ಕರೊನಾ ಮಹಾಮಾರಿಯ ಎರಡು ಅಲೆಗಳಿಂದ ಸುಮಾರು 3.30 ಕೋಟಿ ಸೋಂಕಿತರು ಮತ್ತು 5,84,000 ಸಾವುಗಳನ್ನು ಅನುಭವಿಸಿದ ಅಮೆರಿಕ ಈಗ ನಿಧಾನವಾಗಿ ಚೇತರಿಸಿಕೊಳ್ಳುತ್ತಲಿದೆ. ಕೆಲವು ತಿಂಗಳುಗಳ ಹಿಂದೆ ಅಮೆರಿಕದಲ್ಲಿ ಲಸಿಕೆಗಾಗಿ ಜನ ಮೈಲುಗಟ್ಟಲೆ ಕ್ಯೂ ನಿಲ್ಲುತ್ತಿದ್ದರು. ಅಧ್ಯಕ್ಷ ಜೋ ಬೈಡೆನ್ ತಮ್ಮ ಅಧಿಕಾರದ ಮೊದಲ 100 ದಿನಗಳಲ್ಲಿ 10 ಕೋಟಿ ಜನರಿಗೆ ಲಸಿಕೆ ಹಾಕುವ ಅಭಿಯಾನ ಘೋಷಿಸಿ ಕಾರ್ಯರೂಪಕ್ಕೆ ತಂದರು. ಸ್ಟೇಡಿಯಂಗಳಲ್ಲಿ, ಹೈಸ್ಕೂಲುಗಳಲ್ಲಿ.. ಹೀಗೆ ಎಲ್ಲೆಂದರಲ್ಲಿ ವ್ಯಾಕ್ಸಿನ್ ಕ್ಯಾಂಪ್ಗಳನ್ನು ಆಯೋಜಿಸಲಾಯಿತು. ಅಮೆರಿಕದ ಸ್ವಾತಂತ್ರ್ಯೊತ್ಸವವಾದ ಜುಲೈ 4ರ ಒಳಗಾಗಿ ದೇಶದ ಶೇ.70 ಜನರಿಗೆ ಲಸಿಕೆ ಕೊಡುವ ಯೋಜನೆಯನ್ನು ಅಧ್ಯಕ್ಷ ಬೈಡೆನ್ ಹಾಕಿದ್ದಾರೆ. ಏಕೆಂದರೆ ಹರ್ಡ್ ಇಮ್ಯೂನಿಟಿ ಬರಲು ಕನಿಷ್ಠ ಶೇ.70 ರಿಂದ ಶೇ.80 ಜನರಿಗೆ ಲಸಿಕೆ ಹಾಕಿರಬೇಕು. ಆದರೆ ಇಲ್ಲಿಯವರೆಗೆ 11 ಕೋಟಿ (ಶೇ.35) ಜನರು ಮಾತ್ರ ಲಸಿಕೆ ಹಾಕಿಸಿಕೊಂಡಿದ್ದಾರೆ. ಈಗ ಲಸಿಕೆ ಎಲ್ಲ ಕಡೆಯೂ ಸುಲಭವಾಗಿ ಸಿಗುತ್ತಿದ್ದರೂ ಜನರು ಮುಂದೆ ಬರುತ್ತಿಲ್ಲ. ಅದರಲ್ಲೂ ಟ್ರಂಪ್ ಬೆಂಬಲಿಗರು ಲಸಿಕೆ ಹಾಕಿಸಿಕೊಳ್ಳಲು ತಯಾರಿಲ್ಲ. ಇದು ಸರ್ಕಾರಕ್ಕೆ ತಲೆನೋವಾಗಿದೆ. ಹನ್ನೆರಡು ವರ್ಷಕ್ಕೆ ಮೇಲ್ಪಟ್ಟ ಮಕ್ಕಳಿಗೆ ಫೈಜರ್ ಲಸಿಕೆಯನ್ನು ತುರ್ತು ಬಳಕೆಗಾಗಿ ಕಳೆದವಾರ ಅಧಿಕೖತವಾಗಿ ಅನುಮೋದನೆ ಕೊಡಲಾಯಿತು.
