ನ್ಯೂಸ್

ಲಸಿಕೆ ನೀಡಿಕೆ ಉಚಿತವೋ? ಶುಲ್ಕವೋ?

ಬೆಂಗಳೂರು: ಮೇ 1ರಿಂದ ಆರಂಭವಾಗುವ 18ರಿಂದ 44 ವಯೋಮಾನದವರಿಗಾಗಿನ ಲಸಿಕೆ ವಿತರಣೆ ವಿಷಯದಲ್ಲಿ ದೊಡ್ಡ ಚರ್ಚೆಯೇ ನಡೆದಿದ್ದು, ಲಸಿಕೆಗೆ ಶುಲ್ಕ ನಿಗದಿಯಾಗುತ್ತದೆಯೋ ಅಥವಾ ಉಚಿತವೋ ಎಂಬುದು ಸೋಮವಾರ ನಿರ್ಧಾರವಾಗಲಿದೆ.

45 ವರ್ಷದ ಮೇಲ್ಪಟ್ಟವರಿಗೆ ನೀಡಲು ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೆ ಲಸಿಕೆ ಸರಬರಾಜು ಮಾಡಿತ್ತು. ಈ ವಯೋಮಾನದವರಿಗೆ ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಮುಂದೆಯೂ ವಿತರಿಸಲು ಕೇಂದ್ರವೇ ಸರಬರಾಜು ಮಾಡುತ್ತದೆ. ಆದರೆ, 18ರಿಂದ 45 ವಯೋಮಾನದವರಿಗೆ ಅಗತ್ಯವಾದ ಲಸಿಕೆಯನ್ನು ರಾಜ್ಯ ಸರ್ಕಾರಗಳೇ ಖರೀದಿಸಬೇಕೆಂದು ಕೇಂದ್ರ ಸೂಚಿಸಿತ್ತು. ಆ ಪ್ರಕಾರ, ರಾಜ್ಯ ಸರ್ಕಾರ ಮೊದಲ ಹಂತದಲ್ಲಿ 1 ಕೋಟಿ ಲಸಿಕೆ ಖರೀದಿಸಲು ಆದೇಶಿಸಿದೆ.

ಮೇ 27 ಅಥವಾ 28ರಂದು ರಾಜ್ಯಕ್ಕೆ ಲಸಿಕೆ ಬರಲಿದೆ. ಆದರೆ, ಇದನ್ನು ವಿತರಿಸಲು ದರ ನಿಗದಿ ಮಾಡಬೇಕೇ? ಬೇಡವೇ ಎಂಬ ಬಗ್ಗೆ ಸೋಮವಾರ ನಡೆಯುವ ಸಂಪುಟ ಸಭೆಯಲ್ಲಿ ಚರ್ಚೆಯಾಗುತ್ತದೆ. ಈ ನಡುವೆ ಸಂಪುಟದ ಹಲವು ಸದಸ್ಯರು ಪ್ರತಿಕ್ರಿಯಿಸಿ, ಈ ಬಗ್ಗೆ ಸಂಪುಟದಲ್ಲಿ ಚರ್ಚೆ ಮಾಡುತ್ತೇವೆ. ಕನಿಷ್ಠ ಬಿಪಿಎಲ್ ಕಾರ್ಡ್​ದಾರರಿಗಾದರೂ ಉಚಿತವಾಗಿ ವಿತರಿಸಬೇಕಾಗುತ್ತದೆ ಎಂದಿದ್ದಾರೆ.

ಪ್ರತಿಪಕ್ಷ ಮುಖಂಡರು ಉಚಿತವಾಗಿ ಲಸಿಕೆ ವಿತರಿಸಬೇಕೆಂದು ಒತ್ತಾಯಿಸಿದ್ದಾರೆ. ಸಂಪುಟ ಸಭೆಯಲ್ಲಿ ಲಸಿಕೆ ಮತ್ತು ವಾರಂತ್ಯ ಕರ್ಫ್ಯೂ ವಿಸ್ತರಣೆ ಬಗ್ಗೆ ಪ್ರಮುಖವಾಗಿ ಚರ್ಚೆ ನಡೆಯುವುದು. ಮೊದಲ ಹಂತದಲ್ಲಿ 400 ಕೋಟಿ ರೂ. ವೆಚ್ಚ ಮಾಡಿ ಖರೀದಿಸಲಾಗುತ್ತಿದೆ, ಎರಡನೇ ಹಂತದಲ್ಲಿ ಮತ್ತೆ 400-600 ಕೋಟಿ ರೂ. ವೆಚ್ಚ ಮಾಡಲಾಗುತ್ತದೆ. ಒಟ್ಟಾರೆ ಒಂದು ಸಾವಿರ ಕೋಟಿ ರೂ.ಗಿಂತ ಹೆಚ್ಚಿನ ಹಣ ಬೇಕಾಗುತ್ತದೆ. ಬಜೆಟ್​ನಲ್ಲಿ ಮೀಸಲಿಡದ ಇಷ್ಟು ದೊಡ್ಡ ಮೊತ್ತವನ್ನು ಯಾವ ಮೂಲದಿಂದ ಭರಿಸಬಹುದು ಎಂಬುದು ನಿರ್ಧಾರವಾಗಬೇಕಾಗುತ್ತದೆ.

ಯಾವ ರಾಜ್ಯಗಳಲ್ಲಿ ಉಚಿತ?

ಮಧ್ಯಪ್ರದೇಶ, ಕೇರಳ, ಅಸ್ಸಾಂ ಸೇರಿ ಹಲವು ರಾಜ್ಯಗಳಲ್ಲಿ ಸ್ಥಳೀಯ ಸರ್ಕಾರಗಳು ಉಚಿತವಾಗಿ ವಿತರಿಸಲು ನಿರ್ಧರಿಸಿವೆ. ಈ ವಿಚಾರದಲ್ಲಿ ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಳ್ಳಬೇಕಾಗಿದೆ.