ರಾಮನಗರ : ಕಾಲುಬಾಯಿ ರೋಗವೂ ಜಿಲ್ಲೆಯನ್ನು ಬಾಧಿಸುತ್ತಿದ್ದು, ಕೇಂದ್ರ ಸರ್ಕಾರದಿಂದ ಲಸಿಕೆ ಅಲಭ್ಯತೆ ಹೊರತಾಗಿಯೂ ಜಿಲ್ಲೆಯಲ್ಲಿ ವ್ಯಾಕ್ಸಿನ್‌ಗೆ ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆ ಮುಂದಾಗಿದೆ.
ಏಪ್ರಿಲ್‌ನಲ್ಲಿಯೇ ಕಾಲುಬಾಯಿ ರೋಗ ತಡೆಗೆ ಲಸಿಕೆ ಹಾಕಬೇಕಾಗಿತ್ತಾದರೂ ಅಲಭ್ಯತೆ ಪರಿಣಾಮ ಹೆಚ್ಚು ಮಿಶ್ರ ತಳಿ ರಾಸುಗಳನ್ನು ಹೊಂದಿರುವ ಜಿಲ್ಲೆಯಲ್ಲಿ ಕಾಲುಬಾಯಿ ರೋಗ ವ್ಯಾಪಿಸುವಂತೆ ಆಗಿದೆ. ಇದರಿಂದಾಗಿ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಲಸಿಕೆ ಬಂದಿಲ್ಲ: ಕರೊನಾ ವೈರಸ್‌ನಂತೆ ಕಾಲುಬಾಯಿ ರೋಗ ಹರಡುವ ವೈರಸ್ ಸಹ ರೂಪಾಂತರಿಯಾಗಿದ್ದು, ಪ್ರತಿ 2-3 ವರ್ಷಗಳಿಗೊಮ್ಮೆ ರೂಪಾಂತರಗೊಂಡು ರಾಸುಗಳ ಮೇಲೆ ಅಪ್ಪಳಿಸುತ್ತದೆ. ಈ ರೋಗ ನಿಯಂತ್ರಣಕ್ಕೆ ಲಸಿಕೆಯೇ ರಾಮಬಾಣವಾಗಿದ್ದು, ಕೇಂದ್ರ ಸರ್ಕಾರದ ನೆರವಿನೊಂದಿಗೆ ಪ್ರತಿ 6 ತಿಂಗಳಿಗೆ ಒಮ್ಮೆ ರಾಸುಗಳಿಗೆ ಲಸಿಕೆ ಹಾಕಲಾಗುತ್ತದೆ. ಆದರೆ 2020ರ ಅಕ್ಟೋಬರ್‌ನಲ್ಲಿ ಸಾಮೂಹಿಕ ಲಸಿಕಾ ಅಭಿಯಾನ ನಡೆಸಲಾಗಿದ್ದು, 2021ರ ಏಪ್ರಿಲ್‌ನಲ್ಲಿ ಮತ್ತೆ ಲಸಿಕೆ ಹಾಕಬೇಕಿತ್ತು. ಆದರೆ ಕರೊನಾ ಪರಿಣಾಮ ಲಸಿಕೆ ಪೂರೈಕೆ ಆಗದ ಹಿನ್ನೆಲೆಯಲ್ಲಿ 2 ತಿಂಗಳು ವಿಳಂಬವಾಗಿದ್ದು, ಇದು ರೋಗ ಉಲ್ಬಣಗೊಳ್ಳಲು ಕಾರಣವಾಗಿದೆ.
ರಾಜ್ಯ ಸರ್ಕಾರದಿಂದ ಪೂರೈಕೆ: ರಾಮನಗರದಲ್ಲಿ ರೋಗ ವ್ಯಾಪಿಸುತ್ತಿರುವುದನ್ನು ಅರಿತ ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆ ರಾಜ್ಯಮಟ್ಟದಿಂದಲೇ ಲಸಿಕೆ ಖರೀದಿಸಿ ಸೋಂಕು ವ್ಯಾಪಿಸಿರುವ ಗ್ರಾಮದ ಸುತ್ತಮುತ್ತಲ 5 ಕಿಮೀ ವ್ಯಾಪ್ತಿಯಲ್ಲಿ ರಿಂಗ್ ವ್ಯಾಕ್ಸಿನ್ ಮಾಡಿಸಲು ಮುಂದಾಗಿದೆ. ಪ್ರತಿ ಲಸಿಕೆ ಬೆಲೆ 7-12 ರೂ. ಇದ್ದು ಇದನ್ನು ಸ್ಥಳೀಯ ಅನುದಾನದಲ್ಲಿ ಖರೀದಿಸುವಂತೆ ಸೂಚನೆ ನೀಡಿದೆ ಎಂದು ತಿಳಿದು ಬಂದಿದೆ. ಇದರ ಜತೆಗೆ ಸೋಂಕು ವ್ಯಾಪಿಸುವುದನ್ನು ತಡೆಯಲು ಗ್ರಾಮಗಳಿಗೆ ಸೋಂಕು ನಿರೋಧಕ ಸಿಂಪಡಿಸುವ ಕಾರ್ಯವೂ ಆರಂಭಗೊಂಡಿದೆ.
