ರಾಮನಗರ : ಕರೊನಾ ವಿರುದ್ಧದ ಹೋರಾಟದಲ್ಲಿ ರಾಮಬಾಣ ಎಂದೇ ಪರಿಗಣಿಸಲ್ಪಿಟ್ಟಿರುವ ಲಸಿಕೆ ಪಡೆದುಕೊಳ್ಳಬೇಕೇ, ಬೇಡವೇ ಎನ್ನುವ ಗೊಂದಲ ಇನ್ನೂ ದೂರವಾಗಿಲ್ಲ. ಇದು ಅಂಗವಿಲಕರನ್ನೂ ಕಾಡುತ್ತಿದ್ದು, ಜಿಲ್ಲೆಯಲ್ಲಿ ಲಸಿಕೆ ಪಡೆಯಲು ಮುಂದೆ ಬರುತ್ತಿಲ್ಲ.
ಸರ್ಕಾರ ಆದ್ಯತಾ ವಲಯಗಳನ್ನು ಗುರುತಿಸಿ 18-44 ವರ್ಷದೊಳಗಿನವರಿಗೂ ಲಸಿಕೆ ಹಾಕುವ ಅಭಿಯಾನ ಆರಂಭಿಸಿದೆ. ಆದರೆ ಜಿಲ್ಲೆಯಲ್ಲಿ ಅಂಗವಿಕಲ ಸಮುದಾಯದಿಂದ ಇದಕ್ಕೆ ಸ್ಪಂದನೆ ವ್ಯಕ್ತವಾಗುತ್ತಿಲ್ಲ. ಕಾರಣ ಲಸಿಕೆ ಪಡೆದರೆ ಅಡ್ಡ ಪರಿಣಾಮಗಳೇ ಹೆಚ್ಚು ಎಂಬ ಆತಂಕದಿಂದಾಗಿ ಹೆಚ್ಚಿನ ಅಂಗವಿಕಲರು ಲಸಿಕೆ ಪಡೆದುಕೊಳ್ಳಲು ಮುಂದೆ ಬರುತ್ತಿಲ್ಲ.
ನೀವು ಬರೆದುಕೊಡಿ: ಲಸಿಕೆ ಪಡೆದುಕೊಳ್ಳುವಂತೆ ಮನವೊಲಿಸಲು ಎಆರ್‌ಡಬ್ಲುೃಗಳು, ಎಂಆರ್‌ಡಬ್ಲುೃಗಳು, ಯುಆರ್‌ಡಬ್ಲುೃಗಳು ಅಂಗವಿಕಲರನ್ನು ಭೇಟಿ ಮಾಡುತ್ತಿದ್ದರು. ಬಹುತೇಕರಿಂದ ಬರುತ್ತಿರುವ ಪ್ರಶ್ನೆ, ನಮಗೆ ಏನೂ ಆಗುವುದಿಲ್ಲ ಎಂದು ನೀವು ಬರೆದುಕೊಡುತ್ತೀರಾ ಎನ್ನುವುದು.
ಈ ವೇಳೆ ಹೌದು ಬರೆದುಕೊಡುತ್ತೇವೆ ಎಂದು ಹೇಳಿದರೂ ಆಸ್ಪತ್ರೆಗಳ ಕಡೆಗೆ ಮುಖ ಮಾಡಲು ಅಂಗವಿಕಲರು ಮುಂದಾಗುತ್ತಿಲ್ಲ. ಜಿಲ್ಲೆಯಲ್ಲಿ ಗುರುತಿಸಿರುವಂತೆ 17,865 ಅಂಗವಿಕಲರಿದ್ದು, ಇವರಲ್ಲಿ 18-44 ವರ್ಷದೊಳಗಿನ 5,419 ಮಂದಿ ಹಾಗೂ 45 ವರ್ಷ ಮೇಲ್ಪಟ್ಟ 4609 ಮಂದಿ ಇದ್ದಾರೆ. ಆದರೆ ಇವರಲ್ಲಿ ಈವರೆಗೆ ಮೊದಲ ಡೋಸ್ ಹಾಕಿಸಿಕೊಂಡವರು 1568 ಮಂದಿ. ಎರಡನೇ ಡೋಸ್ ಪಡೆದವರು 505 ಮಂದಿ. ಲಸಿಕೆ ಪಡೆದವರಲ್ಲಿ ಇದುವರೆಗೂ ಯಾವುದೇ ಅಡ್ಡ ಪರಿಣಾಮಗಳು ಕಂಡು ಬರದಿರುವುದು ಗಮನಿಸಬೇಕಾದ ಅಂಶ.
