ನ್ಯೂಸ್

ಮಾವಿನ ಹಣ್ಣಿನಿಂದ ಕರೊನಾ ಬರೋದಿಲ್ಲ; ನಾರಾಯಣಗೌಡ

ಬೆಂಗಳೂರು: ಮಾವಿನ ಹಣ್ಣಿನಿಂದ ಕರೊನಾ ಬರೋದಿಲ್ಲ. ಈ ಹಣ್ಣನ್ನು ತಿಂದರೆ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತೆ. ನಿನ್ನೆ(ಬುಧವಾರ) ಮಂಡ್ಯದಲ್ಲಿ ನಾನು ಆಡಿದ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ಸ್ಪಷ್ಟನೆ ನೀಡಿದ್ದಾರೆ.

ಮರುವನಹಳ್ಳಿಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಲು ಮಾವಿನಹಣ್ಣು ಕಾರಣ ಎಂದು ಹೇಳುವ ಮೂಲಕ ಸಚಿವರು ಚರ್ಚೆ ಗ್ರಾಸವಾಗಿದ್ದರು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಚಿವರು, ಕೆ.ಆರ್​.ಪೇಟೆ ತಾಲೂಕಿನ ಮರುವನಹಳ್ಳಿಯನ್ನು ಸೀಲ್ಡೌನ್ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಮಹಿಳಾ ಸ್ವಸಹಾಯ ಸಂಘದ ಸುಮಾರು 14 ಸದಸ್ಯರು ಮೀಟಿಂಗ್ ನಡೆಸಿದ್ದರು. ಅಲ್ಲದೆ, ಮಾವಿನ ಹಣ್ಣನ್ನು ಕತ್ತರಿಸಿ ಹಂಚಿಕೊಂಡು ತಿಂದಿದ್ದರು. ಇದರಿಂದಾಗಿ ಅವರೆಲ್ಲರಿಗೂ ಪರಸ್ಪರ ಸೋಂಕು ಹರಡಿರಬಹುದು ಎಂದು ಕ್ವಾರಂಟೈನ್ ಮಾಡಿದ್ದೇವೆ. ಹೀಗೆಂದು ಹೇಳಿಕೆ ನೀಡಿದ್ದೆ ಅಷ್ಟೆ. ಮಾವಿನ ಹಣ್ಣಿನಿಂದ ಕರೊನಾ ಬರಲ್ಲ ಎಂದಿದ್ದಾರೆ.