕ್ಕಿಂತ ಹೆಚ್ಚು ಮಂದಿ ಸೇರದಂತೆ ನೋಡಿಕೊಳ್ಳುವುದು. ಅಂದಾಜು 5 ಅಡಿ ದೂರ ನಿಂತು ವ್ಯಕ್ತಿಗಳೊಂದಿಗೆ ವ್ಯವಹರಿಸುವಂತೆ ಗ್ರಾಮಸ್ಥರಿಗೆ ಸೂಚಿಸುವುದು. ಕರೊನಾ ಬಗ್ಗೆ ಗ್ರಾಮಗಳಲ್ಲಿ ವದಂತಿ ಹರಡದಂತೆ ನೋಡಿಕೊಳ್ಳುವುದು. ಮದುವೆ ಹಾಗೂ ಶುಭ ಸಮಾರಂಭ ನಡೆದಂತೆ ನೋಡಿಕೊಳ್ಳುವುದು ಕಾರ್ಯಪಡೆ ಕೆಲಸವಾಗಿರುತ್ತದೆ ಎಂದು ಸರ್ಕಾರ ತಿಳಿಸಿದೆ.