ನ್ಯೂಸ್

ಖಾಸಗಿ ಆಸ್ಪತ್ರೆಗಳಲ್ಲಿ ಕರೊನಾ ಸೋಂಕಿತರಿಗೆ ಕೈಕಾಲು ಕಟ್ಟಿ ಹಾಕಿ ಚಿಕಿತ್ಸೆ!

ಬೆಂಗಳೂರು: ಖಾಸಗಿ ಆಸ್ಪತ್ರೆಗಳಲ್ಲಿ ಕರೊನಾ ಸೋಂಕಿತರಿಗೆ ಕೈ ಕಾಲುಗಳನ್ನು ಕಟ್ಟಿ ಹಾಕಿ ಚಿಕಿತ್ಸೆ ನೀಡಲಾಗುತ್ತಿದೆ, ರೋಗಿಗಳನ್ನು ಹೀನಾಯ ಸ್ಥಿತಿಯಲ್ಲಿ ನಡೆಸಿಕೊಳ್ಳುತ್ತಿದ್ದಾರೆ, ಕೋವಿಡ್​ನಿಂದ ಮೃತಪಟ್ಟವರ ಮುಖ ನೋಡಲು ಕುಟುಂಬಸ್ಥರು ಅಂಗಲಾಚಿದರೂ ತೋರಿಸುತ್ತಿಲ್ಲ... ಹೀಗೆಂದು ಬಿಜೆಪಿ ಜನಪ್ರತಿನಿಧಿಗಳೇ ಹೇಳುವ ಮೂಲಕ ಕರೊನಾ ಟ್ರೀಟ್​ಮೆಂಟ್​ನ ಕರ್ಮಕಾಂಡವನ್ನು ಬಿಚ್ಚಿಟ್ಟಿದ್ದಾರೆ.

ಮಂಗಳವಾರ ನಡೆದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸಭೆಯಲ್ಲಿ ಆಳುವ ಪಕ್ಷದ ಸದಸ್ಯರೇ ಕರೊನಾ ಚಿಕಿತ್ಸೆಯಲ್ಲಾಗುತ್ತಿರುವ ಮಹಾ ಎಡವಟ್ಟಿನ ಬಗ್ಗೆ ಪ್ರಸ್ತಾಪಿಸಿದರು. ಬೆಂಗಳೂರಿನ ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳು ಬೇರೆ ಕಡೆ ಹೋಗಬಾರದೆಂದು ಹೀಗೆ ಮಾಡುತ್ತಾರೆ. ನನ್ನ ತಂದೆಯನ್ನು ಸೇರಿಸಿದ್ದ ಆಸ್ಪತ್ರೆಯಲ್ಲೂ ಕರೊನಾ ರೋಗಿಗೆ ಕೈಕಾಲು ಕಟ್ಟಿದ್ದನ್ನು ಖುದ್ದು ನೋಡಿದ್ದೇನೆ ಎಂದು ಶಾಸಕ ಸತೀಶ್​ ರೆಡ್ಡಿ ಹೇಳಿದರು. ಇದಕ್ಕೆ ಧ್ವನಿಗೂಡಿಸಿದ ಕಾಂಗ್ರೆಸ್​ನ ಈಶ್ವರ ಖಂಡ್ರೆ, ಬೀದರ್​ನಲ್ಲೂ ಇಂಥದ್ದೇ ವಿಚಾರ ಕೇಳಿದ್ದೇನೆ. ಆ ಬಗ್ಗೆ ಆಸ್ಪತ್ರೆ ಆಡಳಿತ ಮಂಡಳಿಗೆ ತರಾಟೆ ತೆಗೆದುಕೊಂಡಿದ್ದೆ ಎಂದು ಬೇಸರ ವ್ಯಕ್ತಪಡಿಸಿದರು.

ಖಾಸಗಿ ಆಸ್ಪತ್ರೆಗಳ ಐಸಿಯುಗಳಲ್ಲಿ ಇಂತಹ ವಾತಾವರಣ ಇದೆ. ಇದಕ್ಕೆ ಮೊದಲು ಬ್ರೇಕ್​ ಹಾಕಬೇಕು. ಐಸಿಯುಗಳಿಗೆ ಸಿಸಿಕ್ಯಾಮರಾ ಅಳವಡಿಸಬೇಕು ಎಂದು ಎಲ್ಲ ಸದಸ್ಯರೂ ಒಮ್ಮತದ ಸಲಹೆ ನೀಡಿದರು. ಕರೊನಾ ಟೆಸ್ಟ್​ ಮಾಡಿದ ಬಳಿಕ ರಿಸಲ್ಟ್​ ಬರುವವರೆಗೆ ಅವರನ್ನು ಹೊರಗೆ ಬಿಡಬಾರದು ಎಂದು ಬಿಜೆಪಿಯ ಎ.ಎಸ್​.ನಡಹಳ್ಳಿ ಆಗ್ರಹಿಸಿದರು.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಎಚ್​.ಕೆ. ಪಾಟೀಲ್​, ಬಿಬಿಎಂಪಿ ಆಯುಕ್ತರಿಗೆ ಹಲವು ಸೂಚನೆ ನೀಡಿದ್ದೇವೆ. ರೋಗಿಯ ಊಟ, ತಿಂಡಿ, ಟ್ರೀಟ್​ಮೆಂಟ್​ ಬಗ್ಗೆ ಸಿಸಿ ಕ್ಯಾಮರಾ ಮೂಲಕ ಮಾನಿಟರ್​ ಮಾಡಬೇಕು. ಕರೊನಾ ರೋಗಿಗಳು ಓಡಿ ಹೋಗಬಾರದು ಎಂದು ಕಾಲು ಕಟ್ಟುತ್ತಾರೆ ಎನ್ನುವ ಚರ್ಚೆ ಆಗಿದೆ. ಅದರೆ, ಅದನ್ನು ಆಯುಕ್ತರು ಅಲ್ಲಗಳೆದಿದ್ದಾರೆ ಎಂದು ಹೇಳಿದರು.