ಬೆಳಗಾವಿ: ಕರೊನಾ ಮಹಾಮಾರಿಯ ಕಾಮೋಡ ಮಂಗಳ ಕಾರ್ಯಗಳ ಮೇಲೂ ಕವಿದಿದೆ. ಏಪ್ರಿಲ್, ಮೇನಲ್ಲಿ ನಿಗದಿಯಾಗಿದ್ದ ಶೇ.45ಕ್ಕೂ ಹೆಚ್ಚು ವಿವಾಹಗಳು ಮುಂದೂಡಲ್ಪಟ್ಟಿವೆ ಅಥವಾ ರದ್ದಾಗಿವೆ. ಮದುವೆ ನಿಶ್ಚಯ ಮಾಡಿಕೊಂಡು ಕಲ್ಯಾಣಮಂಟಪದ ಹುಡುಕಾಟದಲ್ಲಿದ್ದವರೂ ಕೂಡ ಕರೊನಾ ಸೋಂಕು ಕಾಣಿಸಿಕೊಂಡ ಬಳಿಕ ತಮ್ಮ ನಿರ್ಧಾರಕ್ಕೆ ಬ್ರೇಕ್ ಹಾಕಿದ್ದಾರೆ. ಮಾರ್ಚ್, ಏಪ್ರಿಲ್ ಹಾಗೂ ಮೇನಲ್ಲಿ ಹೆಚ್ಚಿನ ವಿವಾಹ ಮುಹೂರ್ತಗಳಿರುವ ಕಾರಣ ಪ್ರತೀ ವರ್ಷ ಈ ಅವಧಿ ವಿವಾಹ ಋತು ಎಂದೇ ಪ್ರಸಿದ್ಧಿ. ಆದರೆ ಈ ವರ್ಷ ಜನರು ಕರೊನಾ ಕಾರಣಕ್ಕೆ ಮುಹೂರ್ತ ನೋಡುವುದಕ್ಕೂ ಹಿಂಜರಿಯುವಂತಾಗಿದೆ.
ಸ್ಟಾರ್ಗಳಿಗೂ ಆತಂಕ: ಟಾಲಿವುಡ್ ನಟ ನಿತಿನ್ ಏ.16ರಂದು ನಿಗದಿಯಾಗಿದ್ದ ಮದುವೆಯನ್ನು ಕರೊನಾ ಭಯದಿಂದ ಮುಂದೂಡಿದ್ದಾರೆ. ತಮಿಳು ನಟ ವಿಷ್ಣು ವಿಶಾಲ್ , ಬಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ ವಿವಾಹ ಕೂಡ ಮುಂದೂಡಿಕೆ ಆಗುವ ಸಾಧ್ಯತೆ ಇದೆ. ಏ.17ರಂದು ನಿಗದಿಯಾಗಿರುವ ಕನ್ನಡ ನಟ ನಿಖಿಲ್ ಕುಮಾರಸ್ವಾಮಿ ಮದುವೆ ಕೂಡ ಸರಳವಾಗಿ ನಡೆಯುವ ಸಾಧ್ಯತೆ ಇದೆ.
