ನ್ಯೂಸ್

ಕರೊನಾ ಕರಾಮತ್ತು- ಹೃದ್ಯ ಕ್ಷಣಕ್ಕೆ ಸಾಕ್ಷಿಯಾಗುವ ಭಾಗ್ಯ ಗಣಿನಾಡಿನದ್ದು!

ಶ್ರೀಕಾಂತ ಅಕ್ಕಿ

ಬಳ್ಳಾರಿ: ಕರೊನಾದಿಂದ ವಿಶ್ವವೇ ತತ್ತರಗೊಂಡಿದೆ. ಈ ಮಹಾಮಾರಿ ಕಡಿಮೆಯಾಗಲಿ ಎಂದು ದಿನನಿತ್ಯ ಜನತೆ ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ. ಇಂಥದರಲ್ಲಿ ಇದೇ ಕರೊನಾದಿಂದ ಕಣ್ಮರೆಯಾಗಿದ್ದ ಅಣ್ಣ ತಂಗಿ ಒಂದಾಗಿದ್ದಾರೆ.

ಕಳೆದ 4ವರ್ಷದಿಂದ ಕಾಣೆಯಾಗಿದ್ದ ಅಣ್ಣ ತಂಗಿ ಜೋಡಿ ಕೊನೆಗೂ ಒಂದಾದರು.ಮಾ.23ರಂದು ಹೊಸಪೇಟೆಯಲ್ಲಿ ಯುವತಿ ಸಿಕ್ಕ ಬಳಿಕ ಸಮರ್ಪಕ ಚಿಕಿತ್ಸೆ ನೀಡಲಾಗಿತ್ತು.ಅಲ್ಲದೆ ಆ ಯುವತಿಗೆ ಮೊದಲು ಕರೊನಾ ಪರೀಕ್ಷೆ ಮಾಡಿಸಿದ್ದೆವು. ಆ ನಂತರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಬ್ಬಂದಿ ಯುವತಿಯ ಅಣ್ಣನನ್ನು ಪತ್ತೆ ಹಚ್ಚಿ ಒಂದು ಮಾಡಿದ್ದಾರೆ. ಎಸ್.ಎಸ್.ನಕುಲ್ ಜಿಲ್ಲಾಧಿಕಾರಿ, ಬಳ್ಳಾರಿ

ಇದು, ಅಚ್ಚರಿಯಾದರೂ ಸತ್ಯ. ಮಹಾರಾಷ್ಟ್ರದ ಲಾತೂರ್ ಮೂಲದ 20ಹರೆಯದ ಸುಪ್ರಿಯಾ ಜೋಶಿ ಕಳೆದ 4 ವರ್ಷದ ಹಿಂದೆ ಕಾಣೆಯಾಗಿದ್ದಳು. ಅಣ್ಣ ಪ್ರಸನ್ನ ಜೋಶಿ ಎಲ್ಲ ಕಡೆ ಹುಡುಕುವ ಪ್ರಯತ್ನ ಮಾಡಿದರೂ ಸಿಕ್ಕಿರಲಿಲ್ಲ. ಈ ಕುರಿತಂತೆ ಮಹಾರಾಷ್ಟ್ರದಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದರೂ ಯಾವುದೇ ಉಪಯೋಗವಾಗಿರಲಿಲ್ಲ. ಆದರೆ, ಇವರಿಬ್ಬರ ಬಾಳಲ್ಲಿ ಕರೊನಾದ ಮೂಲಕ ಸಂತಸದ ಪಯಣ ಆರಂಭವಾಗಿದೆ. ತಂದೆ-ತಾಯಿಯಿಲ್ಲದ ಇಬ್ಬರು ಕೊನೆಗೂ ಗಣಿ ನಗರಿಯಲ್ಲಿ ಒಂದಾಗಿದ್ದು, ಮಂಗಳವಾರ ಮಹಾರಾಷ್ಟ್ರದತ್ತ ಪಯಣ ಬೆಳೆಸಿದ್ದಾರೆ. ಲಾತೂರ್ ಪೋದರ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಯುವತಿಯ ಅಣ್ಣ ಪ್ರಸನ್ನ ಜೋಶಿ ನಗರದ ಶಾಂತಿಧಾಮಕ್ಕೆ ಆಗಮಿಸಿ ತನ್ನ ತಂಗಿಯನ್ನು ಕರೆದೊಯ್ದಿದ್ದಾನೆ. ಸಿಬ್ಬಂದಿಗಳು ಅಣ್ಣ-ತಂಗಿಯರಿಬ್ಬರನ್ನು ಬೀಳ್ಕೊಟ್ಟರು.

ನನ್ನ ತಂಗಿ ಜೀವನದಲ್ಲಿ ಮತ್ತೆ ಸಿಗುವುದಿಲ್ಲ ಎಂದು ಕೈ ಚೆಲ್ಲಿ ಕುಳಿತುಕೊಂಡಿದ್ದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ಕಾರ್ಯಕ್ಕೆ ನಾನು ಚಿರ ಋಣಿ.ಇವರ ಉಪಕಾರವನ್ನು ನಾನೆಂದು ಮರೆಯುವುದಿಲ್ಲ. ಪ್ರಸನ್ನ ಜೋಶಿ ಯುವತಿಯ ಅಣ್ಣ