ಮಾಸ್ಕ್ ಕಡ್ಡಾಯ ತೆರವು: ಅಮೆರಿಕದ ಕೆಲವು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯವನ್ನು ತೆಗೆದುಹಾಕಲಾಗಿದೆ. ಹಾಗೆಯೇ ಸಾರ್ವಜನಿಕ ಸಮಾರಂಭಗಳ ಮೇಲಿನ ನಿಷೇಧವನ್ನೂ ತೆಗೆಯಲಾಗಿದೆ. ಆದರೂ ಕರೊನಾ ಮೂರನೇ ಅಲೆ ಅಪ್ಪಳಿಸಬಹುದೇ ಎಂಬ ಭಯ ಕಾಡುತ್ತಲಿದೆ. ಈ ಆತಂಕಕ್ಕೆ ಇನ್ನೊಂದು ಕಾರಣವೆಂದರೆ ಅಮೆರಿಕದ ಉಳಿದ ಶೇ.50 ಜನ ಲಸಿಕೆ ಹಾಕಿಸಿಕೊಳ್ಳಲು ನಿರಾಕರಿಸುತ್ತಿರುವುದು.
ಕತಾರ್ನಲ್ಲಿ ಎಲ್ಲರೂ ಸುರಕ್ಷಿತವಾಗಿದ್ದೇವೆ ಹಾಗೂ ಭರವಸೆಯಿಂದ ಇದ್ದೇವೆ. ಸುಮಾರು 30 ಲಕ್ಷ ಜನರಿರುವ ಈ ದೇಶದಲ್ಲಿ 7.50 ಲಕ್ಷ ಭಾರತೀಯರಿದ್ದೇವೆ. ಕಳೆದ ವರ್ಷ ಪ್ರತಿದಿನ 1500-1700ರವರೆಗೆ ಕರೊನಾ ಸೋಂಕು ಪ್ರಕರಣ ದಾಖಲಾಗುತ್ತಿತ್ತು. 2ನೇ ಅಲೆಯಲ್ಲೂ ಪ್ರತಿದಿನ 1500-1700ರವರೆಗೆ ಸೋಂಕು ಹಾಗೂ 8-9 ಜನರು ನಿಧನರಾಗುತ್ತಿದ್ದರು. ಈಗ ಸೋಂಕಿತರ ಸಂಖ್ಯೆ ಪ್ರತಿದಿನ 400ಕ್ಕೆ ಹಾಗೂ ಸಾವಿನ ಸಂಖ್ಯೆ 3-4ಕ್ಕೆ ಇಳಿದಿದೆ. ಸಮುದಾಯ ಕಾರ್ಯಕ್ರಮಗಳು ಸ್ಥಗಿತವಾಗಿವೆ, ಶೇ.100 ಲಸಿಕೆ ಪಡೆಯುವತ್ತ ಪ್ರಯತ್ನಗಳು ನಡೆಯುತ್ತಿವೆ. ಮೊದಲ ಅಲೆಯಲ್ಲಿ ಫೈಜರ್ ಲಸಿಕೆ ಮಾತ್ರ ಇತ್ತು. ಈಗ ಮಾಡೆರ್ನಾ ಲಸಿಕೆ ಸಹ ಲಭಿಸುತ್ತಿದೆ. ಶೇ.60-70 ಜನರಿಗೆ ಲಸಿಕೆ ಆಗಿದೆ. ಈಗ ಶಾಲೆ ಕಾಲೇಜುಗಳಿಗೆ ಈದ್ ರಜೆ ಇದೆ. ಒಟ್ಟು ನಾಲ್ಕು ಹಂತದಲ್ಲಿ ಲಾಕ್ಡೌನ್ ತೆರವಿಗೆ ಕತಾರ್ ಯೋಜನೆ ರೂಪಿಸಿದೆ. ಮೇ 28ರಿಂದ ಮೊದಲ ಹಂತ, ಜೂ. 