ವೆಡ್ವಿುಗುಡ್.ಕಾಮ್ ಸಮೀಕ್ಷೆ
ವಿವಾಹ ಯೋಜನಾ ವೆಬ್ಸೈಟ್ ವೆಡ್ವಿುಗುಡ್.ಕಾಮ್ ಕಳೆದ ವಾರ ಸಮೀಕ್ಷೆ ನಡೆಸಿದಾಗ 2,500 ಜೋಡಿಗಳ ಅಪ್ಲಿಕೇಶನ್ ನೋಂದಣಿಯಾಗಿತ್ತು. ಇದರ ಆಧಾರದಲ್ಲಿ ಸಮೀಕ್ಷೆ ನಡೆಸಿದಾಗ ಶೇ. 45 ಮದುವೆಗಳು ಮುಂದೂಡಿಕೆ ಅಥವಾ ರದ್ದಾಗಿರುವುದು ಖಚಿತಪಟ್ಟಿದೆ. ಶೇ.55 ಮದುವೆ ನಡೆಸುವ ಹಾಗೂ ನಿರ್ಧಾರ ತೆಗೆದುಕೊಳ್ಳುವ ಹಂತದಲ್ಲಿದ್ದಾರೆ. ದೆಹಲಿಯಲ್ಲಿ ಶೇ. 62, ಮುಂಬೈ ಶೇ. 45, ಬೆಂಗಳೂರು ಶೇ. 49, ಚೆನ್ನೈನಲ್ಲಿ ಶೇ. 38 ಮದುವೆಗಳು ಮುಂದೂಡಲ್ಪಟ್ಟಿವೆ. 2019ರ ಏಪ್ರಿಲ್ನಿಂದ ಜೂನ್ವರೆಗೆ ದೇಶದಲ್ಲಿ 25 ಲಕ್ಷಕ್ಕೂ ಅಧಿಕ ಮದುವೆ ನಡೆದಿದ್ದವು. ಆದರೆ, ಈ ವರ್ಷ ಕರೊನಾದಿಂದಾಗಿ 10 ಲಕ್ಷಕ್ಕೂ ಅಧಿಕ ವಿವಾಹಗಳು ರದ್ದು, ಅಥವಾ ಮುಂದೂಡಿಕೆ ಆಗಿವೆ.
ಸಣ್ಣ ನಗರ, ಹಳ್ಳಿಗಳಲ್ಲೇ ಹೆಚ್ಚು
ದೇಶಾದ್ಯಂತ ಜನತಾ ಕರ್ಫ್ಯೂ ಜಾರಿಯಲ್ಲಿರುವುದರಿಂದ ಹಾಗೂ ಲಾಕ್ಡೌನ್ ಮುಗಿದ ಮೇಲೂ ಕರೊನಾ ಸೋಂಕು ತಗುಲಬಹುದೆಂಬ ಆತಂಕದಿಂದ ಮದುವೆಗಳು ಮುಂದೂಡಿಕೆಯಾಗುತ್ತಿವೆ. ದೊಡ್ಡ ಮಹಾನಗರಗಳಿಗಿಂತ ಸಣ್ಣ ನಗರ, ಪಟ್ಟಣಗಳಲ್ಲಿ ಶೇ. 65 ಜನ ಮದುವೆ ಮುಂದೂಡಿದ್ದಾರೆ ಎಂದು ತಿಳಿದು ಬಂದಿದೆ.
ಮಾರ್ಚ್ನಲ್ಲಿ ನಾಲ್ಕು ಮದುವೆ ರದ್ದಾಗಿವೆ. ಏಪ್ರಿಲ್ನಲ್ಲಿ 18 ಮದುವೆ ಬುಕಿಂಗ್ ಆಗಿತ್ತು. ಬುಕಿಂಗ್ ರದ್ದು ಮಾಡಿದವರಿಗೆ ಹಾಗೂ ರದ್ದು ಮಾಡುವವರಿಗೆ ಮುಂಗಡ ಹಣ ಹಿಂದಿರುಗಿಸಲಿದ್ದೇವೆ. | ಶಿವಾಜಿ ಹಂಗಿರಕರ್, ಅಧ್ಯಕ್ಷರು, ಮರಾಠ ಮಂದಿರ ಬೆಳಗಾವಿ ಕರೊನಾ ಕಾರಣಕ್ಕಾಗಿ ಏ. 16ರಂದು ನಿಗದಿಯಾಗಿದ್ದ ನನ್ನ ಮದುವೆ ಮುಂದೂಡಿದ್ದೇನೆ. | ದರ್ಶನ ಹನುಮಣ್ಣವರ ಬೆಳಗಾವಿ
ಧರ್ಮರಾಜ ಪಾಟೀಲ