ಬೆಂಗಳೂರು: ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ತೆರಳಿರುವ, ತೆರಳುವ ಕನಸಿನಲ್ಲಿದ್ದ ಸಾವಿರಾರು ಭಾರತೀಯ ಪ್ರತಿಭೆಗಳಿಗೆ ಕರೊನಾ ಮಹಾಮಾರಿ ಸ್ವದೇಶಿ ಪ್ರೇಮ ಉಕ್ಕುವಂತೆ ಮಾಡಿದೆ. ಈಗಾಗಲೇ ವಿವಿಧ ದೇಶಗಳಲ್ಲಿ ಓದುತ್ತಿರುವ ಲಕ್ಷಾಂತರ ಭಾರತೀಯರು ಕರೊನಾ ಆರ್ಭಟಕ್ಕೆ ಬೆದರಿ ‘ನಮ್ಮೂರೇ ಮೇಲು’ ಎಂದು ಭಾರತಕ್ಕೆ ಮರಳುವ ಚಿಂತನೆಯಲ್ಲಿದ್ದರೆ, ವಿದೇಶಿ ವಿವಿಗಳು ನಡೆಸುವ ಪ್ರವೇಶ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ವಿದೇಶ ಪ್ರಯಾಣದ ಸಿದ್ಧತೆಯಲ್ಲಿದ್ದವರು ಕೂಡ ‘ಇಲ್ಲಿರುವುದೇ ಸೇಫ್’ ಎಂಬ ನಿರ್ಧಾರ ಕೈಗೊಂಡಿದ್ದಾರೆ.
ಭಾರತವೇ ಸೇಫ್!: ಹೆಚ್ಚಿನ ಭಾರತೀಯರು ಉನ್ನತ ಶಿಕ್ಷಣಕ್ಕಾಗಿ ಅಮೆರಿಕ, ಯುರೋಪ್, ಕೆನಡಾ, ಇಂಗ್ಲೆಡ್ಗಳಿಗೆ ತೆರಳುತ್ತಿದ್ದರು. ಅಲ್ಲಿನ ವಿವಿಗಳು ಸಹ ಭಾರತದ ವಿದ್ಯಾರ್ಥಿಗಳನ್ನು ಆಕರ್ಷಿಸಲು ಆಕರ್ಷಕ ವಿದ್ಯಾರ್ಥಿ ವೇತನ ಪ್ಯಾಕೇಜ್ ನೀಡುತ್ತಿದ್ದವು. ಆದರೆ ಇದೀಗ ವಿದೇಶಕ್ಕೆ ಹೋಗಲು ಅರ್ಹತೆ ಪಡೆದಿದ್ದ ಹಲವರು, ಹೋಗಬೇಕಾ ಅಥವಾ ಬೇಡವಾ ಎಂಬ ಗೊಂದಲಕ್ಕೆ ಸಿಲುಕಿದ್ದಾರೆ. ಇನ್ನೂ ಕೆಲವರು ವಿದೇಶಕ್ಕಿಂತ ಭಾರತವೇ ಸುರಕ್ಷಿತವೆಂದು ಇಲ್ಲೇ ವ್ಯಾಸಂಗ ಮುಂದುವರಿಸಲು ತೀರ್ವನಿಸಿದ್ದಾರೆ.
ವಿದೇಶಿ ಮೋಹಕ್ಕೆ ಕಾರಣ?
