ನ್ಯೂಸ್

ಆತಂಕ ಬೇಡ, ಅರಿವು ಬೇಕು; 4ನೇ ಅಲೆ ಸಾಧ್ಯತೆ

theerthaswamy

ಕೋವಿಡ್ ಸಾಂಕ್ರಾಮಿಕ ರೋಗದ ನಾಲ್ಕನೇ ಅಲೆ ಬೀಸುವ ಲಕ್ಷಣಗಳು ಅಲ್ಲಲ್ಲಿ ಕಂಡುಬಂದಿವೆ. ಒಂದೊಮ್ಮೆ ಬಂದರೂ ಈ ಅಲೆ ಹೆಚ್ಚು ಪ್ರಖರವಾಗಿರುತ್ತದೆಯೋ ಇಲ್ಲವೋ ಎಂಬುದನ್ನು ಈಗಲೇ ಸ್ಪಷ್ಟವಾಗಿ ಗುರುತಿಸಲು ಆಗಿಲ್ಲ. ಈ ಕುರಿತಂತೆ ತಜ್ಞರಲ್ಲಿ ಏಕರೂಪದ ಅಭಿಪ್ರಾಯ ವ್ಯಕ್ತವಾಗಿಲ್ಲ.

ಕೆಲವರು ಜೂನ್ ಅಂತ್ಯದ ವೇಳೆಗೆ ನಾಲ್ಕನೇ ಅಲೆ ಸಾಧ್ಯತೆ ಅಂದಾಜಿಸಿದ್ದಾರೆ. ಆದರೆ, ಜನಸಾಮಾನ್ಯರಲ್ಲಿ ಮಾತ್ರ ಹೆಚ್ಚು ಆತಂಕ ಕಂಡುಬರುತ್ತಿಲ್ಲ. ಬಹುಶಃ ಮೂರನೇ ಅಲೆಯು ಹೆಚ್ಚಿನ ಪ್ರಮಾಣದಲ್ಲಿ ಪ್ರಭಾವ ಬೀರದೆ ಇರುವುದು ಇದಕ್ಕೆ ಕಾರಣವಾಗಿರಬಹುದು. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಕರೊನಾ ಜಾಸ್ತಿಯಾಗತೊಡಗಿದೆ. ಕಳೆದ ಹತ್ತು ದಿನದಲ್ಲಿ ಇಲ್ಲಿ ಕರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ. ಶೇ. 1.1ರಷ್ಟಿದ್ದ ಪಾಸಿಟಿವಿಟಿ ದರ ಶೇ. 2.9ಕ್ಕೆ ತಲುಪಿದೆ.

ಬಿಬಿಎಂಪಿ ವರದಿಯ ಪ್ರಕಾರ, ಕಳೆದ ಮೇ 31ರಂದು 178 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಜೂನ್ 10ರಂದು 494 ಜನರಿಗೆ ಹೊಸದಾಗಿ ಸೋಂಕು ತಗುಲಿದೆ. ಭಾರತದಾದ್ಯಂತ ಕಳೆದ 24 ಗಂಟೆಗಳಲ್ಲಿ 8 ಸಾವಿರಕ್ಕೂ ಅಧಿಕ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, 10 ಮಂದಿ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 48 ಸಾವಿರಕ್ಕೆ ತಲುಪಿದ್ದು, ಈ ಮೂಲಕ ಸೋಂಕು ಮತ್ತೆ ವ್ಯಾಪಿಸುತ್ತಿರುವ ಮುನ್ಸೂಚನೆ ನೀಡುತ್ತಿದೆ. ಹಾಗಂತ, ಆತಂಕಪಡುವ ಪರಿಸ್ಥಿತಿ ನಿರ್ವಣವಾಗಿಲ್ಲ. ದೇಶದಲ್ಲಿ ಕೋವಿಡ್ ಚೇತರಿಕೆ ದರ ಶೇ. 98.68 ಇದೆ. ಕಳೆದೊಂದು ವಾರದ ಸರಾಸರಿ ಪಾಸಿಟಿವಿಟಿ ದರ ಶೇ. 2.21 ಇದೆ.

