ನವದೆಹಲಿ : ಏಪ್ರಿಲ್ 11 ರಿಂದ ಸುಮಾರು 100 ಅರ್ಹ ಮತ್ತು ಸಿದ್ಧ ಫಲಾನುಭವಿಗಳನ್ನು ಹೊಂದಿರುವ ಕೆಲಸದ ಸ್ಥಳಗಳಲ್ಲಿ ಕೋವಿಡ್ ವ್ಯಾಕ್ಸಿನೇಷನ್ ಪಡೆಯುವ ಅವಕಾಶವನ್ನು ಕಲ್ಪಿಸಬಹುದಾಗಿದೆ. ಕರೊನಾ ಸೋಂಕಿನ ಸ್ಫೋಟಕ ಏರಿಕೆಯ ನಡುವೆ ಲಸಿಕಾ ಅಭಿಯಾನವನ್ನು ಹೆಚ್ಚು ಪರಿಣಾಮಕಾರಿಗೊಳಿಸಲು ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ಈ ಬಗ್ಗೆ ಕೇಂದ್ರ ಆರೋಗ್ಯ ಕಾರ್ಯದರ್ಶಿಗಳು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಮರ್ಪಕ ಸಿದ್ಧತೆಗಳನ್ನು ಮಾಡಿಕೊಳ್ಳಬೇಕೆಂದು ಪತ್ರ ಬರೆದಿದ್ದಾರೆ. ಲಸಿಕೆಯನ್ನು 18 ವರ್ಷ ಮೇಲ್ಪಟ್ಟು ಎಲ್ಲರಿಗೂ ಒದಗಿಸಬೇಕು ಎಂಬ ಬೇಡಿಕೆಯು ಕೇಳಿಬರುತ್ತಿದ್ದರೂ, 45 ವರ್ಷ ಮೇಲ್ಪಟ್ಟ ಜನರಿಗೇ ಲಸಿಕಾ ಅಭಿಯಾನವನ್ನು ಸೀಮಿತವಾಗಿ ಮುಂದುವರಿಸುವ ನಿಲುವನ್ನು ಕೇಂದ್ರ ಸರ್ಕಾರ ತಳೆದಿದೆ.
"ಲಸಿಕೆಯ ಸೌಲಭ್ಯವನ್ನು ಹೆಚ್ಚಿಸುವ ಸಲುವಾಗಿ, ವ್ಯಾಕ್ಸಿನೇಷನ್ ಸೆಷನ್ಗಳನ್ನು ಸಾರ್ವಜನಿಕ ಮತ್ತು ಖಾಸಗಿ ಕೆಲಸದ ಸ್ಥಳಗಳಲ್ಲಿ ಆಯೋಜಿಸಬಹುದು. ಸುಮಾರು 100 ಅರ್ಹ ಮತ್ತು ಸಿದ್ಧ ಫಲಾನುಭವಿಗಳನ್ನು ಹೊಂದಿರುವ ಸ್ಥಳಗಳನ್ನು ಹತ್ತಿರದ ವ್ಯಾಕ್ಸಿನೇಷನ್ ಕೇಂದ್ರದೊಂದಿಗೆ ಟ್ಯಾಗ್ ಮಾಡುವ ಮೂಲಕ ಇದಕ್ಕೆ ಅನುಕೂಲ ಒದಗಿಸಬೇಕು" ಎಂದು ಪತ್ರದಲ್ಲಿ ಹೇಳಲಾಗಿದೆ. (ಏಜೆನ್ಸೀಸ್)