ನ್ಯೂಸ್

ಕರೊನಾ ಪ್ಯಾಕೇಜ್ ಘೋಷಣೆ: 22000 ಬಡವರ ಬಂಧು ಸಾಲಮನ್ನಾ, ಕಾರ್ವಿುಕರಿಗೆ 1 ಸಾವಿರ ರೂ. ನೆರವು

kumarvrl

ಬೆಂಗಳೂರು: ಲಾಕ್​ಡೌನ್​ನಿಂದ ಸಂಕಷ್ಟಕ್ಕೆ ಸಿಲುಕಿರುವ ಬೀದಿಬದಿ ವ್ಯಾಪಾರಿಗಳು, ಬಡವರು ಸೇರಿ ಸಾಮಾಜಿಕ ಭದ್ರತಾ ಯೋಜನೆ ಅಡಿ ಬರುವ ಪಿಂಚಣಿದಾರರು, ನರೇಗಾ ಕಾರ್ವಿುಕರಿಗಾಗಿ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಿದೆ. ಬುಧವಾರ ವಿಧಾನಸಭೆಯ ವಿತ್ತೀಯ ಕಲಾಪದ ಚರ್ಚೆಗೆ ಉತ್ತರ ನೀಡಿದ ಸಿಎಂ ಬಿ. .ಎಸ್.ಯಡಿಯೂರಪ್ಪ, ಕೋವಿಡ್-19 ಭೀತಿ ಎಲ್ಲೆಡೆ ಆವರಿಸಿದ್ದು, ಇಡೀ ರಾಜ್ಯವೇ ಸ್ತಬ್ಧವಾಗಿದೆ. ಹಾಗಾಗಿ ದುಡಿವ ಕೈಗಳಿಗೆ ಕೆಲಸವಿಲ್ಲದಾಗಿದೆ. ಹೀಗಾಗಿ ಹಲವು ಘೋಷಣೆ ಹೊರಡಿಸುತ್ತಿರುವುದಾಗಿ ಹೇಳಿದರು.

200 ಕೋಟಿ ಬಿಡುಗಡೆ: ಕರೊನಾ ಸೋಂಕನ್ನು ನಿರ್ಲಕ್ಷಿ್ಯಸಿಲ್ಲ. ಸಾಕಷ್ಟು ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದೇವೆ. ದೇಶದಲ್ಲೇ ಮೊದಲ ಸಾವಿನ ಪ್ರಕರಣ ಕರ್ನಾಟಕದಲ್ಲೇ ವರದಿಯಾಗಿದೆ. ವೈದ್ಯಕೀಯ ನೆರವಿಗಾಗಿ ಸರ್ಕಾರ 200 ಕೋಟಿ ರೂ. ಬಿಡುಗಡೆ ಮಾಡಿದೆ.

ಕರೊನಾ ಟಾಸ್ಕ್ ಫೋರ್ಸ್ ರಚನೆ: ಕರೋನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಹಾಗೂ ಇಬ್ಬರು ಸಚಿವರನ್ನು ಒಳಗೊಂಡ ಟಾಸ್ಕ್ ಫೋರ್ಸ್ ರಚಿಸಲಾಗಿದೆ. ಈಗಾಗಲೇ ವಿಜ್ಞಾನಿಗಳು, ಖಾಸಗಿ ಆಸ್ಪತ್ರೆ ತಜ್ಞ ವೈದ್ಯರೊಂದಿಗೆ ಸಭೆ ನಡೆಸಲಾಗಿದೆ. ಪ್ರತಿದಿನ ಸರ್ಕಾರ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಭೆ ನಡೆಸಲಾಗುತ್ತಿದೆ. ವಿದೇಶದಿಂದ ಆಗಮಿಸಿದವರನ್ನು ಮನೆಯಲ್ಲಿ ಪ್ರತ್ಯೇಕವಾಗಿ ಇರಿಸುವುದು ಮೊದಲ ಆದ್ಯತೆಯಾಗಿದೆ. ಹೋಂ ಕ್ವಾರಂಟೈನ್​ನಲ್ಲಿರುವವರನ್ನು ತಂತ್ರಜ್ಞಾನದ ಮೂಲಕ ನಿಗಾ ವಹಿಸಲಾಗುತ್ತಿದೆ ಎಂದು ಸಿಎಂ ಮಾಹಿತಿ ನೀಡಿದರು.

ಇಂದಿನಿಂದ ಸಂಪೂರ್ಣ ನಾಕಾಬಂದಿ

ಬೆಂಗಳೂರು ಮಹಾನಗರ ಸುತ್ತಮುತ್ತ ಬುಧವಾರದಿಂದ ಸಂಪೂರ್ಣ ನಾಕಾಬಂದಿ ಜಾರಿಗೆ ಬರಲಿದ್ದು, ಯಾವುದೇ ವಾಹನ ಹೊರಗೆ ಹೋಗಲು ಬಿಡುವುದಿಲ್ಲ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು. ಬೇರೆ ಜಿಲ್ಲೆಗಳಿಂದ ಬಂದವರು ಸ್ವಂತ ವಾಹನಗಳಲ್ಲಿ ವಾಪಸ್ ಹೋಗಲು ತಯಾರಾಗಿ ಊರಿನ ದಾರಿ ಹಿಡಿದಿದ್ದರು. ಈ ವೇಳೆ ಕೆಲವು ಕಡೆ ಸಂಚಾರ ದಟ್ಟಣೆ ಉಂಟಾಗಿದ್ದರಿಂದ ಜನ ವಾಪಸ್ ಹೋಗಲು ಬಿಡಿ ಎಂದು ಪೊಲೀಸರಿಗೆ ಆದೇಶಿಸಲಾಗಿದೆ. ಇದನ್ನು ತಪ್ಪಾಗಿ ಅರ್ಥೈಸಬಾರದು ಎಂದು ಸಿಎಂ ತಿಳಿಸಿದ್ದಾರೆ.

