ನ್ಯೂಸ್

ದೇಶದಲ್ಲಿ ದೈನಿಕ ಕೇಸ್ ಏರಿಕೆ: ಭಾನುವಾರಕ್ಕಿಂತ ಶೇ. 22 ಅಧಿಕ; ಮುಂಬೈನಲ್ಲಿ 1-9 ತರಗತಿ ಸ್ಥಗಿತ

ನವದೆಹಲಿ: ಕರೊನಾ ಮಹಾಮಾರಿಯ ಮೂರನೇ ಅಲೆಯ ಹೊಸ್ತಿಲಲ್ಲಿರುವ ದೇಶದಲ್ಲಿ ಸೋಂಕಿನ ಪ್ರಕರಣ ನಾಗಾಲೋಟದಲ್ಲಿ ಮುಂದುವರಿದಿದೆ. ಸೋಮವಾರ ಬೆಳಿಗ್ಗೆ ವರೆಗಿನ 24 ತಾಸಿನ ಅವಧಿಯಲ್ಲಿ 33,750 ಕೇಸ್​ಗಳು ದೃಢಪಟ್ಟಿವೆ. ಇದು ಭಾನುವಾರಕ್ಕೆ ಹೋಲಿಸಿದರೆ ಶೇಕಡ 22.5 ಏರಿಕೆಯಾಗಿದೆ. ಇದರೊಂದಿಗೆ ಸೋಂಕಿತರ ಒಟ್ಟು ಸಂಖ್ಯೆ 3,49,22,882ಕ್ಕೆ ಏರಿದೆ. ಈ ಅವಧಿಯಲ್ಲಿ 123 ಜನರು ಮೃತಪಟ್ಟಿದ್ದು ಸಾವಿನ ಸಂಖ್ಯೆ 4,81,893ಕ್ಕೆ ತಲುಪಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1,45,582 ಆಗಿದೆ.

ಎರಡೇ ದಿನದಲ್ಲಿ ಶೇ. 84 ಕೇಸ್: ದೆಹಲಿಯಲ್ಲಿ 4,100 ದೈನಿಕ ಪ್ರಕರಣಗಳು ಪತ್ತೆಯಾಗಿದೆ. ಎರಡು ದಿನದಲ್ಲಿ ಒಮಿಕ್ರಾನ್ ಕೇಸ್ ಶೇ. 84 ಹೆಚ್ಚಳ ಆಗಿದೆ. ಮುಂಬೈನಲ್ಲಿ ದೈನಿಕ ಕೇಸ್ 8,082 ಸೇರಿ ಮಹಾರಾಷ್ಟ್ರದಲ್ಲಿ 12,160 ತಲುಪಿದ್ದು, ಇದರಲ್ಲಿ ಶೇ. 90ರಷ್ಟು ಪ್ರಕರಣಗಳು ಲಕ್ಷಣ ರಹಿತ ಸೋಂಕು ಆಗಿದೆ. ಈ ಮಧ್ಯೆ, ಮುಂಬೈ ಮಹಾನಗರದಲ್ಲಿ 1ರಿಂದ 9 ಮತ್ತು 11ನೇ ತರಗತಿಗಳನ್ನು ಜ.31ರವರೆಗೆ ಸ್ಥಗಿತಗೊಳಿಸಲಾಗಿದೆ. ಆನ್​ಲೈನ್ ಶಾಲೆ ನಡೆಸಬಹುದಾಗಿದೆ. 10 ಮತ್ತು 12ನೇ ತರಗತಿಗಳನ್ನು ಭೌತಿಕವಾಗಿ ನಡೆಸಲು ಅವಕಾಶ ಇದೆ ಎಂದು ಬೃಹನ್ಮುಂಬೈ ಪಾಲಿಕೆ ತಿಳಿಸಿದೆ. 1

1,700 ಒಮಿಕ್ರಾನ್ ಕೇಸ್: ಹೊಸ ರೂಪಾಂತರಿ ಒಮಿಕ್ರಾನ್​ನ ಒಟ್ಟು 1,700 ಪ್ರಕರಣಗಳು 23 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಪತ್ತೆಯಾಗಿವೆ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು 510 ಒಮಿಕ್ರಾನ್ ಸೋಂಕಿತರಿದ್ದಾರೆ. 351ರೊಂದಿಗೆ ದೆಹಲಿ ಎರಡನೇ ಸ್ಥಾನದಲ್ಲಿದೆ. ಕೇರಳ (156), ಗುಜರಾತ್ (136), ತಮಿಳುನಾಡು (121) ಮತ್ತು ರಾಜಸ್ಥಾನ (120) ಹೆಚ್ಚು ಒಮಿಕ್ರಾನ್ ಕೇಸ್ ಹೊಂದಿರುವ ರಾಜ್ಯಗಳಾಗಿವೆ.