18ರಿಂದ ಎರಡನೇ ಹಂತ, ಜು.9ರಿಂದ ಮೂರನೇ ಹಂತ ಹಾಗೂ ಜು.30ರಿಂದ ಅಂತಿಮ ಹಾಗೂ ನಾಲ್ಕನೇ ಹಂತದ ಲಾಕ್ಡೌನ್ ತೆರವಾಗುತ್ತದೆ. ಮಸೀದಿಗಳಲ್ಲಿ ದಿನನಿತ್ಯದ ಹಾಗೂ ಶುಕ್ರವಾರದ ಪ್ರಾರ್ಥನೆಗೆ ಅವಕಾಶವಿದೆ. ಮೊದಲ ಹಂತದ ತೆರವಿನಲ್ಲಿ ಮದುವೆ ಕಾರ್ಯಕ್ರಮಗಳಿಗೆ ಅವಕಾಶವಿಲ್ಲ, ಸಾರ್ವಜನಿಕ ಸಾರಿಗೆ ಶೇ.30 ಸೀಟಿಂಗ್ ಸಾಮರ್ಥ್ಯ, ಕ್ರೀಡಾಕೂಟಗಳಲ್ಲಿ ಪ್ರೇಕ್ಷಕರು ಲಸಿಕೆ ಪಡೆದಿರಬೇಕು ಹಾಗೂ ಸೀಟಿಂಗ್ನ ಶೇ.30 ಜನರು ಇರಬಹುದು. ಜಿಮ್ ಹೆಲ್ತ್ ಕ್ಲಬ್, ಸಿನಿಮಾ ಮಂದಿರಗಳಲ್ಲಿ ಶೇ.30 ಸೀಟಿಂಗ್ಗೆ, ಕಚೇರಿಯಲ್ಲಿ ಶೇ.50 ಸಿಬ್ಬಂದಿಗೆ ಅವಕಾಶವಿದೆ.
ಮೈಮರೆಯಬಾರದು: ಭಾರತದಲ್ಲಿ 2ನೇ ಅಲೆ ಬಗ್ಗೆ ಸ್ವಲ್ಪ ನಿರ್ಲಕ್ಷ್ಯ ಮಾಡಲಾಯಿತು ಎನ್ನಿಸುತ್ತಿದೆ. ಇಲ್ಲಿ ಯಾರನ್ನೂ ಟೀಕಿಸುವುದಲ್ಲ, ರಾಜಕೀಯ ರ್ಯಾಲಿಗಳೂ ಸೇರಿ ಅನೇಕ ತಪು್ಪಗಳನ್ನು ಮಾಡಲಾಯಿತು. ಭಾರತದಲ್ಲಿ ಎಲ್ಲರೂ ಸರ್ಕಾರದ ನಿಯಮಗಳನ್ನು ಪಾಲಿಸಿ ಕರೊನಾ ಸೋಂಕನ್ನು ಹೊಡೆದೋಡಿಸಬೇಕು ಎಂದು ಮನವಿ ಮಾಡುತ್ತೇವೆ.
ಬ್ರಿಟನ್ನಿನಲ್ಲಿ ಕರೊನಾ ಸೋಂಕು ಬಹುತೇಕ ನಿಯಂತ್ರಣಕ್ಕೆ ಬಂದಿದೆ. ಒಂದೊಂದು ಕಡೆ ಸಂಪೂರ್ಣ ನಿಯಂತ್ರಣದಲ್ಲಿದೆ. ಉದಾಹರಣೆಗೆ, ನಾನು ಕಾರ್ಯನಿರ್ವಹಿಸುವ ಡಾರೆಂಟ್ ವ್ಯಾಲಿ ಆಸ್ಪತ್ರೆಯಲ್ಲಿ, ಕರೊನಾ ಎರಡನೇ ಅಲೆ ಆರಂಭವಾದಾಗ 300 ಕರೊನಾ ಸೋಂಕಿತರಿದ್ದರು. ಈಗ ಕೇವಲ ಒಬ್ಬರಿದ್ದಾರೆ. ನಾನು ಕೋವಿಡ್ ಯೂನಿಟ್ನಲ್ಲಿದ್ದೆ. 