ಮಂಡ್ಯ: ಮಿಮ್ಸ್ (ಮಂಡ್ಯ ವೈದ್ಯಕೀಯ ಸಂಶೋಧನಾ ಸಂಸ್ಥೆ) ಐಸೋಲೇಷನ್ ವಾರ್ಡ್ನಿಂದ ಪರಾರಿಯಾಗಿದ್ದ ವ್ಯಕ್ತಿಯನ್ನು ಪೊಲೀಸರು 2 ತಾಸುಗಳಲ್ಲಿ ಪತ್ತೆ ಮಾಡಿದ್ದಾರೆ.
ಆಸ್ಪತ್ರೆಯಿಂದ ಪರಾರಿಯಾದ ಆತ ಶಂಕರಮಠದಲ್ಲಿರುವ ತನ್ನ ಸಂಬಂಧಿಕರ ಮನೆಯಲ್ಲಿ ಇದ್ದ. ಪೊಲೀಸರು ಪತ್ತೆ ಮಾಡಿ ನಂತರ ಆತನನ್ನು ಆಸ್ಪತ್ರೆಗೆ ದಾಖಲು ಮಾಡಿದರು.
ದೆಹಲಿಯಲ್ಲಿ ನಡೆದ ನಿಜಾಮುದ್ದೀನ್ ಸಭೆಗೆ ಈತ ಹೋಗಿದ್ದ. ಅಲ್ಲದೆ ಈತ 10 ಮಂದಿ ಧರ್ಮ ಗುರುಗಳ ಸಂಪರ್ಕ ಕೂಡ ಹೊಂದಿದ್ದ. ಮಳವಳ್ಳಿಯಲ್ಲಿ ವಾಸವಾಗಿದ್ದ. ಭಾನುವಾರ ರಾತ್ರಿ ಮಳವಳ್ಳಿಯಲ್ಲಿ ಈತನನ್ನು ಪತ್ತೆ ಮಾಡಿ ಮಂಡ್ಯದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಸೋಮವಾರ ಬೆಳಗ್ಗೆ ಈತ ವಾರ್ಡ್ನಿಂದ ಪರಾರಿಯಾಗಿದ್ದ. ಸೋಂಕಿತ ವ್ಯಕ್ತಿ ಪರಾರಿಯಾಗಿರುವ ಸುದ್ದಿ ಹರಡುತ್ತಿದ್ದಂತೆ ಮಂಡ್ಯದ ಜನರಲ್ಲಿ ಭೀತಿ ಆವರಿಸಿತ್ತು. ಪೊಲೀಸರು ಕೂಡಲೇ ಶೋಧ ಆರಂಭಿಸಿದರು. ಅಂತಿಮವಾಗಿ ಪತ್ತೆ ಮಾಡಿ ಆಸ್ಪತ್ರೆಗೆ ದಾಖಲಿಸಿದರು. ಸದ್ಯ ಮಂಡ್ಯದ ಜನರ ನಿರಾಳರಾಗಿದ್ದಾರೆ.
ವಾರ್ಡ್ನಿಂದ ತಪ್ಪಿಸಿಕೊಂಡಿದ್ದ ಕರೊನಾ ಸೋಂಕಿತ ವ್ಯಕ್ತಿಯನ್ನು ಪತ್ತೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್ ಸ್ಪಷ್ಟಪಡಿಸಿದ್ದಾರೆ. (ದಿಗ್ವಿಜಯ ನ್ಯೂಸ್)