ಚುನಾವಣಾ ರ‌್ಯಾಲಿಗಳಿಂದ ಸೋಂಕು ಉಲ್ಬಣ: ಏಪ್ರಿಲ್ ಕೊನೆಯೊಳಗೆ ಕರೊನಾ 3ನೇ ಅಲೆ ಅಂತ್ಯವಾಗಲಿದೆ. ಆದರೆ, ಚುನಾವಣಾ ರ್ಯಾಲಿಗಳಿಂದಾಗಿ ಸೋಂಕು ಉಲ್ಬಣಗೊಳ್ಳಬಹುದು ಎಂದು ಕಾನ್ಪುರದ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಪ್ರೊಫೆಸರ್ ಮಹೀಂದ್ರ ಅಗರ್​ವಾಲ್ ಹೇಳಿದ್ದಾರೆ. ಪಂಚ ರಾಜ್ಯಗಳಿಗೆ ಚುನಾವಣೆ ನಡೆಯಲಿದ್ದು ಆ ವೇಳೆ ನಡೆಯುವ ರ್ಯಾಲಿಗಳು ಸೂಪರ್ ಸ್ಪ್ರೆಡರ್ ಆಗಬಹುದು ಎಂದು ವಿಜ್ಞಾನಿ ಎಚ್ಚರಿಸಿದ್ದಾರೆ. ರ್ಯಾಲಿಗಳಲ್ಲಿ ಭಾಗವಹಿಸುವ ಬಹುತೇಕ ಜನರು ನಿಯಂತ್ರಣ ಮಾರ್ಗಸೂಚಿಗಳನ್ನು ಪಾಲಿಸದೇ ಇರುವುದರಿಂದ ಸೋಂಕು ದೊಡ್ಡ ಪ್ರಮಾಣದಲ್ಲಿ ಹಬ್ಬುವ ಅಪಾಯವಿದೆ ಎಂದು ಅಗರ್​ವಾಲ್ ಎಚ್ಚರಿಸಿದ್ದಾರೆ.

ಕೆಲವು ದೇಶಗಳಲ್ಲಿ 4 ಡೋಸ್ ಲಸಿಕೆಯನ್ನೂ ಹಾಕಲಾಗು ತ್ತಿದೆ. ಹೀಗಾಗಿ, ಬೂಸ್ಟರ್ ಡೋಸ್ ವಿಚಾರದಲ್ಲಿ ಇನ್ನೂ ವೈಜ್ಞಾನಿಕ ಸ್ಪಷ್ಟತೆ ಸಿಗಬೇಕಿದೆ. ಭಾರತದಲ್ಲಿ ಒಮಿಕ್ರಾನ್ ಸೋಂಕು ಹೆಚ್ಚಾಗುವುದು ಮೂರನೇ ಅಲೆ ಆರಂಭದ ದ್ಯೋತಕವಾಗಿದೆ. | ಎನ್.ಕೆ. ಅರೋರಾ ರಾಷ್ಟ್ರೀಯ ಲಸಿಕೆ ಕುರಿತ ತಾಂತ್ರಿಕ ಸಲಹಾ ಗುಂಪಿನ ಮುಖ್ಯಸ್ಥ

ಸುಳ್ಳು ಸುದ್ದಿ ಎಂದ ಕೇಂದ್ರ: ಭಾರತದಲ್ಲಿ ಅವಧಿ ಮುಗಿದ ಕೋವಿಡ್ ಲಸಿಕೆಗಳನ್ನು ಬಳಸಲಾಗುತ್ತಿದೆ ಎಂದು ಕೆಲವು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳು ಸುಳ್ಳು ಹಾಗೂ ಹಾದಿ ತಪ್ಪಿಸುವಂಥದ್ದು ಎಂದು ಕೇಂದ್ರ ಸರ್ಕಾರ ಸೋಮವಾರ ಹೇಳಿದೆ. ಸಂಪೂರ್ಣ ಮಾಹಿತಿ ಪಡೆಯದೆ ಪ್ರಕಟಿಸಿದ ವರದಿಗಳಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ. ಕೇಂದ್ರೀಯ ಔಷಧಿಗಳ ಮಾನಕ ನಿಯಂತ್ರಣ ಸಂಸ್ಥೆ 2021 ಅಕ್ಟೋಬರ್ 25ರಂದು ಕೊವ್ಯಾಕ್ಸಿನ್ ಲಸಿಕೆಯ ಬಳಕೆ ಅವಧಿಯನ್ನು (ಶೆಲ್ಪ್ ಲೈಫ್) 9 ತಿಂಗಳಿಂದ 12 ತಿಂಗಳಿಗೆ ವಿಸ್ತರಿಸಿತ್ತು ಎಂದು ಸಚಿವಾಲಯ ವಿವರಿಸಿದೆ.