ನೆರವಿಗೆ ಸಂಪರ್ಕಿಸಿ : ಸರ್ಕಾರ 18-44 ವರ್ಷದೊಳಗಿನ ಅಂಗವಿಕಲರಿಗೆ ಲಸಿಕೆ ನೀಡುತ್ತಿದ್ದು, ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಲಸಿಕೆ ಪಡೆದುಕೊಳ್ಳಬಹುದಾಗಿದೆ. ಮೊದಲು ಅನೆಕ್ಸಚರ್-3 ಅನ್ನು ಇಲಾಖೆ ಮುಖ್ಯಸ್ಥರ ಸಹಿಯೊಂದಿಗೆ ಸಲ್ಲಿಸಿಯೇ ಲಸಿಕೆ ಪಡೆದುಕೊಳ್ಳಬೇಕಿತ್ತು. ಆದರೆ ಈಗ ಇದರ ಅಗತ್ಯವೂ ಇಲ್ಲದೆ ನೇರವಾಗಿ ಲಸಿಕೆ ಪಡೆದುಕೊಳ್ಳಬಹುದಾಗಿದೆ. ಅಲ್ಲದೆ, ಆಸ್ಪತ್ರೆಗೆ ಹೋಗಲು ತೊಂದರೆ ಆಗುತ್ತಿದ್ದರೆ ತಮ್ಮ ವ್ಯಾಪ್ತಿಯ ಎಂಆರ್‌ಡಬ್ಲುೃಗಳನ್ನು ಸಂಪರ್ಕಿಸಿದರೆ ಬೇಕಾದ ವ್ಯವಸ್ಥೆ ಮಾಡಲಿದ್ದಾರೆ.
ಹೆದರಿಕೆ ಬೇಡ : ಕೋವಿಡ್ ಲಸಿಕೆ ಪಡೆದರೆ ಅಡ್ಡ ಪರಿಣಾಮಗಳು ಹಾಗೂ ಸಾವೂ ಸಂಭವಿಸಬಹುದು ಎನ್ನುವ ಆತಂಕ ಇದೆ. ಆದರೆ ಲಸಿಕೆ ಪಡೆಯುವುದರಿಂದ ಯಾವುದೇ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ ಬದಲಿಗೆ ಸೋಂಕಿನ ವಿರುದ್ಧ ಹೋರಾಡುವ ಪ್ರತಿ ಕಾಯಗಳು ದೇಹದಲ್ಲಿ ಉತ್ಪತ್ತಿ ಆಗಿ, ಒಂದು ವೇಳೆ ಸೋಂಕು ತಗುಲಿದರೂ ಸಾವಿನ ದವಡೆಯಿಂದ ಪಾರಾಗಬಹುದಾಗಿದೆ.
ಲಸಿಕೆ ಪಡೆದ ಬಹುತೇಕರಲ್ಲಿ ಮೈ-ಕೈ ನೋವು, ಜ್ವರದಂತಹ ಸಾಮಾನ್ಯ ಲಕ್ಷಣ ಕಂಡು ಬರುತ್ತವೆಯಾದರೂ ಇದರಿಂದ ಯಾವುದೇ ಸಮಸ್ಯೆ ಎದುರಾಗುವುದಿಲ್ಲ ಎನ್ನುವುದು ಹಲವಾರು ಪ್ರಯೋಗಗಳಿಂದ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ವಿಕಲಚೇತನರು ಯಾವುದೇ ಕಾರಣಕ್ಕೂ ಭಯಪಡದೆ ಲಸಿಕೆ ಹಾಕಿಸಿಕೊಳ್ಳಬೇಕು.
ಲಸಿಕೆ ಹಾಕಿಸಿಕೊಂಡರೆ ಅಡ್ಡ ಪರಿಣಾಮಗಳು ಬೀರುತ್ತವೆ ಎನ್ನುವ ಭಯದಲ್ಲಿ ಅಂಗವಿಕಲರು ಲಸಿಕೆ ಪಡೆಯಲು ಮುಂದೆ ಬರುತ್ತಿಲ್ಲ. ಆದರೆ ಲಸಿಕೆ ಪಡೆಯುವುದರಿಂದ ಕೋವಿಡ್‌ನಿಂದ ರಕ್ಷಣೆ ದೊರೆಯಲಿದ್ದು, ಯಾವುದೇ ಆತಂಕವಿಲ್ಲದೆ ಲಸಿಕೆ ಪಡೆದುಕೊಳ್ಳಲು ಅಂಗವಿಕಲರು ಮುಂದೆ ಬರಬೇಕು. ನಾಗವೇಣಿ ಸಹಾಯಕ ನಿರ್ದೇಶಕಿ, ಅಂಗವಿಕಲರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ನಾನೂ ಲಸಿಕೆ ಪಡೆದುಕೊಂಡಿದ್ದೇನೆ. ಇದರಿಂದ ಯಾವುದೇ ಅಡ್ಡ ಪರಿಣಾಮ ಆಗಿಲ್ಲ. ಕೋವಿಡ್ ವಿರುದ್ಧದ ಹೋರಾಟದಲ್ಲಿ ನಮ್ಮಂಥವರಿಗೆ ಲಸಿಕೆ ಬಹಳ ಅಗತ್ಯವಾಗಿ ಬೇಕು. ಪ್ರತಿಯೊಬ್ಬರೂ ಲಸಿಕೆ ಪಡೆದುಕೊಳ್ಳಿ. ಶಿಲ್ಪಾ ಅಂತಾರಾಷ್ಟ್ರೀಯ ಪ್ಯಾರಾ ಟೆನ್ನಿಸ್ ಆಟಗಾರ್ತಿ