ಸುಮಾರು ಎರಡು ವರ್ಷಕ್ಕಿಂತಲೂ ಹೆಚ್ಚು ಕಾಲದಿಂದ ಜಗತ್ತನ್ನು ಬಾಧಿಸುತ್ತಿರುವ ಕರೊನಾ ಮಹಾಮಾರಿ ಅಂತೂ ಈಗ ಸ್ವಲ್ಪ ತಹಬಂದಿಗೆ ಬಂದಿರುವಂತೆ ಅನಿಸುತ್ತಿದೆಯಾದರೂ ಅದು ಸೃಷ್ಟಿಸಿರುವ ಸಂಕಟಗಳು-ಸಮಸ್ಯೆಗಳು ಮನುಕುಲವನ್ನು ಬೇಗನೆ ಬಿಟ್ಟುಹೋಗುವುದಿಲ್ಲ ಎಂಬುದಂತೂ ಪಕ್ಕಾ. ಜನಜೀವನದ ಬಹುತೇಕ ಎಲ್ಲ ರಂಗಗಳ ಮೇಲೆ ಕರೊನಾ ಕರಿನೆರಳು ಬಿದ್ದಿದೆ. ಈಗ ಸ್ವಲ್ಪ ಚೇತರಿಕೆ ಕಂಡುಬರುತ್ತಿದೆಯಾದರೂ ಕೋವಿಡ್ಪೂರ್ವ ಸ್ಥಿತಿಗೆ ತಲುಪಲು ಸವೆಸಬೇಕಾದ ದಾರಿ ಬಹಳ ದೂರವಿದೆ. ಅದರಲ್ಲೂ, ಕರೊನಾದಿಂದಾಗಿ ಮಕ್ಕಳು ಅನುಭವಿಸಿರುವ- ಅನುಭವಿಸುತ್ತಿರುವ ವ್ಯಥೆ-ಕಥೆಗಳು ಮನಕರಗಿಸುವಂತಿವೆ.
2020ರ ಮಾರ್ಚ್ ನಿಂದ 2021ರ ಅಕ್ಟೋಬರ್ ಕಾಲಘಟ್ಟದಲ್ಲಿ, ಕರೊನಾ ಮೊದಲನೆಯ ಅಲೆ ಸಂದರ್ಭದಲ್ಲಿ ಭಾರತದಲ್ಲಿ 19.2 ಲಕ್ಷ ಮಕ್ಕಳು ತಂದೆ ಅಥವಾ ತಾಯಿಯನ್ನು ಕಳೆದುಕೊಂಡಿದ್ದಾರೆ ಎಂದು ಲ್ಯಾನ್ಸೆಟ್ ನಿಯತಕಾಲಿಕದ ವರದಿ ಹೇಳಿದೆ. ಇಪ್ಪತ್ತು ದೇಶಗಳಲ್ಲಿ ಈ ಅಧ್ಯಯನ ನಡೆಸಿದ್ದು, ಭಾರತದಲ್ಲಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬಾಧಿತರಾಗಿದ್ದಾರೆ; ಒಟ್ಟಾರೆಯಾಗಿ 52 ಲಕ್ಷ ಮಕ್ಕಳು ಪಾಲಕರನ್ನು ಕಳೆದುಕೊಂಡಿದ್ದಾರೆ ಎಂದು ವರದಿ ಬೊಟ್ಟುಮಾಡಿದೆ. ಆದರೆ ಭಾರತದಲ್ಲಿ ಈ ಕುರಿತ ನಿಖರ ಅಂಕಿಸಂಖ್ಯೆಗಳಲ್ಲಿ ಗೊಂದಲವಿದೆ. ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯದಲ್ಲಿ 2022ರ ಫೆಬ್ರವರಿ 5ರ ಹೊತ್ತಿಗೆ, ಕೋವಿಡ್ನಿಂದಾಗಿ ಪಾಲಕರನ್ನು ಕಳೆದುಕೊಂಡ 3,890 ಮಕ್ಕಳ ನೋಂದಣಿ ಆಗಿದೆ ಎಂದು ವರದಿಗಳು ಹೇಳುತ್ತವೆ.
ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗದ ವರದಿ ಪ್ರಕಾರ, 2020ರ ಏಪ್ರಿಲ್ನಿಂದ 2021ರ ಜೂನ್ವರೆಗೆ, ಪಾಲಕರನ್ನು ಕಳೆದುಕೊಂಡ 3,661 ಮಕ್ಕಳ ಮಾಹಿತಿ ಲಭಿಸಿದೆ. ಕೋವಿಡ್ನಿಂದಾಗಿ ಮೃತರಾದ ಅನೇಕ ಪ್ರಕರಣಗಳಲ್ಲಿ, ಸಾವಿನ ಕಾರಣದ ಬಗ್ಗೆ ಗೊಂದಲಗಳಿವೆ. ಹೀಗಾಗಿ ನಿಖರ ಅಂಕಿಸಂಖ್ಯೆ ಸ್ವಲ್ಪ ಕಷ್ಟವೇ. ಹೀಗಿದ್ದರೂ ಈ ಸಂಖ್ಯೆ ದೊಡ್ಡ ಪ್ರಮಾಣದಲ್ಲಿದೆ ಎಂಬುದಂತೂ ನಿಜ. ಸಂತ್ರಸ್ತರಿಗೆ ಪರಿಹಾರದ ವಿಷಯದಲ್ಲಿ ಉದಾರವಾಗಿರುವಂತೆ ಸುಪ್ರೀಂ ಕೋರ್ಟ್ ಕೂಡ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ಇನ್ನು, ಕೊವಿಡ್ನಿಂದಾಗಿ ಎರಡೂ ಪಾಲಕರನ್ನು ಅಥವಾ ಒಬ್ಬ ಪಾಲಕರನ್ನು ಕಳೆದುಕೊಂಡ ಮಕ್ಕಳ ನೆರವಿಗಾಗಿ, ಶಿಕ್ಷಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿವಿಧ ಯೋಜನೆಗಳನ್ನು ರೂಪಿಸಿ ಜಾರಿಗೆ ತಂದಿರುವುದು ಸ್ವಲ್ಪ ಸಮಾಧಾನಕರ. ಇದು ಸರ್ಕಾರಗಳ ಮಾನವೀಯ ಕರ್ತವ್ಯವೂ ಹೌದು. ಆದರೆ ಈ ಯೋಜನೆಗಳು ಅರ್ಹ ಮಕ್ಕಳನ್ನು ಸರಿಯಾಗಿ ತಲುಪುವಂತೆ ನಿಗಾ ವಹಿಸಬೇಕಾದುದು ಕೂಡ ಬಹಳ ಮುಖ್ಯ. ಏಕೆಂದರೆ, ಇಂಥ ವಿಷಯದಲ್ಲಿಯೂ ಹಣ ಹೊಡೆಯುವ ಮನಸ್ಥಿತಿಯವರಿರುತ್ತಾರೆ. ಅಲ್ಲದೆ, ಮಕ್ಕಳ ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಂಡು ಅವರನ್ನು ಕಳ್ಳಸಾಗಣೆ ಮಾಡುವ ಅಥವಾ ಅಕ್ರಮ ಚಟುವಟಿಕೆಗಳಿಗೆ ತಳ್ಳುವ ಸಾಧ್ಯತೆಗಳೂ ಇಲ್ಲದಿಲ್ಲ. ಈ ಮಕ್ಕಳು ಸುರಕ್ಷಿತ ವಾತಾವರಣದಲ್ಲಿ ಇರುವಂತೆ ನೋಡಿಕೊಳ್ಳಬೇಕಾದುದು ಮತ್ತು ಅವರಿಗೆ ಕಾಲಕಾಲಕ್ಕೆ ಅಗತ್ಯ ಶಿಕ್ಷಣ ಮತ್ತಿತರ ಸವಲತ್ತುಗಳು ದೊರೆಯುವಂತೆ ಕಾಳಜಿ ವಹಿಸಬೇಕಾದ್ದು ಸರ್ಕಾರ ಮತ್ತು ಸಮಾಜಗಳ ಕರ್ತವ್ಯ ಮತ್ತು ಹೊಣೆಗಾರಿಕೆ ಎಂಬುದನ್ನು ಮರೆಯುವಂತಿಲ್ಲ.