ಹುಬ್ಬಳ್ಳಿ ಕಿಮ್ಸ್​ನಲ್ಲಿ ಶುಕ್ರವಾರ ಏರ್ಪಡಿಸಿದ್ದ ‘100 ಕೋಟಿ ಲಸಿಕಾಕರಣ ಭಾರತ ದೇಶದ ಪಯಣ’ ಸಮಾರಂಭವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು. ಸಚಿವರಾದ ಡಾ.ಕೆ. ಸುಧಾಕರ್, ಶಂಕರ ಪಾಟೀಲ, ಇತರರು ಇದ್ದರು. 
ನ್ಯೂಸ್

ಶತ ಕೋಟಿ ಲಸಿಕೆ ಸಾಧನೆ ಜಟಾಪಟಿ; ಬಿಜೆಪಿ ಸಂಭ್ರಮ, ಕಾಂಗ್ರೆಸ್ ಅಸಮಾಧಾನ; ನಾಯಕರ ನಡುವೆ ಮಾತಿನ ಸಮರ

ಬೆಂಗಳೂರು: ದೇಶದಲ್ಲಿ ಕೋವಿಡ್ ವಿರುದ್ಧದ ಲಸಿಕೆ ಅಭಿಯಾನ ಮಹತ್ವದ ಘಟ್ಟ ತಲುಪಿರುವುದು ಜನಸಾಮಾನ್ಯರಲ್ಲಿ ಸಂತಸ ಮೂಡಿಸಿದೆ. ಆದರೆ, ಬಿಜೆಪಿ ಹಾಗೂ ಕಾಂಗ್ರೆಸ್ ಇದೇ ವಿಷಯವಾಗಿ ಕಚ್ಚಾಟ ನಡೆಸಿವೆ. ನೂರು ಕೋಟಿ ಲಸಿಕೆ ವಿತರಣೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮತ್ತು ಬಿಜೆಪಿ ಸಂಭ್ರಮಿಸಿದರೆ, ಕಾಂಗ್ರೆಸ್ ಅಸಮಾಧಾನ ವ್ಯಕ್ತಪಡಿಸಿದೆ. ನೂರು ಕೋಟಿ ಲಸಿಕೆ ನೀಡಿದ್ದು ಸಾಧನೆ ಎಂದು ಬಿಜೆಪಿ ಹೇಳಿಕೊಂಡಿದೆ.

ಸಿದ್ದರಾಮಯ್ಯ ಟೀಕೆ: ದೇಶದಲ್ಲಿ ಈವರೆಗೆ ಶೇ.21 ಜನಸಂಖ್ಯೆಗೆ ಮಾತ್ರ ಎರಡು ಡೋಸ್ ಲಸಿಕೆ ನೀಡಲಾಗಿದೆ. ಇಷ್ಟಕ್ಕೇ ಸಂಭ್ರಮಾಚರಣೆ ಮಾಡುತ್ತಾ ಸಾಧನೆ ಎಂದು ಹೇಳಿಕೊಳ್ಳುತ್ತಿರುವುದು ಆತ್ಮವಂಚನೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ. ಚೀನಾ ಶೇ.70 ಜನರಿಗೆ ಲಸಿಕೆ ನೀಡಿದೆ. ಅಮೆರಿಕ ಕೂಡ ಶೇ.56 ಜನಸಂಖ್ಯೆಗೆ ಈಗಾಗಲೆ ಎರಡು ಡೋಸ್ ಲಸಿಕೆ ವಿತರಿಸಿದೆ. ಮಕ್ಕಳಿಗೆ ಲಸಿಕೆ ನೀಡುವ ವಿಚಾರದಲ್ಲಿ ನಮ್ಮಲ್ಲಿ ಈಗ ತಾನೆ ಸಿದ್ಧತೆ ಆರಂಭವಾಗಿವೆ ಎಂದು ಕುಟುಕಿದ್ದಾರೆ.

