ಪಟನಾ: ಇಡೀ ದೇಶದಲ್ಲಿ ಹಿರಿಯ ನಾಗರೀಕರಿಗೆ ಮತ್ತು ತೀವ್ರ ಖಾಯಿಲೆಗಳುಳ್ಳ 45 ವರ್ಷದ ಮೇಲ್ಪಟ್ಟವರಿಗೆ ಕರೊನಾ ಲಸಿಕಾ ಅಭಿಯಾನ ಇಂದು ವಿದ್ಯುಕ್ತವಾಗಿ ಆರಂಭವಾಗಿದೆ. ಎಲ್ಲಾ ಸರಕಾರಿ ಲಸಿಕಾ ಕೇಂದ್ರಗಳಲ್ಲಿ ಉಚಿತವಾಗಿ ಲಸಿಕೆ ದೊರೆಯಲಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಪಡೆಯಲಿಚ್ಛಿಸುವವರಿಗೆ 250 ರೂಪಾಯಿ ಶುಲ್ಕ ವಿಧಿಸಬಹುದು ಎಂದು ಕೇಂದ್ರ ಸರ್ಕಾರ ಘೋಷಿಸಿದೆ.
ಆದರೆ ಬಿಹಾರದ ಜನರಿಗೆ ಮಾತ್ರ ಸರ್ಕಾರಿ ಕೇಂದ್ರಗಳೊಂದಿಗೆ, ಖಾಸಗಿ ಆಸ್ಪತ್ರೆಗಳಲ್ಲೂ ಉಚಿತವಾಗಿಯೇ ಕರೊನಾ ಲಸಿಕೆ ಪಡೆಯುವ ಅವಕಾಶ ದೊರೆಯಲಿದೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್, "ಇಡೀ ಬಿಹಾರ ರಾಜ್ಯದಲ್ಲಿ ಕರೊನಾ ಲಸಿಕೆಯು ಪೂರ್ಣ ಉಚಿತವಾಗಿ ದೊರೆಯಲಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಸಹ ಈ ಅವಕಾಶವನ್ನು ರಾಜ್ಯ ಸರ್ಕಾರ ಕಲ್ಪಿಸುತ್ತದೆ" ಎಂದು ಘೋಷಿಸಿದ್ದಾರೆ.
ಕಳೆದ ವರ್ಷ ನಡೆದ ಬಿಹಾರ ವಿಧಾನಸಭಾ ಚುನಾವಣೆಯ ವೇಳೆ ಮತದಾರರಿಗೆ ನೀಡಿದ್ದ ವಾಗ್ದಾನದಂತೆ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು ಎನ್ನಲಾಗಿದೆ. ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ನಾಷನಲ್ ಡೆಮೊಕ್ರೆಟಿಕ್ ಅಲೆಯನ್ಸ್ (ಎನ್ಡಿಎ) 243 ಸೀಟುಗಳಲ್ಲಿ 125 ಸೀಟುಗಳನ್ನು ಗೆದ್ದು ಬಹುಮತ ಸಾಧಿಸಿತ್ತು. ಕರೊನಾ ಲಸಿಕೆ ಲಭ್ಯವಾದಾಗ ಅದನ್ನು ಉಚಿತವಾಗಿ ಒದಗಿಸಬೇಕೆಂಬ ಪ್ರಸ್ತಾವನೆಯನ್ನು ಬಿಹಾರ ಸಂಪುಟವು ಡಿಸೆಂಬರ್ನಲ್ಲಿ ಅನುಮೋದಿಸಿತ್ತು.(ಏಜೆನ್ಸೀಸ್) ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