ನ್ಯೂಸ್

ಲಾಕ್​ಡೌನ್​ ಹಿನ್ನೆಲೆ: ಸರ್ಕಾರವೇ ಅಗತ್ಯ ವಸ್ತು ಖರೀದಿಸಿ ಚಿಲ್ಲರೆ ಅಂಗಡಿಗಳಿಗೆ ರವಾನಿಸಲಿದೆ: ಸಿಎಂ ಯಡಿಯೂರಪ್ಪ

ಬೆಂಗಳೂರು: ಕರೊನಾ ವೈರಸ್​ ಸೋಂಕು ಹರಡುವುದನ್ನು ತಪ್ಪಿಸಲು ರಾಜ್ಯವನ್ನು ಲಾಕ್​ಡೌನ್​ ಮಾಡಿರುವ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳಾದ ತರಕಾರಿ, ಮಾಂಸ, ಹಾಲು, ಹಣ್ಣು, ಕಾಳು, ಅಕ್ಕಿ, ರಾಗಿ ಹಾಗೂ ಜೋಳ ಕೊರತೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಸಿಎಂ ಯಡಿಯೂರಪ್ಪ ಅಭಯ ನೀಡಿದ್ದಾರೆ.

ಸರ್ಕಾರವೇ ರೈತರಿಂದ ನೇರವಾಗಿ ತರಕಾರಿ ಹಾಗೂ ಧಾನ್ಯ ಖರೀದಿಸಿ ಗೋದಾಮಿನಲ್ಲಿ ಸಂಗ್ರಹಿಸಿ ರಾಜ್ಯದಲ್ಲ ಎಲ್ಲ ಚಿಲ್ಲರೆ ಅಂಗಡಿಗಳಿಗೆ ಪೂರೈಸಲಿದೆ. ಅಂಗಡಿಗಳಿಂದ ನಾಗರಿಕರು ಖರೀದಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಅವರು ಸಚಿವ ಸಂಪುಟ ಸಭೆ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಷ್ಟ್ರದಲ್ಲಿ ಲಾಕ್​ಡೌನ್​ ಘೋಷಣೆ ಮಾಡಿದ್ದರೂ ರಾಜ್ಯದಲ್ಲಿ ಜನರು ರಸ್ತೆಯಲ್ಲಿ ಓಡಾಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ನನಗೆ ಕರೆ ಮಾಡಿ ಬೇಸರ ವ್ಯಕ್ತಪಡಿಸಿದರು. ಸಾರ್ವಜನಿಕರು ರಸ್ತೆಯಲ್ಲಿ ಸಂಚರಿಸಿದರೆ ಕಠಿಣ ಕ್ರಮ ಜರುಗಿಸುವಂತೆ ಪೊಲೀಸರಿಗೆ ಸೂಚಿಸಿದ್ದೇನೆ ಎಂದು ಅವರು ಮಾಹಿತಿ ನೀಡಿದರು.

ಬಡವರಿಗೆ ಇಂದಿರಾ ಕ್ಯಾಂಟೀನ್​ನಲ್ಲಿ ಉಚಿತವಾಗಿ ಆಹಾರದ ಪೊಟ್ಟಣಗಳನ್ನು ನಿಗದಿತ ಅವಧಿಯಲ್ಲಿ ವಿತರಿಸಲಾಗುವುದು. ಈ ವೇಳೆ ಸಾರ್ವಜನಿಕರು ಅಂತರ ಕಾಯ್ದುಕೊಳ್ಳಬೇಕು. ಲಾಕ್​ಡೌನ್​ ವೇಳೆ ಅಗತ್ಯ ವಸ್ತುಗಳನ್ನು ಅಧಿಕ ಬೆಲೆಗೆ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಪೊಲೀಸರಿಗೆ ಸೂಚಿಸಿದ್ದೇನೆ ಎಂದು ಅವರು ಎಚ್ಚರಿಕೆ ನೀಡಿದರು. (ದಿಗ್ವಿಜಯ ನ್ಯೂಸ್​)