ಪ್ರಧಾನಿ ಭಾಷಣ ಕರೊನಾ ಕಳಪೆ ನಿರ್ವಹಣೆ ಕಾರಣದಿಂದ ಮೃತಪಟ್ಟ, ತಮ್ಮವರನ್ನು ಕಳೆದುಕೊಂಡು ಅನಾಥರಾಗಿರುವ ಕುಟುಂಬಗಳಿಗೆ ಮಾಡಿದ ಅವಮಾನದಂತಿತ್ತು. ಪ್ರಾಯಶ್ಚಿತ್ತದ ಒಂದು ಮಾತೂ ಅವರ ಬಾಯಲ್ಲಿ ಬರಲಿಲ್ಲ. ಮೊದಲ ಅಲೆ ಕೊನೆಗೊಳ್ಳುವ ಮೊದಲೇ ಪ್ರಧಾನಿ ಮೋದಿ ಇದೇ ರೀತಿ ಸಂಭ್ರಮಾಚರಣೆ ಮಾಡಿ, ಭಾರತ ಕರೊನಾ ಗೆದ್ದೇಬಿಟ್ಟಿತು ಎಂದು ಕುಣಿದಿದ್ದರು. ಈ ಬಾರಿಯೂ ಅದೇ ತಪ್ಪುಗಳನ್ನು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಧಿಕಾರಿಗಳಿಂದ ಸೂಕ್ತ ಮಾಹಿತಿ ಪಡೆದು ಸಿದ್ದರಾಮಯ್ಯ ಮಾತನಾಡಲಿ. ಭಾರತದಲ್ಲಿ ಕರೊನಾ ಲಸಿಕೀಕರಣ 100 ಕೋಟಿ ದಾಟಿದೆ. 135 ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡುವುದು ಸುಲಭದ ಮಾತಲ್ಲ. | ಶೋಭಾ ಕರಂದ್ಲಾಜೆ ಕೇಂದ್ರ ಸಚಿವೆ ದೇಶದಲ್ಲಿ 10 ಕೋಟಿಗೂ ಹೆಚ್ಚು ಹಾಗೂ ರಾಜ್ಯದಲ್ಲಿ ಅಂದಾಜು 67 ಲಕ್ಷ ಕೋವಿಡ್ ಲಸಿಕೆ ದಾಸ್ತಾನು ಇದೆ. ರಾಜ್ಯದಲ್ಲಿ ಮೊದಲ ಡೋಸ್ ಪಡೆಯಬೇಕಿರುವ ಶೇ.17 ಹಾಗೂ 2ನೇ ಡೋಸ್ ಪಡೆಯಬೇಕಿರುವ ಶೇ.62 ಜನರು ಬಾಕಿ ಉಳಿದಿದ್ದಾರೆ. | ಡಾ. ಕೆ. ಸುಧಾಕರ್ ಆರೋಗ್ಯ ಸಚಿವ

ಬಿಜೆಪಿ ವಾದವೇನು?

  • ಕೆಲವೇ ತಿಂಗಳಲ್ಲಿ 100 ಕೋಟಿ ಲಸಿಕೆ ವಿತರಿಸಿದ್ದಕ್ಕೆ ಜಗತ್ತೇ ಆಚ್ಚರಿ ವ್ಯಕ್ತಪಡಿಸುತ್ತಿದೆ.
  • ಕರೊನಾದಿಂದ ಉಂಟಾಗುತ್ತಿದ್ದ ಸಾವಿನ ಸಂಖ್ಯೆಯನ್ನು ನಿಯಂತ್ರಿಸಲು ಸಾಧ್ಯವಾಗಿದ್ದು ದೊಡ್ಡ ಪ್ರಮಾಣದಲ್ಲಿ ಲಸಿಕೆ ಅಭಿಯಾನ ನಡೆದಿರುವುದೇ ಕಾರಣ.
  • ಇಡೀ ದೇಶದಲ್ಲಿ ಆರ್ಥಿಕ ಚಟುವಟಿಕೆ ಮುಂಚಿನಂತೆಯೇ ಆರಂಭವಾಗುತ್ತಿರುವುದಕ್ಕೆ ಲಸಿಕೆ ವಿತರಣೆ ವೇಗವಾಗಿ ನಡೆದಿರುವುದೇ ಕಾರಣ.
  • ಮುಂದುವರಿದ ದೇಶಗಳಿಗೆ ಸರಿಸಮಾನವಾಗಿ ನಮ್ಮಲ್ಲಿ ಲಸಿಕೆ ಉತ್ಪಾದನೆ, ವಿತರಣೆ ನಡೆದಿದೆ. ಇದು ಹೆಮ್ಮೆಪಡುವ ವಿಚಾರವಲ್ಲವೇ?