ಕರೊನಾ ಹೇಗೆ ಒಂದು ಮಾಡಿಸಿತು..?: ಲಾಕ್‌ಡೌನ್ ಘೋಷಣೆಯಾದ ಬಳಿಕ ಹೊಸಪೇಟೆ ಪಟ್ಟಣದಲ್ಲಿ ಎಲ್ಲೆಂದರಲ್ಲಿ ಸುತ್ತಾಡುತ್ತಿದ್ದ ಯುವತಿಯನ್ನು ಮಾ.23ರಂದು ಅಲ್ಲಿಯ ತಾಲೂಕಾಡಳಿತ, ಮಹಿಳಾ ಮತ್ತು ಮಕ್ಕಳ ರಕ್ಷಣೆ ಅಧಿಕಾರಿಗಳನ್ನು ಸಂಪರ್ಕಿಸಿ ಅವರ ಸುಪರ್ದಿಗೆ ಕೊಟ್ಟಿದೆ. ಯುವತಿ ಸರಿಯಾಗಿ ಕನ್ನಡ ಮಾತನಾಡದೇ ಡ್ರಗ್ಸ್ ವ್ಯಸನಿ ಆಗಿದ್ದರಿಂದ ಡಿಸಿ ಎಸ್.ಎಸ್.ನಕುಲ್ ಅವರ ಸೂಚನೆಯನ್ವಯ ಮೊದಲು ವಿಮ್ಸ್ ಆಸ್ಪತ್ರೆಗೆ ದಾಖಲಿಸಿ, ಕರೊನಾ ಪರೀಕ್ಷೆ ಮಾಡಿಸಲಾಯಿತು. ಪರೀಕ್ಷೆಯಲ್ಲಿ ನೆಗಟಿವ್ ಅಂಶ ಬಂದರೂ ಯುವತಿ ತಾನು ಯಾರೆಂದು ಸರಿಯಾಗಿ ಹೇಳಲಿಲ್ಲ. ಎಷ್ಟೇ ಪ್ರಯತ್ನ ಪಟ್ಟರೂ ಈಕೆಯ ಗುರುತು ಪತ್ತೆ ಹಚ್ಚುವಂತ ದಾಖಲೆ ಕೂಡ ಅವಳ ಬಳಿಯಿರಲಿಲ್ಲ.ಮೊದಲು ಕೌನ್ಸಲಿಂಗ್ ನಡೆಸಿದ ಅಧಿಕಾರಿಗಳು, ಅವಳಲ್ಲಿದ್ದ ಮನೋವ್ಯಾಧಿ ದೂರ ಮಾಡಲು ಪ್ರಯತ್ನಿಸಿದರು. ಆರೋಗ್ಯ ಸುಧಾರಿಸಿದ ಬಳಿಕ ಸ್ವವಿವರ ಪಡೆಯಲು ಯತ್ನಿಸಿದರೂ ಸರಿಯಾಗಿ ಮಾಹಿತಿಯನ್ನೇ ನೀಡಲಿಲ್ಲ.

ಈ ವೇಳೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಬಿ.ನಾಗರಾಜ್ ಅವರು, ಮುತುವರ್ಜಿ ವಹಿಸಿ ಸಿಬ್ಬಂದಿಗಳೊಂದಿಗೆ ಪ್ರತ್ಯೇಕ ಫೇಸಬುಕ್ ಪೇಜ್ ಓಪನ್ ಮಾಡಿಸಿ, ಯುವತಿಯ ವಿವರಗಳನ್ನು ದಾಖಲಿಸಿದರು.ಯಾರಿಗಾದರೂ ಈ ಯುವತಿ ಕುರಿತು ಮಾಹಿತಿ ಇದ್ದರೇ ಸಂಪರ್ಕಿಸಿ ಎಂದರು.

2ತಿಂಗಳ ಬಳಿಕ ಫೇಸ್‌ಬುಕ್ ಪೇಜ್‌ನಲ್ಲಿ ಯುವತಿ ಫೋಟೋ ಗುರುತಿಸಿದ ಆಕೆಯ ಅಣ್ಣ ಪ್ರಸನ್ನ ಜೋಶಿ, ಅಧಿಕಾರಿಗಳನ್ನು ಸಂಪರ್ಕಿಸಿ ಅವಳು ನನ್ನ ತಂಗಿಯೆಂದು ಎಂದಿದ್ದಾನೆ.ಇದಕ್ಕೆ ಸಾಕ್ಷ್ಯಾಧಾರಗಳೇನು ಎಂದು ಕೂಲಕುಂಷವಾಗಿ ಪರಿಶೀಲಿಸಿದ ಅಧಿಕಾರಿಗಳು, ಅಣ್ಣನ ಬಳಿಯಿಂದ ಆಧಾರ್ ಕಾರ್ಡ್, ಪಾನ್ ಕಾರ್ಡ್ ಸೇರಿದಂತೆ ಇನ್ನಿತರರೆ ಮಾಹಿತಿ ಪಡೆದು ದೃಢೀಕರಣಗೊಂಡ ಬಳಿಕ ಅವರ ತಂಗಿಯನ್ನು ನೋಡಲು ಬಿಟ್ಟಿದ್ದಾರೆ.ಈ ವೇಳೆ ಯುವತಿಯು ಅಣ್ಣನನ್ನು ಗುರುತಿಸಿದ್ದಾಳೆ.

ಒಂದು ವೇಳೆ ಕರೊನಾ ಇಲ್ಲದಿರುತ್ತಿದ್ದರೆ ಯುವತಿ ನಮಗೆ ಸಿಗುತ್ತಿರಲಿಲ್ಲ.ಕರೊನಾದ ಮೂಲಕ ಯುವತಿ ಅವರ ಅಣ್ಣನ ತಲುಪುವಂತಾಯಿತು. ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರ ಸಮಯ ಪ್ರಜ್ಞೆಯಿಂದ ಯುವತಿಯನ್ನು ರಕ್ಷಿಸಿ, ಚಿಕಿತ್ಸೆ ನೀಡಿದೆವು ಎನ್ನುತ್ತಾರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಆರ್.ನಾಗರಾಜ್.