ಸಾಕು ಸಹವಾಸ ಅಮೆರಿಕ ಹಾಗೂ ಯುರೋಪಿನ ದೇಶಗಳಲ್ಲಿ ಕರೊನಾ ಉಲ್ಬಣಗೊಂಡು ಸಾವಿರಾರು ಜನ ಸಾಯುತ್ತಿರುವ ಬೆನ್ನಲ್ಲೇ ಆಯಾ ದೇಶಗಳಲ್ಲಿರುವ ಭಾರತೀಯ ವಿದ್ಯಾರ್ಥಿಗಳು ದೇಶಕ್ಕೆ ಮರಳಲು ತುದಿಗಾಲಲ್ಲಿ ನಿಂತಿದ್ದಾರೆ. ಸದ್ಯದ ಮಟ್ಟಿಗೆ ವಿದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಕರೊನಾ ಹರಡಿರುವ ಪ್ರಮಾಣ ಕಡಿಮೆ. ಅಲ್ಲದೆ ಶಿಕ್ಷಣ ಮತ್ತು ವಸತಿ ವೆಚ್ಚ ಕೂಡ ಕಡಿಮೆ ಎಂಬ ಲೆಕ್ಕಾಚಾರ ನಡೆದಿದೆ. ಇನ್ನೊಂದೆಡೆ ಭಾರತದಲ್ಲಿ ಅಪಾರ ಸಂಖ್ಯೆಯಲ್ಲಿ ವಿದೇಶಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ವ್ಯಾಸಂಗ ಮಾಡುತ್ತಿದ್ದು, ಅವರು ತವರಿಗೆ ಮರಳುವ ಬದಲು ಭಾರತದಲ್ಲಿರುವುದೇ ಸುರಕ್ಷಿತ ಎನ್ನುತ್ತಿದ್ದಾರೆ.
ನಾನು ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದೇನೆ. ಉನ್ನತ ವ್ಯಾಸಂಗವನ್ನು ವಿದೇಶದಲ್ಲಿ ಮಾಡಬೇಕೆಂಬ ಯೋಜನೆ ಹೊಂದಿದ್ದೆ. ಇಂದಿನ ಪರಿಸ್ಥಿತಿ ನೋಡಿದರೆ ನಮ್ಮ ದೇಶವೇ ಸುರಕ್ಷಿತ ಎನಿಸುತ್ತಿದೆ. | ರಾಹುಲ್ ಎಂ. ಬೋಗಸೆ ಇಂಜಿನಿಯರಿಂಗ್ ವಿದ್ಯಾರ್ಥಿ
7.53 ಲಕ್ಷ ವಿದ್ಯಾರ್ಥಿಗಳು
ಕೇಂದ್ರ ವಿದೇಶಾಂಗ ಸಚಿವಾಲಯದ ಪ್ರಕಾರ 7,53,000 ಭಾರತೀಯರು ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇದರಲ್ಲಿ ಶೇ.72 ವಿದ್ಯಾರ್ಥಿಗಳು ಅಮೆರಿಕ, ಕೆನಡಾ, ಅಸ್ಟ್ರೇಲಿಯಾ, ಸೌದಿ, ಯುಎಇ ರಾಷ್ಟ್ರಗಳಲ್ಲಿದ್ದಾರೆ.
ನಡೆಯದ ಫೇರ್
ವಿದೇಶಿ ವಿವಿಗಳು ಪ್ರಮುಖ ನಗರಗಳಲ್ಲಿ ಪ್ರತೀ ವರ್ಷ ‘ಎಜುಕೇಷನ್ ಫೇರ್’ ಅಯೋಜಿಸಿ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಉನ್ನತ ಶಿಕ್ಷಣಕ್ಕೆ ದೊರಕುವ ಸೌಲಭ್ಯಗಳ ಬಗ್ಗೆ ಆಕರ್ಷಣೆ ಒಡ್ಡುತ್ತಿ ದ್ದವು. ಆದರೆ, ಈ ವರ್ಷ ಇಂತಹ ಮೇಳ ನಡೆದಿಲ್ಲ.
46 ಸಾವಿರ ವಿದೇಶಿಯರು
ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ(ಎಂಎಚ್ಆರ್ಡಿ) ನಡೆಸುವ ಅಖಿಲ ಭಾರತೀಯ ಉನ್ನತ ಶಿಕ್ಷಣ ಸಮೀಕ್ಷಾ ವರದಿಯ ಪ್ರಕಾರ ಭಾರತದ ವಿವಿಧ ವಿಶ್ವವಿದ್ಯಾಲಯಗಳಲ್ಲಿ 46,144 ವಿದೇಶಿಗರು ವ್ಯಾಸಂಗ ಮಾಡುತ್ತಿದ್ದಾರೆ.
| ದೇವರಾಜ್ ಎಲ್