ಸಿದ್ದರಾಮಯ್ಯ ಹೇಳಿದ್ದೇನು?

  • ಭಾರತವು ಲಸಿಕೆ ವಿಚಾರದಲ್ಲಿ ಹೋಲಿಸಿಕೊಳ್ಳ ಬೇಕಾಗಿರುವುದು ಯುರೋಪ್, ಅಮೆರಿಕ ಜತೆಯಲ್ಲಲ್ಲ. ಚೀನಾದ ಜತೆಗೆ. ಆ ದೇಶ ಈಗಾಗಲೆ 225 ಕೋಟಿ ಡೋಸ್ ಲಸಿಕೆ ನೀಡಿದೆ.
  • 10 ತಿಂಗಳಾದರೂ 100 ಕೋಟಿ ಲಸಿಕೆ ನೀಡಿರುವುದು ದೊಡ್ಡ ಸಾಧನೆಯಲ್ಲ.
  • ಭಾರತಕ್ಕಿಂತ ಮೂರ್ನಾಲ್ಕು ಪಟ್ಟು ಅಧಿಕ ಲಸಿಕೆ ಸಾಧನೆಮಾಡಿರುವ ದೇಶಗಳಲ್ಲೂ ಈಗಾಗಲೆ ಕರೊನಾ ನಾಲ್ಕನೇ ಅಲೆ ಅಪ್ಪಳಿಸುತ್ತಿದೆ.
  • ಮೊದಲ ಅಲೆ ನಂತರ ಗೆದುಬಿಟ್ಟಿದ್ದೇವೆಂಬ ಹುಸಿ ಭ್ರಮೆಯಲ್ಲಿ ಜನರನ್ನು ತೇಲಾಡಿಸಿ ಇತಿಹಾಸದ ದೊಡ್ಡ ದುರಂತಗಳ ಜತೆಗೆ ದೇಶವನ್ನು ಸೇರಿಸಿದ್ದು ಸಾಕು.

ಡಿಸೆಂಬರ್ ಅಂತ್ಯದ ವೇಳೆಗೆ ಶೇ.90 ಲಸಿಕೀಕರಣ ಗುರಿ

ಹುಬ್ಬಳ್ಳಿ: ದೇಶದಲ್ಲಿ 10 ತಿಂಗಳ ಅವಧಿಯಲ್ಲಿ 100 ಕೋಟಿ ಕೋವಿಡ್ ಲಸಿಕೆ ನೀಡಿರುವುದು ಸಾಮಾನ್ಯ ಸಾಧನೆಯಲ್ಲ. ಇದಕ್ಕಾಗಿ ಹೆಮ್ಮೆ ಪಡೋಣ. ಆದರೆ, ವಿಶ್ರಮಿಸುವುದು ಬೇಡ. ಡಿಸೆಂಬರ್ ಅಂತ್ಯದೊಳಗೆ ಶೇ. 90 ಅರ್ಹರಿಗೆ ಲಸಿಕೆ ನೀಡುವ ಗುರಿ ಹಾಕಿಕೊಂಡಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಕಿಮ್್ಸ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ‘100 ಕೋಟಿ ಲಸಿಕಾಕರಣ ಭಾರತ ದೇಶದ ಪಯಣ’ ಕಾರ್ಯಕ್ರಮ ಉದ್ಘಾಟಿಸಿ, ಮಕ್ಕಳಿಗೆ ನ್ಯುಮೋನಿಯಾ ಬರುವುದನ್ನು ತಡೆಗಟ್ಟಲು ‘ನ್ಯುಮೋಕಾಕಲ್ ಕಾಂಜುಗೇಟ್’ ಲಸಿಕೆ ಸಮರ್ಪಣೆ ಮಾಡಿ ಅವರು ಮಾತನಾಡಿದರು. ಕೋವಿಡ್ ವಿರುದ್ಧ ರಾಜ್ಯ-ಕೇಂದ್ರ ಸರ್ಕಾರಗಳು ಸಮರ್ಥವಾಗಿ ಕಾರ್ಯನಿರ್ವಹಿಸಿವೆ. ರಾಜ್ಯದ ಆಸ್ಪತ್ರೆಗಳಲ್ಲಿ 1.25 ಲಕ್ಷ ಹಾಸಿಗೆ ಹೆಚ್ಚಿಸಲಾಗಿದೆ. 4 ಸಾವಿರ ವೈದ್ಯರ ನೇಮಕ, ತಾಲೂಕು ಆಸ್ಪತ್ರೆಗಳಲ್ಲಿಯೂ ಆಮ್ಲಜನಕ ವ್ಯವಸ್ಥೆಯಿರುವ ಹಾಸಿಗೆ ಸೌಲಭ್ಯ ಒದಗಿಸಲಾಗಿದೆ ಎಂದು ವಿವರಿಸಿದರು.

