ನವದೆಹಲಿ: ಕರೊನಾ ವೈರಸ್ ಸೋಂಕು ಭಾರತದಲ್ಲಿ ಇನ್ನೂ ಮೂರನೇ ಹಂತ ಅಂದರೆ ಸಾಮುದಾಯಿಕ ಹರಡುವಿಕೆ ಹಂತ ತಲುಪಿಲ್ಲ. ಅದು ಇನ್ನೂ ಸ್ಥಳಿಯ ಮಟ್ಟದಲ್ಲಿ ಮಾತ್ರ ಅಂದರೆ ಸೋಂಕಿತ ವ್ಯಕ್ತಿಯ ಕುಟುಂಬ ವರ್ಗದವರಿಗೆ ಹರಡುವಿಕೆ ಹಂತದಲ್ಲಿದೆ ಎಂದು ಭಾರತೀಯ ವೈದ್ಯಕಿಯ ಸಂಶೋಧನಾ ಮಂಡಳಿ (ಐಸಿಎಂಆರ್) ಸೋಮವಾರ ಸ್ಪಷ್ಟಪಡಿಸಿದೆ.
ಸುದ್ದಿಗಾರರ ಜತೆ ಮಾತನಾಡಿದ ಐಸಿಎಂಆರ್ನ ಲವ ಅಗರ್ವಾಲ್ ಈ ವಿಷಯ ತಿಳಿಸಿದ್ದಾರೆ. ಒಂದು ವೇಳೆ ಸಮುದಾಯಿಕ ಹರಡುವಿಕೆ ಎಂಬ ಪದ ಬಳಸಿದರೆ ಅದು ಆಧಾರರಹಿತ ವದಂತಿ ಎನಿಸಿಕೊಳ್ಳುತ್ತದೆ ಎಂದು ಹೇಳಿದ್ದಾರೆ.
ಭಾರತದಲ್ಲಿ ಇದುವರೆಗೆ 1,100 ಜನರು ಕರೊನಾ ವೈರಸ್ ಸೋಂಕಿಗೆ ಒಳಗಾಗಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪಿಡುಗಿಗೆ 29 ಜನ ಬಲಿಯಾಗಿದ್ದಾರೆ.
ವಿದೇಶಗಳಿಂದ ಬಂದವರು ಕರೊನಾ ಸೋಂಕಿಗೆ ಒಳಗಾಗಿರುವುದು ಮೊದಲ ಹಂತವಾಗಿರುತ್ತದೆ. ಸೋಂಕಿತನ ಕುಟುಂಬ ವರ್ಗದವರು ಸೋಂಕಿಗೆ ತುತ್ತಾಗುವುದು ಸ್ಥಳಿಯ ಅಥವಾ ನಿಯಂತ್ರಿತ ಸಾಮುದಾಯಿಕ ಹರಡುವಿಕೆ ಎರಡನೇ ಹಂತ ಎನಿಸಿಕೊಳ್ಳುತ್ತದೆ. ಇದರ ಪರಿಣಾಮ ಕೂಡ ಸೀಮಿತವಾಗಿರುತ್ತದೆ. ಆದರೆ ಸಾಮುದಾಯಿಕ ಹರಡುವಿಕೆ ಎಂಬ ಮೂರನೇ ಹಂತದಲ್ಲಿ ಸಂಖ್ಯೆ ಹೆಚ್ಚಾಗುತ್ತಾ ಹೋಗುತ್ತದೆ. ಈ ಹಂತದಲ್ಲಿ ವಿದೇಶಕ್ಕೆ ಹೋಗದಿರುವ ವ್ಯಕ್ತಿಗಳು ಕೂಡ ಸೋಂಕಿಗೆ ಒಳಗಾಗುತ್ತಾರೆ. ಹಾಗೂ ತಮಗೆ ಎಲ್ಲಿ ಸೋಂಕು ತಗುಲಿತು ಎಂಬುದನ್ನು ಗುರುತಿಸಲು ಜನರು ವಿಲರಾಗುತ್ತಾರೆ ಎಂದು ವಿವರಿಸಿದ್ದಾರೆ.