ಈ ವರ್ಷವೇ ಕೋವಿಡ್ ಅಂತ್ಯದ ವಿಶ್ವಾಸ: ಕೋವಿಡ್ ಮಹಾಮಾರಿಯನ್ನು 2022ರಲ್ಲೇ ಅಂತ್ಯಗೊಳಿಸಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ) ಮಹಾ ಕಾರ್ಯದರ್ಶಿ ಟೆಡ್ರೋಸ್ ಅಧಾನಂ ಘೇಬ್ರಿಯೆಸಸ್ ಆಶಾವಾದ ವ್ಯಕ್ತಪಡಿಸಿದ್ದಾರೆ. ‘ಅಸಮಾನತೆಯನ್ನು ಕೊನೆಗಾಣಿಸಿದರೆ ಕರೊನಾ ಮಹಾಮಾರಿಯನ್ನೂ ಅಂತ್ಯಗೊಳಿಸಿದಂತೆಯೇ ಸರಿ’ ಎಂದು ಘೇಬ್ರಿಯೆಸಸ್ ಅಭಿಪ್ರಾಯ ಪಟ್ಟಿದ್ದಾರೆ. ಸೋಂಕಿನ ಪ್ರಕರಣಗಳು ಏರುತ್ತಿರುವುದರ ನಡುವೆಯೇ ಕೆಲವು ದೇಶಗಳ ಸಂಕುಚಿತ ರಾಷ್ಟ್ರೀಯವಾದ ಮತ್ತು ವ್ಯಾಕ್ಸಿನ್ ಅಕ್ರಮ ದಾಸ್ತಾನಿನಿಂದ ಸಮಾನತೆ ನಶಿಸಿದೆ. ಅಸಮಾನತೆ ಮುಂದುವರಿದಷ್ಟೂ ಹೆಚ್ಚು ಕಾಲ ವೈರಸ್ ರೂಪಾಂತರಿಗಳು ಸೃಷ್ಟಿಯಾಗುತ್ತಲೇ ಇರುತ್ತವೆ. ಆ ಪರಿಸ್ಥಿತಿಯನ್ನು ತಡೆಯಲೂ ಆಗುವುದಿಲ್ಲ ಅಥವಾ ಭವಿಷ್ಯ ಹೇಳಲೂ ಆಗುವುದಿಲ್ಲ ಎಂದು ಘೇಬ್ರಿಯೆಸಸ್ ಅಭಿಪ್ರಾಯ ಪಟ್ಟಿದ್ದಾರೆ.

  1. ಮುಂಬೈಯಿಂದ ಗೋವಾಕ್ಕೆ ಹೊರಟಿದ್ದ 2,000ಕ್ಕೂ ಹೆಚ್ಚು ಪ್ರಯಾಣಿಕರಿರುವ ಹಡಗಿನ 66 ಸಿಬ್ಬಂದಿಯಲ್ಲಿ ಕರೊನಾ ಸೋಂಕು ದೃಢಪಟ್ಟಿದ್ದು ನೌಕೆಯಲ್ಲೇ ಐಸೋಲೇಷನ್​ಗೆ ಒಳಪಡಿಸಲಾಗಿದೆ.

2. ಕರೊನಾ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಕೇಂದ್ರ ಸಿಬ್ಬಂದಿ ಸಚಿವಾಲಯ ಬಯೋಮೆಟ್ರಿಕ್ ಹಾಜರಾತಿಯನ್ನು ಜನವರಿ 31ರ ವರೆಗೆ ರದ್ದುಪಡಿಸಿದೆ.

ಪಂಚ ರಾಜ್ಯಗಳಲ್ಲಿ ಲಸಿಕೆ ವೇಗ ಹೆಚ್ಚಿಸಲು ಆಯೋಗ ಸೂಚನೆ: ಚುನಾವಣೆ ನಡೆಯಲಿರುವ ಐದು ರಾಜ್ಯಗಳಲ್ಲಿ ಲಸಿಕೆ ಅಭಿಯಾನವನ್ನು ತ್ವರಿತಗೊಳಿಸುವಂತೆ ಚುನಾವಣಾ ಆಯೋಗ ಸೂಚನೆ ನೀಡಿದೆ. ಮಣಿಪುರದಲ್ಲಿ ಲಸಿಕೆಯ ಮೊದಲ ಡೋಸ್ ನೀಡಿಕೆ ಪ್ರಮಾಣ ತುಂಬಾ ಕಡಿಮೆಯಿರುವುದಕ್ಕೆ ಆಯೋಗ ಕಳವಳ ವ್ಯಕ್ತಪಡಿಸಿದೆ. ವ್ಯಾಕ್ಸಿನ್ ಪ್ರಕ್ರಿಯೆಗೆ ವೇಗ ನೀಡುವಂತೆ ಪಂಚ ರಾಜ್ಯಗಳಿಗೆ ಬರೆದಿರುವ ಪತ್ರದಲ್ಲಿ ಸಲಹೆ ಮಾಡಿದೆ. ಚುನಾವಣಾ ಸಿದ್ಧತೆಗಳ ಪರಿಶೀಲನೆಗಾಗಿ ಆಯೋಗ ಕೆಲ ದಿನಗಳ ಹಿಂದೆ ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ, ಮಣಿಪುರ ಮತ್ತು ಗೋವಾ ರಾಜ್ಯಗಳಿಗೆ ಭೇಟಿ ನೀಡಿತ್ತು. ಈ ಐದೂ ರಾಜ್ಯಗಳ ಚುನಾವಣೆ ದಿನಾಂಕವನ್ನು ಆಯೋಗ ಇದೇ ತಿಂಗಳು ಪ್ರಕಟಿಸಲಿದೆ.