ಪರಿಹಾರಕ್ಕೆ ಗಡುವು

ಬೆಂಗಳೂರು: ಕರೊನಾ ಸೋಂಕಿನಿಂದ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ವಿತರಿಸಲು ಅಕ್ಟೋಬರ್ ಅಂತ್ಯದ ಗಡುವು ವಿಧಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮುತುವರ್ಜಿ, ಸುಪ್ರೀಂ ಕೋರ್ಟ್ ಆದೇಶ ಹಾಗೂ ಪ್ರತಿಪಕ್ಷಗಳ ಒತ್ತಡದ ನಡುವೆಯೂ ಅರ್ಜಿ ಸ್ವೀಕಾರ ಹಾಗೂ ಪರಿಹಾರ ವಿತರಣೆ ಪ್ರಕ್ರಿಯೆ ಆಮೆಗತಿಯಲ್ಲಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ. ಕರೊನಾ ಪರಿಹಾರ ಬಿಡುಗಡೆ ಚುರುಕುಗೊಳಿಸಲೆಂದು ಅ.4,7,8 ಮತ್ತು 11ರಂದು ವಿಭಾಗಮಟ್ಟದ ವಿಡಿಯೋ ಸಂವಾದ ನಡೆದಿದೆ. ಆದರೂ ನಿರೀಕ್ಷಿತ ಪ್ರಗತಿ ಸಾಧಿಸಿಲ್ಲವೆಂದು ಪ್ರಗತಿ ವರದಿ ಸಹಿತ ಜಿಲ್ಲಾಧಿಕಾರಿಗಳಿಗೆ ಗುರುವಾರ ಬರೆದ ಪತ್ರದಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ಉಲ್ಲೇಖಿಸಿದ್ದಾರೆ. ಮಾಸಾಂತ್ಯದೊಳಗೆ ಪೂರ್ಣ ಪ್ರಗತಿ ಸಾಧಿಸಲು ತಿಳಿಸಿದ್ದರೂ ಹಲವು ಜಿಲ್ಲೆಗಳಲ್ಲಿ ಅರ್ಜಿ ಸ್ವೀಕಾರ ಪ್ರಕ್ರಿಯೆ ವಿಳಂಬವಾಗಿರುವ ಕಡೆಗೆ ಡಿಸಿಗಳ ಗಮನಸೆಳೆದಿದ್ದಾರೆ.

ರಾಜ್ಯ ಮೇಲ್ಪಂಕ್ತಿ: ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಒಂದು ಲಕ್ಷ ರೂ. ಪರಿಹಾರ ಘೋಷಿಸಿ, ಇದಕ್ಕಾಗಿ 200 ಕೋಟಿ ರೂ. ಕಾದಿರಿಸಿ ಮೇಲ್ಪಂಕ್ತಿ ಹಾಕಿಕೊಟ್ಟಿದ್ದರು. ಸುಪ್ರೀಂ ಕೋರ್ಟ್ ಆದೇಶದಂತೆ ಕರೊನಾದಿಂದ ಮೃತಪಟ್ಟ ಎಲ್ಲರಿಗೂ ತಲಾ 50,000 ರೂ.ಗಳ ನೆರವನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಹೀಗಾಗಿ ಬಿಪಿಎಲ್ ಕುಟುಂಬದಲ್ಲಿ ಮೃತಪಟ್ಟ ಒಬ್ಬರಿಗೆ 1.50 ಲಕ್ಷ ರೂ. ಉಳಿದವರಿಗೆ ತಲಾ 50,000 ರೂ. ಪರಿಹಾರ ದೊರೆಯಲಿದೆ. ಅಲ್ಲದೆ, ಎಪಿಎಲ್ ಕುಟುಂಬದಲ್ಲಿ ಮೃತಪಟ್ಟ ಎಲ್ಲರಿಗೂ ತಲಾ 50,000 ರೂ. ಪರಿಹಾರ ನೀಡಲಾಗುತ್ತಿದೆ.