ತಂಡಗಳ ರಚನೆ : ಲಸಿಕೆ ಹಾಕಿಸುವ ಸಂಬಂಧ ಹಾಗೂ ಈಗಾಗಲೇ ಸೋಂಕು ವ್ಯಾಪಿಸಿರುವ ಗ್ರಾಮದ ಸುತ್ತಮುತ್ತ ರಿಂಗ್ ವ್ಯಾಕ್ಸಿನ್ ಮಾಡಿಸಲು ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆ, ಪಶು ವೈದ್ಯರ ತಂಡವನ್ನು ನೇಮಕ ಮಾಡಿದೆ. ರಾಮನಗರ ತಾಲೂಕಿನ 14 ಗ್ರಾಮಗಳಲ್ಲಿ ರೋಗ ಕಾಣಿಸಿಕೊಂಡಿದ್ದು, ಇದಕ್ಕೆ ಹೊಂದಿಕೊಂಡಂತೆ 5 ಕಿ.ಮೀ. ವ್ಯಾಪ್ತಿಯಲ್ಲಿರುವ 49 ಗ್ರಾಮಗಳಲ್ಲಿ ಲಸಿಕೆ ಹಾಕಲು 10 ತಂಡಗಳನ್ನು ರಚಿಸಲಾಗಿದೆ.
ಚನ್ನಪಟ್ಟಣದ 13 ಗ್ರಾಮಗಳಲ್ಲಿ ರೋಗ ಉಲ್ಬಣಿಸಿದ್ದು, 43 ಗ್ರಾಮಗಳಲ್ಲಿ ರಿಂಗ್ ವ್ಯಾಕ್ಸಿನ್ ನಡೆಸಲು 7 ತಂಡಗಳನ್ನು ರಚನೆ ಮಾಡಲಾಗಿದೆ, ಮಾಗಡಿಯಲ್ಲಿ 2 ಗ್ರಾಮ, ಕನಕಪುರದ ಒಂದು ಗ್ರಾಮದಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಇದಕ್ಕಾಗಿ ತಲಾ ಒಂದು ತಂಡ ರಚನೆ ಮಾಡಲಾಗಿದೆ. ಒಟ್ಟಾರೆ ನಾಲ್ಕು ತಾಲೂಕುಗಳ 33,893 ರಾಸುಗಳಿಗೆ ಲಸಿಕೆ ಹಾಕಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ತುರ್ತು ಕ್ರಮ ಅಗತ್ಯವಿದೆ : ಲಭ್ಯ ಮಾಹಿತಿ ಪ್ರಕಾರ ಲಸಿಕೆ ಶುಕ್ರವಾರದ ವೇಳೆಗೆ ಜಿಲ್ಲೆಗೆ ಬರಲಿದೆ ಎಂದು ತಿಳಿದು ಬಂದಿದೆ, ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆ ಮತ್ತು ಕರ್ನಾಟಕ ಹಾಲು ಮಹಾಮಂಡಳಿ ಹಾಗೂ ಬಮುಲ್ ಒಗ್ಗೂಡಿ ಕಾಲುಬಾಯಿ ರೋಗದ ವಿರುದ್ಧ ಹೋರಾಟ ಮಾಡಿವೆ. 2013ರಲ್ಲಿ ಕೊಂಚ ಎಚ್ಚರ ತಪ್ಪಿದ ಪರಿಣಾಮ ಸುಮಾರು 2 ಸಾವಿರಕ್ಕೂ ಹೆಚ್ಚು ರಾಸುಗಳು ರೋಗಕ್ಕೆ ಬಲಿಯಾಗಿದ್ದವು. ಆದರೆ ಈಗಾಗಲೇ ಜಿಲ್ಲೆಯಲ್ಲಿ ಸೋಂಕು ವ್ಯಾಪಿಸುತ್ತಿರುವ ಕಾರಣ ಮತ್ತಷ್ಟು ವಿಳಂಬ ಮಾಡಿದರೆ ಸಾಲು ಸಾಲು ರಾಸುಗಳು ಜೀವ ಕಳೆದುಕೊಳ್ಳಲಿವೆ.
ಲಸಿಕೆ ವಿಳಂಬದಿಂದಾಗಿ ಕಾಲುಬಾಯಿ ರೋಗ ವ್ಯಾಪಿಸಲು ಕಾರಣವಾಗಿದೆ. ಇದೀಗ ತಕ್ಷಣವೇ ಲಸಿಕೆ ಹಾಕಬೇಕಿದ್ದು, ಇದಕ್ಕೆ ಬೇಕಾದ ಎಲ್ಲ ನೆರವನ್ನು ಬಮುಲ್ ನೀಡಲು ಸಿದ್ಧವಿದೆ. ನರಸಿಂಹಮೂರ್ತಿ ಅಧ್ಯಕ್ಷ, ಬಮುಲ್ ರೋಗ ವ್ಯಾಪಿಸುತ್ತಿದೆ. ಈಗ ರಿಂಗ್ ವ್ಯಾಕ್ಸಿನ್ ಮಾಡಲು ಸೂಚನೆ ನೀಡಲಾಗಿದ್ದು, ಶುಕ್ರವಾರದ ವೇಳೆಗೆ ಲಸಿಕೆ ಪೂರೈಕೆ ಆಗುವ ಸಾಧ್ಯತೆ ಇದೆ. ಸೋಂಕು ಹರಡುವುದನ್ನು ತಪ್ಪಿಸಿದರಷ್ಟೇ ರಾಸುಗಳ ಸಾವನ್ನು ತಡೆಯಬಹುದು. ಹೆಸರು ಹೇಳಲಿಚ್ಛಿಸದ, ಪಶು ವೈದ್ಯ