ನ್ಯೂಸ್

ಮಕ್ಕಳ ಲಸಿಕೆ ಕೊರ್ಬಿವ್ಯಾಕ್ಸ್ ತುರ್ತು ಬಳಕೆಗೆ ಅನುಮತಿ; 2022ರಲ್ಲಿ ಮಹಾಮಾರಿ ಅಂತ್ಯ ಎಂದ ಡಬ್ಲ್ಯುಎಚ್​ಒ

Webdesk - Ravikanth

ನವದೆಹಲಿ: ಬಯಾಲಾಜಿಕಲ್ ಇ ಕಂಪನಿಯ ಕೊರ್ಬಿವ್ಯಾಕ್ಸ್ ಲಸಿಕೆಯ ತುರ್ತು ಬಳಕೆಗೆ ಭಾರತದಲ್ಲಿ ಅನುಮತಿ ನೀಡಲಾಗಿದೆ. 12ರಿಂದ 18 ವಯೋ ಗುಂಪಿನ ಮಕ್ಕಳಿಗೆ ಲಸಿಕೆ ನೀಡಲು ಭಾರತೀಯ ಔಷಧ ಮಹಾ ನಿಯಂತ್ರಕರು (ಡಿಸಿಜಿಐ) ಸೋಮವಾರ ಕೆಲವು ಷರತ್ತುಗಳೊಂದಿಗೆ ಅನುಮೋದನೆ ನೀಡಿದ್ದಾರೆ. 15 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ವ್ಯಾಕ್ಸಿನ್ ಹಾಕಲು ಸರ್ಕಾರ ಇನ್ನೂ ನಿರ್ಧಾರ ಕೈಗೊಂಡಿಲ್ಲ. ಕೊರ್ಬಿವ್ಯಾಕ್ಸ್ ಬಳಕೆಗೆ ನಿರ್ಬಂಧಿತ ಅನುಮತಿ ನೀಡಬಹುದೆಂದು ಸಿಡಿಎಸ್​ಸಿಒದ ಕೋವಿಡ್-19 ವಿಷಯ ತಜ್ಞರ ಸಮಿತಿ ಫೆಬ್ರವರಿ 14ರಂದು ಮಾಡಿದ್ದ ಶಿಫಾರಸಿನ ಹಿನ್ನೆಲೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಪ್ರಥಮ ದೇಶೀಯ ಲಸಿಕೆ: ಕೊರ್ಬಿವ್ಯಾಕ್ಸ್ ಭಾರತದ ಪ್ರಥಮ ದೇಶೀಯವಾಗಿ ತಯಾರಿಸಲಾದ ಕೋವಿಡ್ ವಿರುದ್ಧದ ಆರ್​ಬಿಡಿ ಪ್ರೊಟೀನ್ ಸಬ್-ಯುನಿಟ್ ವ್ಯಾಕ್ಸಿನ್ ಆಗಿದೆ. ತುರ್ತು ಸಂದರ್ಭಗಳಲ್ಲಿ ವಯಸ್ಕರಿಗೆ ಅದನ್ನು ನೀಡಬಹುದಾಗಿದ್ದು ಈಗ ಮಕ್ಕಳಿಗೆ ಹಾಕಲೂ ಅನುಮೋದನೆ ನಿಡಲಾಗಿದೆ. ಅಮೆರಿಕದಲ್ಲಿ ಅನುಮೋದಿಸಲಾಗಿರುವ ಫೈಜರ್, ಮಾಡರ್ನಾ ಮತ್ತು ಜಾನ್ಸನ್ ಆಂಡ್ ಜಾನ್ಸನ್ ಲಸಿಕೆಗಿಂತ ಭಿನ್ನವಾಗಿ ಕೊರ್ಬಿವ್ಯಾಕ್ಸ್ ದೇಹಕ್ಕೆ ನೇರವಾಗಿ ಸ್ಪೈಕ್ ಪ್ರೊಟೀನ್ ಒಸಗಿಸುತ್ತದೆ.

ಯಾರಿಂದ ಅಭಿವೃದ್ಧಿ?: ಬೇಯ್ಲರ್ ಕಾಲೇಜ್ ಆಫ್ ಮೆಡಿಸಿನ್​ನ ಟೆಕ್ಸಾಸ್ ಚಿಲ್ಡ ್ರ್ ಹಾಸ್ಪಿಟಲ್ ಸೆಂಟರ್ ಫಾರ್ ವ್ಯಾಕ್ಸಿನೇಷನ್​ನ ಮಾರಿಯಾ ಎಲೆನಾ ಮತ್ತು ಪೀಟರ್ ಹೊಟೆಝå್, ಕೊರ್ಬಿವ್ಯಾಕ್ಸ್ ಅಭಿವೃದ್ಧಿ ಪಡಿಸಿದವರು.