ಯಾವುವು? ಏನು? ಎತ್ತ?

ಬಡವರ ಬಂಧು ಯೋಜನೆಯಡಿ ಬೀದಿ ಬದಿಯ ವ್ಯಾಪಾರಿಗಳಿಗೆ ಸಹಕಾರ ಇಲಾಖೆಯಿಂದ ನೀಡಲಾಗಿದ್ದ 13.20 ಕೋಟಿ ರೂ. ಸಾಲ ಮನ್ನಾ ಆಗಲಿದೆ. 2018-19ನೇ ಸಾಲಿನಲ್ಲಿ ಸಾಲ ಪಡೆದ 15,120 ಜನರ 9.10 ಕೋಟಿ ರೂ., 2019-20ನೇ ಸಾಲಿನಲ್ಲಿ 6,500 ಬೀದಿ ಬದಿಯ ವ್ಯಾಪಾರಿಗಳು ಪಡೆದ 5.16 ಕೋಟಿ ರೂ.(ಪಾವತಿ ಮಾಡಿರುವ ಸಾಲ ಬಿಟ್ಟು) 13.20 ಕೋಟಿ ರೂ. ಸಾಲ ಮನ್ನಾ ಆಗಲಿದೆ.

ಕಟ್ಟಡ ಕಾರ್ವಿುಕರಿಗೆ ಮಾಸಿಕ ತಲಾ 1 ಸಾವಿರ ರೂ. ಕೊಡುವುದಾಗಿ ಸರ್ಕಾರ ಘೋಷಿಸಿದೆ. ಒಟ್ಟು 21 ಲಕ್ಷ ಕಟ್ಟಡ ಕಾರ್ವಿುಕರು ಈ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ.

ವಿಧವಾ ವೇತನ, ಅಂಗವಿಕಲರ ವೇತನ, ಹಿರಿಯ ನಾಗರಿಕರು ಸೇರಿ ಸಾಮಾಜಿಕ ಭದ್ರತಾ ಯೋಜನೆಯಡಿ ನೀಡುವ 2 ತಿಂಗಳ ಪಿಂಚಣಿಗಳನ್ನು ಮುಂಗಡ ನೀಡಲಾಗುತ್ತದೆ.

ದುಡಿವ ಕೈಗಳಿಗೆ ಕೆಲಸವಿಲ್ಲದೇ ಇರುವುದರಿಂದ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ನೋಂದಾಯಿಸಿಕೊಂಡ ಕೂಲಿಕಾರ್ವಿುಕರಿಗೆ ಹೆಚ್ಚುವರಿ ಮಾನವ ದಿನಗಳ ಬಾಬ್ತನ್ನು ಮುಂಗಡವಾಗಿ ನೀಡಲು ನಿರ್ಧರಿಸಲಾಗಿದೆ.

ಬಡವರಿಗೆ ನೆರವಾಗುವ ಹಿನ್ನೆಲೆಯಲ್ಲಿ ಎಲ್ಲ ಬಿಪಿಎಲ್ ಪಡಿತರ ಚೀಟಿದಾರರಿಗೆ 2 ತಿಂಗಳ ಪಡಿತರವನ್ನು ಉಚಿತವಾಗಿ ನೀಡಲು ಸರ್ಕಾರ ತೀರ್ವನಿಸಿದೆ.

ಸರ್ಕಾರವನ್ನು ದೂಷಿಸಬೇಡಿ

ರಾಜ್ಯದಲ್ಲಿ ಕರ್ಫ್ಯೂ ವಾತಾವರಣ ಇದ್ದು, ನಿಯಮಮೀರಿ ರಸ್ತೆಯಲ್ಲಿ ಅಡ್ಡಾಡುವವರ ವಿರುದ್ಧ ಪೊಲೀಸರು ಕ್ರಮ ಕೈಗೊಂಡರೆ ಸರ್ಕಾರವನ್ನು ದೂಷಿಸಬೇಡಿ ಎಂದು ಸಿಎಂ ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ. ಸಣ್ಣಪುಟ್ಟ ಸಾಮಾಗ್ರಿಗಳು, ದಿನಸಿ ಕೊಳ್ಳುವುದಕ್ಕೆ ಮಾತ್ರ ಮನೆಗಳಿಂದ ಹೊರ ಬರಬೇಕೆ ಹೊರತು ಅನಗತ್ಯವಾಗಿ ಹೊರಬರಬಾರದು, ದ್ವಿಚಕ್ರ ವಾಹನ ಹಾಗೂ ಕಾರುಗಳಲ್ಲಿ ಅನಗತ್ಯವಾಗಿ ತಿರುಗಬಾರದು ಎಂದು ತಿಳಿಸಿದರು. ಬಡವರಿಗೆ ದಿನನಿತ್ಯ ಆಹಾರ ಸರಬರಾಜು ಮಾಡಲು ಇಂದಿರಾ ಕ್ಯಾಂಟೀನ್ ತೆರೆಯುವುದಾಗಿ ಸೋಮವಾರ ತಿಳಿಸಲಾಗಿತ್ತು, ಆದರೆ ಅಲ್ಲಿಯೂ ನೂಕುನುಗ್ಗಲು ಉಂಟಾಗುವುದರಿಂದ ತೆರೆಯದಿರುವ ನಿರ್ಧಾರಕ್ಕೆ ಬರಲಾಗಿದೆ ಎಂದರು.