40 ಹಾಸಿಗೆಯಿದ್ದ ಇಡೀ ಯೂನಿಟ್ಟನ್ನು ಬಂದ್ ಮಾಡಲಾಗಿದೆ. ಏಕೆಂದರೆ ಸೋಂಕಿತರೇ ಇಲ್ಲ. ಈ ಹಂತ ತಲುಪಲು ಸರ್ಕಾರ ಹಾಗೂ ಜನರು ಸಾಕಷ್ಟು ಶ್ರಮಿಸಿದ್ದಾರೆ. ಬ್ರಿಟನ್ನಿನಲ್ಲಿ ಸೋಂಕು ಹರಡುವ ಅಪಾಯವಿರುವ ನಿರ್ದಿಷ್ಟ ಗುಂಪನ್ನು ಗುರಿ ಮಾಡಿ ಲಸಿಕೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಇಲ್ಲಿನ ಶೇಕಡಾ 50 ಜನರು ಭಾರತದಿಂದಲೇ ಬಂದ ಕೋವಿಶೀಲ್ಡ್ ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ. ಫೈಜರ್ ತುಸು ಹೆಚ್ಚಿನ ಪ್ರಮಾಣದಲ್ಲಿದೆ. ಕರೊನಾ ಸೋಂಕು ತೀವ್ರವಾದಾಗ ಶಾಲೆಗಳನ್ನು ಬಂದ್ ಮಾಡಿದ್ದರು. ಈಗ ಎಲ್ಲ ಶಾಲೆಗಳೂ ಭೌತಿಕವಾಗಿ ತೆರೆದಿವೆ. ಮಕ್ಕಳಿಗೆ ಸೋಂಕಿನಿಂದ ಅಪಾಯವಿಲ್ಲವಾದರೂ ಅವರು ಸೋಂಕನ್ನು ಕೊಂಡೊಯ್ಯಬಲ್ಲರು. ಹಾಗಾಗಿ ಮನೆಗಳಲ್ಲಿ ವಯಸ್ಸಾದವರು ಚಿಕ್ಕ ಮಕ್ಕಳಿಂದ ದೂರವಿರುತ್ತಾರೆ. ಉದ್ಯಮ ವ್ಯಾಪಾರ ನಡೆದಿದೆ, ಸಣ್ಣ ಪ್ರಮಾಣದ ನಿರ್ಬಂಧಗಳಿವೆ. ಮಾಲ್, ಸೂಪರ್ ಸ್ಟೋರ್ಗಳಲ್ಲಿ ಜನರ ಪ್ರಮಾಣ ನಿಗದಿಪಡಿಸಲಾಗಿದೆ. ಮೇ 17ರಿಂದ ನಿರ್ಬಂಧ ಸಡಿಲಿಕೆಗೆ ಚಾಲನೆ ನೀಡಲಾಗಿದೆ. ಸಾರ್ವಜನಿಕವಾಗಿ ಸೇರಲು ಗರಿಷ್ಠ ಆರು ಸಂಖ್ಯೆಯ ಮಿತಿಯನ್ನು 30ಕ್ಕೆ ಹೆಚ್ಚಿಸಲಾಗಿದೆ. ಮದುವೆ, ರಿಸೆಪ್ಷನ್ನಲ್ಲಿ 30 ಜನರು ಭಾಗವಹಿಸಬಹುದು.