ಅಮೆರಿಕದಲ್ಲಿ ಇಳಿಮುಖ: ಕೋವಿಡ್-19 ಸೋಂಕಿನಿಂದ ತತ್ತರಿಸಿದ್ದ ಅಮೆರಿಕದಲ್ಲಿ ಸೋಂಕು ಪ್ರಕರಣ ಹಾಗೂ ಆಸ್ಪತ್ರೆ ದಾಖಲಾಗುವವರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದ್ದು ಒಮಿಕ್ರಾನ್ ಅಬ್ಬರ ಕಡಿಮೆಯಾಗುತ್ತಿರುವುದರ ಸೂಚನೆಯಾಗಿದೆ. ಶನಿವಾರ ವರದಿಯಾದ ಪ್ರಕರಣಗಳ ಸಂಖ್ಯೆ ಒಂದು ಲಕ್ಷಕ್ಕಿಂತ ಹೆಚ್ಚಿರಲಿಲ್ಲ. ಐದು ವಾರಗಳ ಹಿಂದೆ, ಅಂದರೆ ಜನವರಿ 16ರಂದು ದಾಖಲಾದ 8,00,850ಕ್ಕೆ ಹೋಲಿಸಿದರೆ ಇದು ತುಂಬಾ ಕಡಿಮೆಯಾಗಿದ್ದು ಸಮಾಧಾನಕರವಾಗಿದೆ ಎಂದು ಜಾನ್ಸ್ ಹಾಪ್ಕಿನ್ಸ್ ಯುನಿವರ್ಸಿಟಿ ಹೇಳಿದೆ.

2 ಲಕ್ಷಕ್ಕಿಳಿದ ಸಕ್ರಿಯ ಕೇಸ್: ಭಾರತದಲ್ಲಿ ಸೋಮವಾರ ಕರೊನಾ ಸೋಂಕಿನ 16,051 ಹೊಸ ಪ್ರಕರಣಗಳು ದೃಢಪಟ್ಟಿದ್ದು, ಸೋಂಕಿತರ ಒಟ್ಟು ಸಂಖ್ಯೆ 4,28,38,524ಕ್ಕೆ ಏರಿದೆ. 206 ರೋಗಿಗಳು ಮೃತಪಟ್ಟಿದ್ದು ಸಾವಿನ ಸಂಖ್ಯೆ 5,12,109ಕ್ಕೆ ತಲುಪಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 2,02,131ಕ್ಕೆ ಇಳಿದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಕೊರ್ಬಿವ್ಯಾಕ್ಸ್ ಅನುಮೋದನೆಯೊಂದಿಗೆ ಕೋವಿಡ್- ವಿರೋಧಿ ಜಾಗತಿಕ ಹೋರಾಟವನ್ನು ಅಂತ್ಯಗೊಳಿಸುವಲ್ಲಿ ನಾವು ಇನ್ನಷ್ಟು ಸಮೀಪ ಬಂದಿದ್ದೇವೆ. | ಮಹಿಮಾ ಡಾಟ್ಲಾ ಬಯಾಲಜಿಕಲ್ ಇ ಎಂಡಿ

ಹೊಸ ಪ್ರಭೇದ ಬರದಿದ್ದರೆ ಕರೊನಾ ಅಂತ್ಯ ಸಾಧ್ಯತೆ

ಕರೊನಾ 2022ರಲ್ಲೇ ಅಂತ್ಯಗೊಳ್ಳಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ) ಆಶಾವಾದ ವ್ಯಕ್ತಪಡಿಸಿದೆ. ಒಮಿಕ್ರಾನ್ ನಂತರ ಯಾವುದೇ ಕೋವಿಡ್ ಪ್ರಭೇದ ಆಸ್ಪೋಟಗೊಳ್ಳದಿದ್ದರೆ ಈ ವರ್ಷವೇ ಸಾಂಕ್ರಾಮಿಕತೆ ಕೊನೆಯಾಗಬಹುದು ಎಂದು ಸಂಸ್ಥೆಯ ರಷ್ಯಾ ಪ್ರತಿನಿಧಿ ಮೆಲಿಟಾ ವುಂಜೋವಿಕ್ ಹೇಳಿದ್ದಾರೆ. ಏನಿದ್ದರೂ ವೈರಾಣು ಸಂಪೂರ್ಣವಾಗಿ ನಾಶವಾಗುತ್ತದೆನ್ನುವುದು ಇದರ ಅರ್ಥವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪುರಿ ದೇಗುಲ ನಿಯಮ ಸಡಿಲಿಕೆ: ಎರಡು ಡೋಸ್ ಲಸಿಕೆ ಪಡೆಯದ ಹಾಗೂ ಆರ್​ಟಿಪಿಸಿಆರ್ ಪರೀಕ್ಷೆಯ ನೆಗೆಟಿವ್ ವರದಿ ಇಲ್ಲದ ಭಕ್ತರು ಕೂಡ ಇನ್ನು ಮುಂದೆ ಪುರಿ ಜಗನ್ನಾಥ ದೇವಾಲಯಕ್ಕೆ ಭೇಟಿ ನೀಡಬಹುದು. ಸೋಂಕು ಕಡಿಮೆಯಾಗುತ್ತಿರುವುದರಿಂದ ನಿಯಮವನ್ನು ಸಡಿಲಿಸಲಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಸೋಮವಾರ ಪ್ರಕಟಿಸಿದೆ. ಭಾನುವಾರ ಹೊರತು ಪಡಿಸಿ ಉಳಿದ ಎಲ್ಲ ದಿನಗಳಂದು ಬೆಳಿಗ್ಗೆ 6ರಿಂದ 9ರ ವರೆಗೆ ಭಕ್ತರು ದರ್ಶನ ಪಡೆಯಬಹುದು. ಭಾನುವಾರ ಸ್ಯಾನಿಟೈಸ್ ಮಾಡಲು ಮಂದಿರ ಸಾರ್ವಜನಿಕರಿಗೆ ಮುಚ್ಚಿರಲಾಗುತ್ತದೆ.