ಮೊದಲ ಹಾಗೂ ಎರಡನೇ ಅಲೆಯ ಸಂದರ್ಭದ ಅನುಭವಗಳನ್ನು ಆಧರಿಸಿ ಸರ್ಕಾರ ಹಾಗೂ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕಿದೆ. 2020ರ ಫೆಬ್ರುವರಿಯಲ್ಲಿ ಕೋವಿಡ್ ಮೊದಲನೇ ಅಲೆ ಗೋಚರಿಸಿ ಆತಂಕ ಸೃಷ್ಟಿಸಿತು. ನಂತರ ಎರಡನೇ ಅಲೆಯಲ್ಲೂ ಜನರು ಬಾಧಿತರಾಗಿ, ಅಪಾರ ಪ್ರಮಾಣದ ಸಾವುಗಳು ಸಂಭವಿಸಿದವು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾಕಷ್ಟು ಮುನ್ನೆಚ್ಚರಿಕೆಗಳನ್ನು ಕೈಗೊಂಡ ಪರಿಣಾಮ ನಿಯಂತ್ರಣ ಕಂಡುಬಂದಿತು.

ಇಡೀ ಜಗತ್ತಿನಲ್ಲಿ ದೊಡ್ಡ ಪ್ರಮಾಣದ ಕೋವಿಡ್ ಲಸಿಕೆ ಅಭಿಯಾನ ಕೈಗೊಂಡು ಜಾಗತಿಕ ಮನ್ನಣೆಗೂ ಭಾರತ ಸರ್ಕಾರ ಪಾತ್ರವಾಯಿತು. ಆದರೆ, ಮೂರನೇ ಅಲೆ ಯಾವಾಗ ಬಂದಿತು, ಯಾವಾಗ ಹೋಯಿತು ಎಂಬುದು ಕೂಡ ಗೊತ್ತಾಗಲಿಲ್ಲ. ಇದರಿಂದಾಗಿ, ಈ ರೋಗದ ಬಗೆಗೆ ಸಾರ್ವಜನಿಕರಲ್ಲಿ ಇದ್ದ ಆತಂಕಗಳು ಕ್ಷೀಣಿಸಿವೆ. ಆದರೆ ಅತಿ ನಿರ್ಲಕ್ಷ್ಯ ಆಗಬಾರದು. ಮೊದಲೆರಡು ಅಲೆಗಳಲ್ಲಿ ಅನುಭವಿಸಿದ ಸಂಕಷ್ಟ, ಅದರಿಂದಾದ ಆರ್ಥಿಕ ತೊಂದರೆಯನ್ನು ಜನ ಮರೆಯಬಾರದು. ಕೋವಿಡ್ ಮಾರಿ ಮತ್ತೆ ನಮ್ಮ ಮೇಲೆ ಸವಾರಿ ಮಾಡಲು ಬಿಡಬಾರದು. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವ, ಅಗತ್ಯವಾದಲ್ಲಿ ಕರೊನಾ ಟೆಸ್ಟ್ ಮಾಡಿಸಿಕೊಳ್ಳುವ ಮೂಲಕ ಮುನ್ನೆಚ್ಚರಿಕೆ ಕ್ರಮಗಳನ್ನು ಸಾರ್ವಜನಿಕರು ಕೈಗೊಳ್ಳಬೇಕಿದೆ. ಬೂಸ್ಟರ್ ಡೋಸ್ ಪಡೆದುಕೊಳ್ಳುವ ಬಗೆಗೂ ಸಾರ್ವಜನಿಕರು ಸೂಕ್ತ ಸ್ಪಂದನೆ ತೋರಬೇಕಾಗಿದೆ. ಈಗಷ್ಟೇ ಶಾಲೆ- ಕಾಲೇಜುಗಳು ಆರಂಭಗೊಂಡಿವೆ. ಹೀಗಾಗಿ ಹೆಚ್ಚಿನ ನಿಗಾ ವಹಿಸುವುದು ಅವಶ್ಯ.