38 ಸಾವಿರ ಗಡಿ ತಲುಪಿದ ಸಾವು

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕಿಗೆ ಒಳಗಾದವರಲ್ಲಿ ಚಿಕಿತ್ಸೆ ಫಲಿಸದೆ 11 ಮಂದಿ ಮೃತಪಟ್ಟಿದ್ದು, ಮೃತರ ಸಂಖ್ಯೆ 38 ಸಾವಿರ ಗಡಿ ಸಮೀಪಿಸಿದೆ. ಒಟ್ಟು ಮೃತರ ಸಂಖ್ಯೆ 37,995ಕ್ಕೆ ಏರಿಕೆಯಾಗಿದೆ. 378 ಮಂದಿ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 29.85 ಲಕ್ಷಕ್ಕೆ ಏರಿಕೆಯಾಗಿದೆ. 464 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಗುಣಮುಖರ ಒಟ್ಟು ಸಂಖ್ಯೆ 29.38 ಲಕ್ಷ ಮೀರಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 8,891ಕ್ಕೆ ಇಳಿಕೆಯಾಗಿದೆ.

ಮಕ್ಕಳಿಗೆ ಆನ್​ಲೈನ್​ನಲ್ಲೇ ಕಲೋತ್ಸವ

ಬೆಂಗಳೂರು: ಕರೊನಾ ಸೋಂಕಿನ ಕಾರಣದಿಂದ ಶಾಲಾ ಮಕ್ಕಳಿಗೆ ಈ ವರ್ಷವೂ ಕಲೋತ್ಸವ (ಸಾಂಸ್ಕೃತಿಕ ಸ್ಪರ್ಧೆ)ವನ್ನು ಆನ್​ಲೈನ್ ಮೂಲಕವೇ ನಡೆಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಮೊದಲಿಗೆ ಶಾಲಾಮಟ್ಟದಲ್ಲಿ ಸ್ಪರ್ಧೆ ನಡೆಯಲಿದೆ. ಶಾಲಾ ಮಟ್ಟದ ವಿದ್ಯಾರ್ಥಿಗಳ ಕಲಾ ಪ್ರದರ್ಶವನ್ನು ಐದು ನಿಮಿಷ ಮೀರದಂತೆ ಚಿತ್ರೀಕರಿಸಿ ಆನ್​ಲೈನ್ ಮೂಲಕ ಅಪ್​ಲೋಡ್ ಮಾಡಬೇಕು.(ಸಾರ್ವಜನಿಕ ಶಿಕ್ಷಣ ಇಲಾಖೆಯ ವೆಬ್​ಸೈಟ್ schooleducation.kar.nic.inನ ವಿದ್ಯಾವಾಹಿನಿ ಲಿಂಕ್​ನಲ್ಲಿ) ನ.11ರೊಳಗೆ ವಿಡಿಯೋ ಅಪ್​ಲೋಡ್ ಮಾಡಬೇಕು. ನಂತರ ಜಿಲ್ಲಾಮಟ್ಟದ ಸ್ಪರ್ಧೆ ನಡೆಯಲಿದೆ. ನ.20ರೊಳಗೆ ಜಿಲ್ಲಾಮಟ್ಟದ ಸ್ಪರ್ಧೆ ಪೂರ್ಣಗೊಳಿಸಬೇಕು. ಇದರಲ್ಲಿ ವಿಜೇತರಾದವರು ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಡಿಸೆಂಬರ್ ಮೊದಲ ವಾರದಲ್ಲಿ ರಾಷ್ಟ್ರಮಟ್ಟದ ಕಲೋತ್ಸವ ನಡೆಯಲಿದೆ ಎಂದು ತಿಳಿಸಿದೆ.