ಬ್ರೆಜಿಲ್ನಲ್ಲಿ ಕೋವಿಡ್ ಸೋಂಕು ಕೈಮೀರಿದ್ದು, ಅಧ್ಯಕ್ಷ ಜೈರ್ ಬೋಲ್ಸೊನಾರೊ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. 2019ರಲ್ಲಿ ಅಧಿಕಾರಕ್ಕೆ ಬಂದ ಬೋಲ್ಸನಾರೋ, ಲಾಕ್ಡೌನ್ ಘೋಷಿಸಿಲ್ಲ. ಅವೈಜ್ಞಾನಿಕ ರೀತಿಯಲ್ಲಿ ಕೋವಿಡ್ ಪರಿಸ್ಥಿತಿ ನಿರ್ವಹಿಸುತ್ತಿರುವ ಅವರ ವಿರುದ್ಧ ಸಂಸದೀಯ ತನಿಖೆಗೆ ಅಲ್ಲಿನ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಲಸಿಕೆ ಅವ್ಯವಸ್ಥೆ ಬಗ್ಗೆಯೂ ಆಕ್ರೋಶವ್ಯಕ್ತವಾಗಿದೆ. 2022ರಲ್ಲಿ ಸಂಸತ್ ಚುನಾವಣೆ ನಡೆಯಲಿದ್ದು, ಅದರಲ್ಲಿ ಗೆಲ್ಲುವ ಕನಸನ್ನು ಬೋಲ್ಸೊನಾರೊ ಕಾಣುತ್ತಿದ್ದಾರೆ. ಹೀಗಾಗಿ ನಿರ್ಬಂಧ ವಿಧಿಸಿಲ್ಲ. ಪರಿಣಾಮ ಸಾವು ನೋವು ಹೆಚ್ಚಾಗಿದೆ.
ಫ್ರಾನ್ಸ್ನಲ್ಲಿ ಕರೊನಾ ಕೇಸ್ಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಕಠಿಣ ಲಾಕ್ಡೌನ್ ಮತ್ತು ಇತರೆ ನಿರ್ಬಂಧಗಳನ್ನು ಹೇರಲಾಗಿತ್ತು. ಏಪ್ರಿಲ್ ತಿಂಗಳಲ್ಲಿ ಲಾಕ್ಡೌನ್ ಜಾರಿಯಲ್ಲಿತ್ತು. ಮೇ ಆರಂಭದಿಂದಲೇ ಹಂತ ಹಂತವಾಗಿ ಲಾಕ್ಡೌನ್ ತೆರವುಗೊಳಿಸುವ ಕೆಲಸವನ್ನು ಫ್ರಾನ್ಸ್ ಸರ್ಕಾರ ಮಾಡುತ್ತ ಬಂದಿದೆ. ಕಟ್ಟುನಿಟ್ಟಿನ ಕ್ರಮಗಳ ಕಾರಣ ಹೊಸ ಕೇಸ್ಗಳ ಸಂಖ್ಯೆ ಇಳಿಕೆಯಾಗಿದೆ. ಲಸಿಕೆ ಹಾಕಿಸುವ ಅಭಿಯಾನವೂ ಪ್ರಗತಿಯಲ್ಲಿದೆ.
ರಷ್ಯಾದಲ್ಲಿ ಕರೊನಾ ಸೋಂಕು ಮೇಲ್ನೋಟಕ್ಕೆ ನಿಯಂತ್ರಣದಲ್ಲಿರುವಂತೆ ಇದೆ. ಆದರೆ, ಸಾವು-ನೋವು, ಸೋಂಕಿನ ಲೆಕ್ಕಾಚಾರದಲ್ಲಿ ರಷ್ಯಾ ಸರ್ಕಾರ ಪಾರದರ್ಶಕತೆ ಕಾಯ್ದುಕೊಂಡಿಲ್ಲ ಎಂಬ ಆರೋಪವಿದೆ. ಉಳಿದಂತೆ ಕೋವಿಡ್ ನಿಯಂತ್ರಣಕ್ಕೆ ಉಳಿದೆಲ್ಲ ರಾಷ್ಟ್ರಗಳಂತೆ ರಷ್ಯಾದಲ್ಲೂ ನಿರ್ಬಂಧಗಳು, ಮುಂಜಾಗ್ರತಾ ಕ್ರಮಗಳು ಜಾರಿಯಲ್ಲಿವೆ. ಲಸಿಕೆ ಅಭಿಯಾನವೂ ಪ್ರಗತಿಯಲ್ಲಿದ್ದು, ರಷ್ಯಾದಲ್ಲೇ ಅಭಿವೃದ್ಧಿಪಡಿಸಿದ ಸ್ಪುಟ್ನಿಕ್ 5 ಲಸಿಕೆಯನ್ನು ಅದು ಭಾರತವೂ ಸೇರಿ ವಿವಿಧ ದೇಶಗಳಿಗೆ ರಫ್ತು ಮಾಡುತ್ತಿದೆ.